ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತಿಗೆ ಜಾರಿದ ಅಭ್ಯರ್ಥಿಗಳು

ಕುಟುಂಬ ಸದಸ್ಯರೊಂದಿಗೆ ಊಟ, ಉಪಹಾರ,
Last Updated 14 ಮೇ 2018, 10:14 IST
ಅಕ್ಷರ ಗಾತ್ರ

ಗಂಗಾವತಿ: ಕಳೆದ 20 ದಿನದಿಂದ ಬಿಡುವಿಲ್ಲದೇ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡಂತೆ ಓಡಾಡಿ ದಣಿದಿದ್ದ ನಾನಾ ಪಕ್ಷದ ಅಭ್ಯರ್ಥಿಗಳು ಭಾನುವಾರ ಇಡೀ ದಿನ ವಿಶ್ರಾಂತಿಯ ಮೊರೆ ಹೋದರು.

ಕಳೆದ 20 ದಿನದಿಂದ ಕುಟುಂಬ ಸದಸ್ಯರಿಂದ ದೂರವಿದ್ದು, ಸತತವಾಗಿ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಲು, ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಇಡೀ ದಿನ ವಿಶ್ರಾಂತಿಗಾಗಿಯೇ ಮೀಸಲಿಟ್ಟರು.

ಜೆಡಿಎಸ್ ಅಭ್ಯರ್ಥಿ ಕರಿಯಣ್ಣ ಸಂಗಟಿ ಮಾತ್ರ  ಸ್ವಗ್ರಾಮದ ಯಲಮಗೇರಿಯ ನಿವಾಸಕ್ಕೆ ಬಂದ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿ ಗಳನ್ನು ಮಾತನಾಡಿಸಿ ಚುನಾವಣೆಯ ಸಾಧಕ- ಬಾಧಕ ಚರ್ಚೆ ನಡೆಸಿದರು.

‘ಶನಿವಾರ ರಾತ್ರಿ ಎರಡು ಗಂಟೆಗೆ ಮಲಗಿದ್ದ ಅಪ್ಪಾಜಿ (ಕರಿಯಣ್ಣ), ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ನಿತ್ಯ ಚಟುವಟಿಕೆ ಮುಗಿಸಿ ಬೆಳಿಗ್ಗೆ ಆರು ಗಂಟೆಯಿಂದಲೇ ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು’ ಎಂದು ಜೆಡಿಎಸ್ ಅಭ್ಯರ್ಥಿಯ ಪುತ್ರ ಮಹಾಂತೇಶ ಸಂಗಟಿ ಹೇಳಿದರು.

ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಬೆಳಗ್ಗೆ ಎಂದಿನಂತೆ ಏಳು ಗಂಟೆಗೆ ಎದ್ದು ಕಾರ್ಯಕರ್ತರೊಂದಿಗೆ ಕೆಲಕಾಲ ಮಾತನಾಡಿದರು. ಬಳಿಕ ಕೆಲ ಹೊತ್ತು ಮೊಮ್ಮಕ್ಕಳೊಂದಿಗೆ ಉಪಹಾರ ಸೇವಿಸಿ, ಆಟವಾಡಿ ದಣಿವು ನೀಗಿಸಿಕೊಂಡು ಮತ್ತೆ ಮಧ್ಯಾಹ್ನದವರೆಗೆ ವಿಶ್ರಾಂತಿಗೆ ಜಾರಿದರು.

ಸಂಜೆಯ ಬಳಿಕ ಯಾವ ವಾರ್ಡ್‌, ಗ್ರಾಮಗಳಲ್ಲಿ ಎಷ್ಟೆಷ್ಟು ಮತ ಬಿಜೆಪಿಗೆ ಲಭಿಸಬಹುದು, ಅನ್ಯ ಪಕ್ಷದವರಿಗೆ ಎಷ್ಟು ಮತ ಸಿಕ್ಕಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದ ಮುನವಳ್ಳಿ, ಮಂಗಳವಾರ ನಡೆಯಲಿರುವ ಮತ ಎಣಿಕೆ ಕಾರ್ಯದ ಸಿದ್ಧತೆಯಲ್ಲಿದ್ದರು.

ಚುನಾವಣೆ ಹಿನ್ನೆಲೆಯಲ್ಲಿ ತಡರಾತ್ರಿವರೆಗಿನ ನಿರಂತರ ಸಭೆ, ಪ್ರಚಾರ, ಕಾರ್ಯಕರ್ತರ ಸಭೆಯಿಂದಾಗಿ ಬಹುವಾಗಿ ದಣಿದಿದ್ದ ಶಾಸಕ ಇಕ್ಬಾಲ್ ಅನ್ಸಾರಿ ಭಾನುವಾರವಿಡೀ ಬಹುಪಾಲು ತಮ್ಮ ನಿವಾಸದ ಮೇಲ್ಮಹಡಿಯಲ್ಲಿ ಕಾಲ ಕಳೆದರು.
ಪತ್ನಿ, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಉಪಹಾರ, ಊಟ ಸೇವಿಸಿ ಬಳಿಕ ವಿಶ್ರಾಂತಿಗೆ ಜಾರಿದರು.

ಸಂಜೆಯ ಹೊತ್ತಿಗೆ ಕೆಲ ಬೆಂಬಲಿಗರು, ಮುಖಂಡರೊಂದಿಗೆ ಮೌಖಿಕ ಮತ್ತಷ್ಟು ಜನರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮತಲೆಕ್ಕಾಚಾರ ನಡೆಸಿದರು.

ಜಿಲ್ಲೆಯ ಏಕೈಕ ಮಹಿಳಾ ಅಭ್ಯರ್ಥಿ ಕನಕಗಿರಿ ಕ್ಷೇತ್ರದ ಜೆಡಿಎಸ್ ಪಕ್ಷದ ಮಂಜುಳಾ ರವಿಕುಮಾರ, ಭಾನುವಾರ ಸಂಪೂರ್ಣ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಸಮಯ ಮೀಸಲಿಟ್ಟರು. ಎಂದಿನಂತೆ ಅಡುಗೆ, ಪಾತ್ರೆ, ಬಟ್ಟೆ ತೊಳೆಯುವಂಥ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT