ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗಳ ಮೇಲೆ ಮುಗಿಬಿದ್ದ ಕಾಂಗ್ರೆಸ್‌

ಶಿವರಾಜ್‌ ಸಿಂಗ್‌ ಚೌಹಾಣ್‌, ವಸುಂಧರಾ ರಾಜೇ, ರಮಣ್‌ ಸಿಂಗ್‌ಗೆ ಅವರವರ ಕ್ಷೇತ್ರದಲ್ಲಿ ಭಾರಿ ಸವಾಲು
Last Updated 18 ನವೆಂಬರ್ 2018, 20:07 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ನಾಯಕರ ವಿರುದ್ಧ ಅವರಿಗೆ ಸವಾಲು ಒಡ್ಡಬಲ್ಲಂತಹ ಉಮೇದುವಾರರನ್ನು ಕಣಕ್ಕೆ ಇಳಿಸದಿರುವ ಅಲಿಖಿತ ಪರಂಪರೆಯೊಂದು ಭಾರತದ ರಾಜಕಾರಣದಲ್ಲಿ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅದು ಬದಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ.

ನರೇಂದ್ರ ಮೋದಿ ಅವರ ವಿರುದ್ಧ ವಾರಾಣಸಿಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ತೊಡೆ ತಟ್ಟಿದ್ದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗುವ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು.

ಇಂತಹುದೇ ಕಾರ್ಯತಂತ್ರವನ್ನು ಕಾಂಗ್ರೆಸ್‌ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಛತ್ತೀಸಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅನುಸರಿಸುತ್ತಿದೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಬಿಜೆಪಿಯ ಪ್ರಭಾವಿ ಮುಖಂಡರಾಗಿದ್ದ ಮಾನವೇಂದ್ರ ಸಿಂಗ್‌, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಮಾಜಿ ಉಪಮುಖ್ಯ ಮಂತ್ರಿ ಸುಭಾಷ್‌ ಯಾದವ್‌ ಮಗ, ಮಧ್ಯಪ್ರದೇಶ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಅರುಣ್‌ ಯಾದವ್‌ ಅವರು ಸವಾಲು ಒಡ್ಡುತ್ತಿದ್ದಾರೆ. ಛತ್ತೀಸಗಡ ಮುಖ್ಯಮಂತ್ರಿ ರಮಣ್‌ ಸಿಂಗ್‌ ವಿರುದ್ಧ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ ಕರುಣಾ ಶುಕ್ಲಾ ಕಣದಲ್ಲಿದ್ದಾರೆ.

ಈ ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳೇ ಪ್ರಚಾರದ ಸಾರಥಿಗಳು. ಅವರ ಮೇಲೆ ಒತ್ತಡ ಹೇರಿ ಅವರವರ ಕ್ಷೇತ್ರಕ್ಕೇ ಅವರನ್ನು ಕಟ್ಟಿಹಾಕುವುದು ಮತ್ತು ಉಳಿದೆಡೆ ಹೆಚ್ಚು ಪ್ರಚಾರ ಮಾಡಲು ಅವಕಾಶ ಸಿಗದಂತೆ ಮಾಡುವುದು ಕಾಂಗ್ರೆಸ್‌ನ ಲೆಕ್ಕಾಚಾರ. ಜತೆಗೆ, ಹಿರಿಯ ಮುಖಂಡರ ವಿರುದ್ಧ ನೇರಾನೇರ ಹಣಾಹಣಿಗೆ ಸಿದ್ಧ ಎಂಬ ಸಂದೇಶ ನೀಡುವ ಉದ್ದೇಶವೂ ಇದೆ.

ಇಲ್ಲಿ ಗಮನಿಸಬಹುದಾದ ಇನ್ನೊಂದು ಅಂಶವೂ ಇದೆ. ಈ ಮೂವರ ಪೈಕಿ ಇಬ್ಬರು ಬಹುಕಾಲ ಬಿಜೆಪಿಯಲ್ಲಿಯೇ ಇದ್ದು ಇತ್ತೀಚೆಗೆ ಆ ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದವರು. ಬಿಜೆಪಿಯ ಸ್ಥಾಪಕರಲ್ಲಿ ಒಬ್ಬರಾದ ಜಸ್ವಂತ್‌ ಸಿಂಗ್ ಮಗ ಮಾನವೇಂದ್ರ, ಶಿವ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸೆಪ್ಟೆಂಬರ್‌ ತಿಂಗಳಲ್ಲಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಕರುಣಾ ಶುಕ್ಲಾ ಅವರು 30 ವರ್ಷ ಬಿಜೆಪಿಯಲ್ಲಿದ್ದರು. 2014ರಲ್ಲಿ ಅವರು ಬಿಜೆಪಿ ತೊರೆದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜಸ್ವಂತ್‌ ಸಿಂಗ್‌ ಅವರಿಗೆ ರಾಜಸ್ಥಾನದ ಬಾರ್ಮೇರ್‌ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಪಕ್ಷೇತರರಾಗಿ ಸ್ಪರ್ಧಿಸಿ ಅವರು ಸೋತಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಮಾನವೇಂದ್ರ ಬಯಸಿದ್ದರು. ಆದರೆ, ಮಾನವೇಂದ್ರ ಅವರನ್ನು ರಾಜೇ ವಿರುದ್ಧ ನಿಲ್ಲಿಸುವ ಚತುರ ನಿರ್ಧಾರವನ್ನು ಕಾಂಗ್ರೆಸ್‌ ಮಾಡಿದೆ.

ಸ್ವಲ್ಪ ಕಾಲದಿಂದ ಶುಕ್ಲಾ ಅವರು ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ವಾಜಪೇಯಿ ಅವರ ಚಿತಾಭಸ್ಮದ ಕಲಶ ಯಾತ್ರೆಯನ್ನೂ ಅವರು ಟೀಕಿಸಿದ್ದರು. ವಾಜಪೇಯಿಯನ್ನು ಸಂಪೂರ್ಣ ಮರೆತಿದ್ದ ಬಿಜೆಪಿ ಈಗ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ಅವರು ಆರೋಪಿಸಿದ್ದರು.

‘ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಳಿಗೆ ತಮ್ಮ ಭದ್ರಕೋಟೆಯಲ್ಲಿಯೂ ಗೆಲುವು ಸುಲಭಕ್ಕೆ ದಕ್ಕಬಾರದು ಎಂಬುದು
ನಮ್ಮ ಗುರಿ. ರಾಜಸ್ಥಾನದಲ್ಲಿ ಬಿಜೆಪಿಯ ಸ್ಥಿತಿ ಕೆಟ್ಟದಾಗಿದೆ. ಉಳಿದೆರಡು ಕಡೆ ಭಾರಿ ಆಡಳಿತ ವಿರೋಧಿ ಅಲೆ ಇದೆ. ಮುಖ್ಯಮಂತ್ರಿ ಅಭ್ಯರ್ಥಿಗಳು ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ತಿಣುಕಾಡಲಿ ಎಂಬುದು ಕಾರ್ಯತಂತ್ರ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಆದರೆ, ತಮ್ಮ ಕ್ಷೇತ್ರ ಬುದ್ನಿಗೆ ಪ್ರಚಾರಕ್ಕೇ ಹೋಗುವುದಿಲ್ಲ ಎನ್ನುವ ಮೂಲಕ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಾಂಗ್ರೆಸ್‌ ಕಾರ್ಯತಂತ್ರಕ್ಕೆ ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್‌ ಒಡ್ಡಿರುವುದು ಸವಾಲೇ ಅಲ್ಲ ಎಂಬ ಮನೋಭಾವವನ್ನು ಅವರ ತೋರಿದ್ದಾರೆ.

ಸಾಲು ನಿಲ್ಲಬೇಕಿಲ್ಲ
ಮತದಾನ ಎಂದ ಕೂಡಲೇ ನೆನಪಾಗುವ ಚಿತ್ರ ಮತಗಟ್ಟೆಯ ಮುಂದೆ ಜನರ ಉದ್ದದ ಸಾಲು. ಮುಂದಿನ ದಿನಗಳಲ್ಲಿ ಇಂತಹ ಸಾಲು ಮರೆಯಾಗುವ ಎಲ್ಲ ಸಾಧ್ಯತೆಗಳೂ ಇವೆ.ಮಧ್ಯ ಪ್ರದೇಶ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸಿದೆ.

ಈ ಆ್ಯಪ್‌ ಬಳಸಿ ಮತ ಚಲಾಯಿಸಲು ಹೋಗುವ ಸಮಯವನ್ನು ಮತದಾರರು ನಿಗದಿ ಮಾಡಬಹುದು. ಅದೇ ಸಮಯಕ್ಕೆ ಮತಗಟ್ಟೆಗೆ ಹೋದರೆ ಸರತಿ ಸಾಲಿನಲ್ಲಿ ಕಾಯುವ ಅಗತ್ಯ ಇಲ್ಲ. ತಕ್ಷಣ ಮತ ಚಲಾಯಿಸಿ ಹಿಂದಿರುಗಬಹುದು. ಮಧ್ಯ ಪ್ರದೇಶದಲ್ಲಿ ಇದೇ 28ರಂದು ನಡೆಯುವ ಮತದಾನದಲ್ಲಿ ಎಲ್ಲ 230 ಕ್ಷೇತ್ರಗಳಲ್ಲಿ ಈ ಆ್ಯಪ್‌ ಬಳಕೆಯಾಗಲಿದೆ.ಮತಗಟ್ಟೆ ಮಟ್ಟದ ಅಧಿಕಾರಿಗಳು ಈ ಆ್ಯಪ್‌ ಅನ್ನು ನಿರ್ವಹಿಸಲಿದ್ದಾರೆ. ಸಮಯ ನಿಗದಿ ಮಾಡಿದ ಮತದಾರರು ಮತಗಟ್ಟೆಗೆ ಬಂದು ತಮ್ಮ ಗುರುತಿನ ಚೀಟಿ ಕೊಡಬೇಕು. ಆಗ ಅವರಿಗೆ ಟೋಕನ್‌ ನೀಡಲಾಗುವುದು. ಸಮಯ ಬರುವವರೆಗೆ ಅವರಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಲಾಗುವುದು.

‘ಮತದಾರರನ್ನು ಘನತೆಯಿಂದ ನಡೆಸಿಕೊಳ್ಳುವುದು ಈ ಆ್ಯಪ್‌ ಅಭಿವೃದ್ಧಿಯ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ಮತದಾರರೇ ರಾಜ ಅಥವಾ ರಾಣಿ. ಅದೇ ರೀತಿ ಅವರನ್ನು ನೋಡಿಕೊಳ್ಳಲಾಗುವುದು’ ಎಂದು ಜಂಟಿ ಮುಖ್ಯ ಚುನಾವಣಾ ಅಧಿಕಾರಿ ವಿಕಾಸ್‌ ನರ್ವಾಲ್‌ ತಿಳಿಸಿದ್ದಾರೆ.

ಜೇಟ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರೆ ಬಿಜೆಪಿಗೆ ಸೋಲೇ?
ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರೆ ಆ ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂಬ ‘ಮೂಢನಂಬಿಕೆ’ ಪ್ರಚಲಿತದಲ್ಲಿದೆ. ದೆಹಲಿ, ಬಿಹಾರ ಮತ್ತು ಪಂಜಾಬ್‌ ವಿಧಾನಸಭಾ ಚುನಾವಣೆಗೆ ಜೇಟ್ಲಿ ಅವರೇ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಸೋತಿತ್ತು. ಈ ಬಾರಿ ಮಧ್ಯ ಪ್ರದೇಶದ ಚುನಾವಣಾ ಪ್ರಣಾಳಿಕೆಯನ್ನು ಜೇಟ್ಲಿ ಅವರೇ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮಧ್ಯ ಪ್ರದೇಶದಲ್ಲಿಯೇ ಪ್ರಚಾರದಲ್ಲಿ ತೊಡಗಿದ್ದರು. ಹಾಗಿರುವಾಗ ಜೇಟ್ಲಿ ಅವರ ಕೈಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿಸಿದ್ದು ಯಾಕೆ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಜನ ಆಶೀರ್ವಾದ ಯಾತ್ರೆಗೆ ಉಜ್ಜೈನಿಯಲ್ಲಿ ಜುಲೈಯಲ್ಲಿ ಅಮಿತ್‌ ಶಾ ಅವರು ಚಾಲನೆ ನೀಡಿದ್ದರು. ಆದರೆ, ಜಬಲ್ಪುರದಲ್ಲಿ ಯಾತ್ರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಯಾತ್ರೆಯನ್ನು ಅಲ್ಲಿಗೇ ಮೊಟಕುಗೊಳಿಸಲಾಗಿತ್ತು.

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಅವರು ಮಧ್ಯ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿಲ್ಲ ಎಂಬುದೂ ಚರ್ಚೆಗೆ ಗ್ರಾಸವಾಗಿದೆ. ಅವರು ಪ್ರತಿನಿಧಿಸುತ್ತಿರುವ ವಿದಿಶಾ ಲೋಕಸಭಾ ಕ್ಷೇತ್ರವು ಶಿವರಾಜ್‌ ಸಿಂಗ್‌ ಚೌಹಾಣ್‌ ಸ್ಪರ್ಧಿಸುತ್ತಿರುವ ಬುದ್ನಿಯಿಂದ ಬಹಳ ದೂರವೇನೂ ಇಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಸುಷ್ಮಾ ಅವರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

‘ಕೈ’ ಕೋಟೆಯಲ್ಲಿ ಜೋಗಿ ವಿರಾಜಮಾನ
ಮರ್‌ವಾಹಿ: ಛತ್ತೀಸಗಡದ ಮರ್‌ವಾಹಿ ವಿಧಾನಸಭಾ ಕ್ಷೇತ್ರ ಈವರೆಗೆ ಕಾಂಗ್ರೆಸ್‌ನ ಕೋಟೆ ಎನಿಸಿಕೊಂಡಿತ್ತು. ಆದರೆ, ಈ ಬಾರಿ ಇಲ್ಲಿನ ಮನೆಗಳಲ್ಲಿ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ಫೋಟೊ, ಅವರ ಜನತಾ ಕಾಂಗ್ರೆಸ್‌ ಛತ್ತೀಸಗಡ (ಜೆಸಿಸಿ) ಪಕ್ಷದ ಚಿಹ್ನೆ ರಾರಾಜಿಸುತ್ತಿವೆ.

ಬುಡಕಟ್ಟು ಜನರೇ ಹೆಚ್ಚಾಗಿರುವ ಈ ಕ್ಷೇತ್ರದಿಂದ ಜೋಗಿ ಸ್ಪರ್ಧಿಸುತ್ತಿದ್ದಾರೆ. ಛತ್ತೀಸಗಡದ ಮೊದಲ ಮುಖ್ಯಮಂತ್ರಿ ಎಂಬ ಹಿರಿಮೆ ಹೊಂದಿರುವ ಜೋಗಿ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಏರುವ ಉತ್ಸಾಹದಲ್ಲಿದ್ದಾರೆ. ಜೆಸಿಸಿ–ಬಿಎಸ್‌ಪಿ–ಸಿಪಿಐ ಮೈತ್ರಿಕೂಟವು ಅಧಿಕಾರ ಹಿಡಿಯಲಿದೆ ಎಂಬುದು ಅವರ ವಿಶ್ವಾಸ. ಕಳೆದ ಬಾರಿ ಈ ಕ್ಷೇತ್ರದಿಂದ ಅಜಿತ್‌ ಜೋಗಿ ಅವರ ಮಗ ಅಮಿತ್‌ ಜೋಗಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಛತ್ತೀಸಗಡದಲ್ಲಿ ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚಿನ ಅಂತರದ ಗೆಲುವು ಅವರದಾಗಿತ್ತು. ಮರ್‌ವಾಹಿ ಮತ್ತು ಎಸ್‌ಸಿ ಮತ್ತು ಎಸ್‌ಟಿ ಮೀಸಲಾದ ಇತರ 38 ಕ್ಷೇತ್ರಗಳಲ್ಲಿನ ರಾಜಕೀಯ ಸಮೀಕರಣ ಈ ಬಾರಿ ಬದಲಾದಂತೆ ಕಾಣಿಸುತ್ತಿದೆ.

‘ಮರ್‌ವಾಹಿ ಕ್ಷೇತ್ರ ಜೋಗಿ ಅವರ ಭದ್ರಕೋಟೆಯೇ ಹೊರತು ಕಾಂಗ್ರೆಸ್‌ನದ್ದಲ್ಲ. ಹಾಗಾಗಿ ಅಲ್ಲಿ ಅವರನ್ನು ಸೋಲಿಸುವುದು ಸಾಧ್ಯವೇ ಇಲ್ಲ’ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಹೇಳುತ್ತಾರೆ. ಅಜಿತ್‌ ಜೋಗಿ ವಿರುದ್ಧ ಕಾಂಗ್ರೆಸ್‌ ಪಕ್ಷವು ಗೌರೆಲ್ಲಾದ ಸರಪಂಚ ಗುಲಾಬ್‌ ಸಿಂಗ್‌ ರಾಜ್‌ ಅವರನ್ನು ಕಣಕ್ಕಿಳಿಸಿದ್ದರೆ ಬಿಜೆಪಿ ಅಭ್ಯರ್ಥಿ ಭನ್ವರ್‌ ಸಿಂಗ್‌. ಇವರು ಅವಿಭಜಿತ ಮಧ್ಯ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದರು.

ಮರ್‌ವಾಹಿಯ ಪಕ್ಕದ ಕ್ಷೇತ್ರ ಕೋಟ. ಇದು ಕೂಡ ಕಾಂಗ್ರೆಸ್‌ ಪ್ರಭಾವದ ಕ್ಷೇತ್ರ. ಜೋಗಿ ಅವರ ಹೆಂಡತಿ ರೇಣು ಸಿಂಗ್‌ ಅವರು ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಗೆದ್ದಿದ್ದರು. ಈ ಬಾರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿಲ್ಲ. ಹಾಗಾಗಿ ಅವರು ಜೆಸಿಸಿ ಅಭ್ಯರ್ಥಿಯಾಗಿದ್ದಾರೆ. ಮರ್‌ವಾಹಿಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಅಲ್‌ಕತರ ಕ್ಷೇತ್ರದಲ್ಲಿ ಜೋಗಿ ಅವರ ಸೊಸೆ ರಿಚಾ ಜೋಗಿ ಬಿಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರ ಮೇಲೆ ಜೋಗಿ ಕುಟುಂಬಕ್ಕೆ ಸಾಕಷ್ಟು ಹಿಡಿತ ಇದೆ. ಹಾಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಅವರ ಗೆಲುವು ಖಚಿತ ಎನ್ನಲಾಗುತ್ತಿದೆ.

*
ಈಗ ಆ್ಯಪ್‌ ಮೂಲಭೂತ ಸ್ವರೂಪದಲ್ಲಿದೆ. ಆದರೆ, ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಸರತಿ ಸಾಲೇ ಇಲ್ಲದ ರೀತಿಯಲ್ಲಿ ಮತದಾನ ನಡೆಸಲು ಸಾಧ್ಯವಾಗಲಿದೆ.
–ವಿಕಾಸ್‌ ನರ್ವಾಲ್‌, ಮಧ್ಯ ಪ್ರದೇಶದ ಜಂಟಿ ಮುಖ್ಯ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT