ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ನಡುಕ ಹುಟ್ಟಿಸಿದ ಸನ್ನಿ

Last Updated 13 ಮೇ 2019, 19:38 IST
ಅಕ್ಷರ ಗಾತ್ರ

ಗುರುದಾಸ್‌ಪುರ (ಪಂಜಾಬ್‌): ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಗುರುದಾಸ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ಸನ್ನಿ ಡಿಯೋಲ್‌, ಕಾಂಗ್ರೆಸ್‌ ಅಭ್ಯರ್ಥಿಯಲ್ಲಿ ನಡುಕ ಹುಟ್ಟಿಸಿದ್ದಾರೆ.

ಸನ್ನಿ ಡಿಯೋಲ್‌ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದ್ದು, ಅವರ ಪ್ರಚಾರ ರ‍್ಯಾಲಿಗಳಿಗೆ ಜನರು ಭಾರಿ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ತಂದೆ ಧರ್ಮೇಂದ್ರ ಹಾಗೂ ಸಹೋದರ ಬಾಬಿ ಡಿಯೋಲ್‌ ಅವರೂ ಪ್ರಚಾರ ರ್‍ಯಾಲಿಗಳಲ್ಲಿ ಸನ್ನಿಗೆ ಸಾಥ್‌ ನೀಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಹೆದರಿಕೊಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಜಾಖಡ್‌ ಅವರು ನೆರವಿಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ಮೊರೆಹೋಗಿದ್ದು, ಕ್ಷೇತ್ರದಲ್ಲಿ ಪ್ರಿಯಾಂಕಾ ಅವರಿಂದ ರ್‍ಯಾಲಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಗುರುದಾಸ್‌ಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂಬತ್ತು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 2017ರಲ್ಲಿ ನಡೆದ ವಿಧಾನ
ಸಭಾ ಚುನಾವಣೆಯಲ್ಲಿ ಇವುಗಳಲ್ಲಿ 7 ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ. ಇಲ್ಲಿಂದ ಆಯ್ಕೆಯಾದವರಲ್ಲಿ ಮೂವರು ರಾಜ್ಯದಲ್ಲಿ ಸಚಿವರೂ ಆಗಿದ್ದಾರೆ. ಹೀಗಿದ್ದರೂ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‌ ಅಭ್ಯರ್ಥಿಗೆ ಆತಂಕ ಎದುರಾಗಿದೆ.

ಸನ್ನಿಯ ರ್‍ಯಾಲಿಗೆ ಬರುವ ಜನರೆಲ್ಲರೂ ಅವರಿಗೆ ಮತ ನೀಡಲಾರರು ಎಂದು ಕಾಂಗ್ರೆಸ್‌ ಭಾವಿಸಿದೆ. ‘ನಟ ಸನ್ನಿ ಡಿಯೋಲ್‌ ಅವರನ್ನು ನೋಡಲು ಅವರ ಅಭಿಮಾನಿಗಳು ರ್‍ಯಾಲಿಗಳಿಗೆ ಬಂದಿರಬಹುದು’ ಎಂದು ಪಕ್ಷದವರು ಹೇಳುತ್ತಿದ್ದರೂ ‘ಇವೆಲ್ಲವೂ ಬಿಜೆಪಿಯ ಮತಗಳಾಗಿ ಪರಿವರ್ತನೆಯಾದರೆ’ ಎಂಬ ಭಯವೂ ಅವರನ್ನು ಕಾಡಲಾರಂಭಿಸಿದೆ.

ಕಾಂಗ್ರೆಸ್‌ ನಾಯಕರ ಮನವಿಯನ್ನು ಸ್ವೀಕರಿಸಿದ ಪ್ರಿಯಾಂಕಾ, ಗುರುದಾಸ್‌ಪುರದಲ್ಲಿ ಮಂಗಳವಾರ ನಡೆಯಲಿರುವ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ ಎಂದು ಹೇಳಲಾಗಿದೆ. ‘ಹಿಂದೂಗಳು ಬಹುಸಂಖ್ಯೆಯಲ್ಲಿರುವ ಹಾಗೂ ಬಿಜೆಪಿಯ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಪ್ರಿಯಾಂಕಾ ರ್‍ಯಾಲಿ ನಡೆಸಲಿದ್ದಾರೆ. ಈ ಭಾಗದಲ್ಲಿ ನೆಲೆಸಿರುವ ಮಾಜಿ ಸೈನಿಕರು ಹಾಗೂ ಯುವಕರ ಜೊತೆ ಪ್ರಿಯಾಂಕಾ ಸಂವಾದವನ್ನೂ ನಡೆಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಗುರುದಾಸ್‌ಪುರ ಕ್ಷೇತ್ರದಲ್ಲಿ ತಮ್ಮ ಪಕ್ಷದಿಂದ ನಟರನ್ನು ಕಣಕ್ಕೆ ಇಳಿಸಿದ ಸಂದರ್ಭದಲ್ಲೆಲ್ಲ ಬಿಜೆಪಿ ಇಲ್ಲಿ ಗೆಲುವು ಸಾಧಿಸಿದೆ. ನಟ ವಿನೋದ್‌ ಖನ್ನಾ ಅವರು ಸತತ ಮೂರು ಬಾರಿ ಈ ಕ್ಷೇತ್ರದಿಂದ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಸ್ವಾಮ್ಯವನ್ನು ಅಂತ್ಯಗೊಳಿಸಿದ್ದರು. ಈಗ ಈ ಕ್ಷೇತ್ರಕ್ಕೆ ಸನ್ನಿ ಡಿಯೋಲ್‌ ಸೂಕ್ತ ವ್ಯಕ್ತಿ ಎನಿಸಿದ್ದಾರೆ. ಅವರ ‘ಬಾರ್ಡರ್‌’ ಹಾಗೂ ‘ಗದರ್‌’ ಸಿನಿಮಾಗಳು ದೇಶಪ್ರೇಮವನ್ನು ಸಾರುವಂಥವುಗಳಾಗಿದ್ದು ಬಿಜೆಪಿಯ ‘ರಾಷ್ಟ್ರೀಯತೆ’ಯ ಸುತ್ತಲಿನ ಸಂಕಥನಕ್ಕೆ ಪೂರಕವಾಗಿವೆ.

‘ಗುರುದಾಸ್‌ಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುನಿಲ್‌ ಜಾಖಡ್‌ ಸ್ಪರ್ಧಿಸುತ್ತಾರೆ ಎಂಬುದು ಮೊದಲೇ ಗೊತ್ತಿದ್ದರೆ, ಇಲ್ಲಿಂದ ಸ್ಪರ್ಧಿಸಬೇಡ ಎಂದು ಸನ್ನಿಗೆ ಸಲಹೆ ನೀಡುತ್ತಿದ್ದೆ’ ಎಂದು ಧರ್ಮೇಂದ್ರ ಹೇಳಿದ್ದಾರೆ ಎಂದೂ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕ್ಯಾಪ್ಟನ್‌ ಅಮರಿಂದರ್‌ಗೂ ಚಿಂತೆ

ಕ್ಷೇತ್ರದಲ್ಲಿ ಸನ್ನಿ ಡಿಯೋಲ್‌ ಜನಪ್ರಿಯತೆ ಹೆಚ್ಚುತ್ತಿರುವುದು ಪಂಜಾಬ್‌ ಮುಖ್ಯಮಂತ್ರಿ ಕ್ಯಾ. ಅಮರಿಂದರ್‌ ಸಿಂಗ್‌ ಅವರಿಗೂ ಚಿಂತೆಯ ವಿಚಾರವಾಗಿದೆ. ಭಾನುವಾರ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ಸನ್ನಿ ಹೊರಗಿನ ವ್ಯಕ್ತಿ, ಈ ಕ್ಷೇತ್ರದ ಜನರ ಸಮಸ್ಯೆಗಳ ಪರಿಚಯ ಅವರಿಗಿಲ್ಲ’ ಎಂದು ಟೀಕಿಸಿದ್ದರು. ಅದೂ ಅಲ್ಲದೆ, ‘ಸನ್ನಿ ಡಿಯೋಲ್‌ ಅವರ ತಂದೆ ಧರ್ಮೇಂದ್ರ ಹಾಗೂ ಹಾಗೂ ಸುನಿಲ್‌ ಜಾಖಡ್‌ ಅವರ ತಂದೆ ಬಲರಾಂ ಜಾಖಡ್‌ ಅವರು ಆತ್ಮೀಯ ಸ್ನೇಹಿತರಾಗಿದ್ದರು. ಸುನಿಲ್‌ ಅವರು ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಮತದಾರರನ್ನು ಭಾವನಾತ್ಮಕವಾಗಿ ಕಾಂಗ್ರೆಸ್‌ನತ್ತ ಸೆಳೆಯುವ ಪ್ರಯತ್ನವನ್ನು ಸಹ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT