ಕಾಶ್ಮೀರದಲ್ಲಿ ‍ಪ್ರತಿಭಟನೆ: ಜನಜೀವನ ಅಸ್ತವ್ಯಸ್ತ

7
ಹಿಜ್ಬುಲ್‌ ಮುಜಾಹಿದೀನ್‌ ಕಮಾಂಡರ್‌ ಮನನ್ ಬಷೀರ್‌ ಹತ್ಯೆ

ಕಾಶ್ಮೀರದಲ್ಲಿ ‍ಪ್ರತಿಭಟನೆ: ಜನಜೀವನ ಅಸ್ತವ್ಯಸ್ತ

Published:
Updated:
Deccan Herald

ಶ್ರೀನಗರ: ಹಿಜ್ಬುಲ್‌ ಮುಜಾಹಿದೀನ್‌ ಕಮಾಂಡರ್‌ ಮನನ್ ಬಷೀರ್‌ ಹತ್ಯೆ ಖಂಡಿಸಿ ಪ್ರತ್ಯೇಕತಾವಾದಿಗಳು ಶುಕ್ರವಾರ ಕರೆನೀಡಿದ ಪ್ರತಿಭಟನೆಯಿಂದ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಸಯ್ಯದ್‌ ಅಲಿಶಾ ಗೀಲಾನಿ, ಮಿರ್ವೈಜ್‌ ಉಮರ್‌ ಫಾರೂಕ್‌, ಮೊಹಮ್ಮದ್‌ ಯಾಸೀನ್‌ ಮಲ್ಲಿಕ್ ನೇತೃತ್ವದ ಜಂಟಿ ಸಮಿತಿ ಪ್ರತಿಭಟನೆಗೆ ಕರೆನೀಡಿತ್ತು. ಇದರಿಂದ, ಶಾಲಾ ಕಾಲೇಜುಗಳು, ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆ ಸಂಪರ್ಕ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌.ಡಿ ವಿದ್ಯಾರ್ಥಿಯಾಗಿದ್ದ 27 ವರ್ಷದ ಮನನ್‌ ಬಷೀರ್‌ ಉಗ್ರಗಾಮಿ ಸಂಘಟನೆಗೆ ಸೇರಿಕೊಂಡಿದ್ದ. ಗುರುವಾರ ಕುಪ್ವಾರಾದಲ್ಲಿ ಸೇನೆ ನಡೆಸಿದ ಎನ್‌ಕೌಂಟರ್‌ನಲ್ಲಿ ಮನನ್‌ ಹಾಗೂ ಆತನ ಸಹಚರ ಆಶೀಕ್‌ ಹುಸೇನ್‌ ಸಾವನ್ನಪ್ಪಿದ್ದನು.

ಕಣಿವೆ ಪ್ರದೇಶದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಸೂಕ್ಷ್ಮ ಮತ್ತು ಅತೀಸೂಕ್ಷ ಪ್ರದೇಶದಲ್ಲಿ ಸೇನೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್‌ ಗಸ್ತುವ್ಯವಸ್ಥೆಯನ್ನು ಬಲಪಡಿಸಲಾಗಿತ್ತು.

ಮೂವರು ಕಾಶ್ಮೀರ ವಿದ್ಯಾರ್ಥಿಗಳ ಅಮಾನತು

ಅಲಿಗಡ, ಉತ್ತರಪ್ರದೇಶ: ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಹಿಜ್ಬುಲ್‌ ಮುಜಾಹಿದೀನ್‌ ಕಮಾಂಡರ್‌ ಮನನ್ ಬಷೀರ್‌ ಪರ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಮುಂದಾದ ಮೂವರು ಕಾಶ್ಮೀರ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.

‘ಕಾಶ್ಮೀರದ ಕೆಲವು ವಿದ್ಯಾರ್ಥಿಗಳು ಕೆನೆಡಿ ಹಾಲ್‌ ಮುಂಭಾಗ ಸೇರಿ ವಾನಿ ಪರವಾಗಿ ಶ್ರದ್ಧಾಂಜಲಿ ಸಭೆ ನಡೆಸಲು ಮುಂದಾಗಿದ್ದರು. ಈ ವೇಳೆ ವಿ.ವಿಯ ವಿದ್ಯಾರ್ಥಿಗಳು ಸ್ಥಳಕ್ಕೆ ಬಂದು ಕಾರ್ಯಕ್ರಮಕ್ಕೆ ತಡೆಒಡ್ಡಿದರು’ ಎಂದು ವಿವಿಯ ವಕ್ತಾರ ಹಾಗೂ ಪ್ರಾಧ್ಯಾಪಕ ಶಫೆ ಕಿದ್ವಾಯಿ ತಿಳಿಸಿದರು.

‘ಕಾಶ್ಮೀರದ ವಿದ್ಯಾರ್ಥಿಗಳು ಹಾಗೂ ಎಎಂಯು ವಿದ್ಯಾರ್ಥಿ ಘಟಕದ ಮುಖಂಡರ ಪರಸ್ಪರ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಕಾಶ್ಮೀರದ ವಿದ್ಯಾರ್ಥಿಗಳು ಅಲ್ಲಿಂದ ತೆರಳಿದರು. ಕಾನೂನುಬಾಹಿರವಾಗಿ ಗುಂಪುಗೂಡಿದ ಆರೋಪದ ಮೇಲೆ ಮೂವರನ್ನು ಅಮಾನತುಗೊಳಿಸಲಾಗಿದೆ’ ಎಂದು ಅವರು ತಿಳಿಸಿದರು.

‘ದೇಶದ ವಿರುದ್ಧ ಯಾವುದೇ ಚಟುವಟಿಕೆಗೆ ವಿ.ವಿಯ ಒಳಗಡೆ ಅವಕಾಶ ನೀಡುವುದಿಲ್ಲ, ಇಂತಹ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಕಿದ್ವಾಯಿ ಎಚ್ಚರಿಕೆ ನೀಡಿದರು.

‘ಭಯೋತ್ಪಾದಕನ ಪರ ಪ್ರಾರ್ಥನೆ ಸಲ್ಲಿಸಲು ಮುಂದಾದ ವಿದ್ಯಾರ್ಥಿಗಳನ್ನು ವಿ.ವಿಯಿಂದಲೇ ವಜಾಗೊಳಿಸಬೇಕು’ ಎಂದು ಸ್ಥಳೀಯ ಸಂಸದ ಸತೀಶ್‌ ಗೌತಮ್‌ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !