ಶನಿವಾರ, ನವೆಂಬರ್ 23, 2019
17 °C
ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಪ್ರವಾಹ

ಕಬ್ಬು ಅರೆಯುವ ಕಾರ್ಯ ವಿಳಂಬ

Published:
Updated:
Prajavani

ನವದೆಹಲಿ: ಪ್ರವಾಹ ಪರಿಸ್ಥಿತಿ ಮತ್ತು ಬೆಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯುವುದು ಒಂದು ತಿಂಗಳಿಗೂ ಹೆಚ್ಚು ವಿಳಂಬವಾಗಲಿದೆ.

‘ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈಚೆಗೆ ಉಂಟಾದ ಪ್ರವಾಹದಿಂದಾಗಿ ಕಬ್ಬು ಅರೆಯುವುದು ವಿಳಂಬವಾಗಲಿದೆ’ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಮಹಾನಿರ್ದೇಶಕ ಅವಿನಾಶ್‌ ವರ್ಮಾ ತಿಳಿಸಿದ್ದಾರೆ.

‘ರಾಜ್ಯ ಸರ್ಕಾರ ದಿನಾಂಕವನ್ನು ನಿಗದಿಪಡಿಸದ ಕಾರಣ ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿಲ್ಲ. ಜತೆಗೆ, ಈ ಬಾರಿ ಮಹಾರಾಷ್ಟ್ರದಲ್ಲಿ ಕಬ್ಬು ಕಡಿಮೆ ಇರುವುದು ಸಹ ಇನ್ನೊಂದು ಕಾರಣ’ ಎಂದು ಅವರು ಹೇಳಿದ್ದಾರೆ.

‘ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಎರಡನೇ ರಾಜ್ಯವಾದ ಮಹಾರಾಷ್ಟ್ರದಲ್ಲಿ ಈ ಬಾರಿ ಕುಸಿತವಾಗಲಿದೆ. ದೇಶದಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಉತ್ತರ ಪ್ರದೇಶದಲ್ಲಿ ಮುಂದಿನ ವಾರ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ಸಾಮಾನ್ಯವಾಗಿ ದೀಪಾವಳಿ ಬಳಿಕ ಕಬ್ಬು ಅರೆಯುವುದು ಆರಂಭವಾಗುತ್ತದೆ’ ಎಂದು ವಿವರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಬಾರಿಯೂ 1.2 ಕೋಟಿ ಟನ್‌ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಆದರೆ, ಒಟ್ಟಾರೆಯಾಗಿ ದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಉತ್ಪಾದನೆ 2.8 ಕೋಟಿ ಟನ್‌ಗೆ ಕುಸಿಯುವ ಸಾಧ್ಯತೆ ಇದೆ ಎಂದು ಸರ್ಕಾರ ಅಂದಾಜಿಸಿದೆ.

ಅಂಕಿ–ಅಂಶ
4.2 ಲಕ್ಷ ಹೆಕ್ಟೇರ್‌: 2019–20ರಲ್ಲಿ ಕರ್ನಾಟಕದಲ್ಲಿನ ಕಬ್ಬು ಬೆಳೆದ ಪ್ರದೇಶ
5.02: 2018–19ರಲ್ಲಿ ಕರ್ನಾಟಕದಲ್ಲಿನ ಕಬ್ಬು ಬೆಳೆದ ಪ್ರದೇಶ
7.7ಲಕ್ಷ ಹೆಕ್ಟೇರ್‌: 2019–20ರಲ್ಲಿ ಮಹಾರಾಷ್ಟ್ರದಲ್ಲಿ ಕಬ್ಬು ಬೆಳೆದ ಪ್ರದೇಶ
11.5 ಲಕ್ಷ ಹೆಕ್ಟೇರ್‌: 2018–19ರಲ್ಲಿ ಮಹಾರಾಷ್ಟ್ರದಲ್ಲಿ ಕಬ್ಬು ಬೆಳೆದ ಪ್ರದೇಶ

ಪ್ರತಿಕ್ರಿಯಿಸಿ (+)