ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರ ನೆರವಿಗೆ ಬಂದ ಸುಪ್ರೀಂ ಕೋರ್ಟ್

ಕಾರ್ಮಿಕರ ನೆರವಿಗೆ ಬಂದ ಸುಪ್ರೀಂ‌ ಕೋರ್ಟ್‌: ಉಚಿತ ಪ್ರಯಾಣ, ಊಟದ ವ್ಯವಸ್ಥೆಗೆ ಸರ್ಕಾರಗಳಿಗೆ ಸೂಚನೆ
Last Updated 26 ಮೇ 2020, 20:11 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಂಕಷ್ಟ ನಿವಾರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೆ, ‘ಅವು ಅಸಮರ್ಪಕ ಮತ್ತು ಲೋಪಗಳಿಂದ ಕೂಡಿವೆ. ಪರಿಸ್ಥಿತಿಯ ಸುಧಾರಣೆಗೆ ಪರಿಣಾಮಕಾರಿ ಮತ್ತು ಒಗ್ಗಟ್ಟಿನ ಪ್ರಯತ್ನದ ಅಗತ್ಯವಿದೆ ಎಂಬುದು ನಮ್ಮ ಭಾವನೆ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

‘ವಲಸೆ ಕಾರ್ಮಿಕರಿಗೆ ಅಗತ್ಯ ಪ್ರಯಾಣ, ಊಟ ಹಾಗೂ ವಸತಿ ವ್ಯವಸ್ಥೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಚಿತವಾಗಿ ಒದಗಿಸಬೇಕು’ ಎಂದೂ ಸೂಚಿಸಿದೆ.

ಮಾರ್ಚ್‌ 25ರಿಂದ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ನಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು, ಆಹಾರಕ್ಕೂ ಪರದಾಡುವಂತಾಗಿದೆ. ತಮ್ಮ ಊರಿಗೆ ಮರಳಲು ಸಾಧ್ಯವಾಗದೆ ಅವರು ಬೇರೆಬೇರೆ ರಾಜ್ಯಗಳಲ್ಲಿ ಸಿಲುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಸಾವಿರಾರು ಜನರು ಕಾಲ್ನಡಿಗೆಯಲ್ಲೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಕಾರ್ಮಿಕರ ಸ್ಥಿತಿಗತಿಯನ್ನು ಕುರಿತು ವಿವಿಧ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಿಂದ ಬಂದಿರುವ ಪತ್ರಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್‌, ಸ್ವಯಂಪ್ರೇರಣೆಯಿಂದ ಈ ಸಮಸ್ಯೆಯ ಬಗ್ಗೆ ವಿಚಾರಣೆ ನಡೆಸಿದೆ.

ಪರಿಸ್ಥಿತಿಯ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಗುರುವಾರದೊಳಗೆ ಸಮಗ್ರ ಮಾಹಿತಿ ನೀಡುವಂತೆ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸಂಜಯ್‌ಕೃಷ್ಣ ಕೌಲ್‌, ಹಾಗೂ ಎಂ.ಆರ್‌. ಶಾ ಅವರನ್ನೊಳಗೊಂಡ ಪೀಠವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿಮಾಡಿದೆ.

‘ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಗಳು ಈ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಂಥವರ ಬಗ್ಗೆ ಕಾಳಜಿ ವಹಿಸಿ ಸಹಾಯಹಸ್ತವನ್ನು ನೀಡಬೇಕಿತ್ತು. ಆದರೆ, ಬಿಕ್ಕಟ್ಟು ಇನ್ನೂ ಮುಂದುವರಿದಿದೆ. ಕಾರ್ಮಿಕರು ಬಹುದೊಡ್ಡ ಪ್ರಮಾಣದಲ್ಲಿ ಈಗಲೂ ರಸ್ತೆ, ಹೆದ್ದಾರಿ, ರೈಲ್ವೆ ನಿಲ್ದಾಣ, ರಾಜ್ಯದ ಗಡಿಗಳಲ್ಲಿ ಸಿಲುಕಿಕೊಂಡಿದ್ದಾರೆ’ ಎಂಬುದನ್ನು ಪೀಠ ಉಲ್ಲೇಖಿಸಿದೆ.

ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಕೋರ್ಟ್‌ ಇಂಥ ಯಾವುದೇ ನಿರ್ದೇಶನವನ್ನು ಈವರೆಗೆ ನೀಡಿರಲಿಲ್ಲ. ಸುಪ್ರೀಂ ಕೋರ್ಟ್‌ನ ಈ ನಿಲುವಿನ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರುಗಳಿಂದ ಟೀಕೆಗಳೂ ವ್ಯಕ್ತವಾಗಿದ್ದವು.

ರಾಜಸ್ಥಾನ: ಕೆಲಸದ ಅವಧಿ ಯಥಾಸ್ಥಿತಿ

ಜೈಪುರ: ‘ರಾಜಸ್ಥಾನ ಸರ್ಕಾರವು ಕಾರ್ಖಾನೆಗಳಲ್ಲಿ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು ಪುನಃ 8 ಗಂಟೆಗೆ ಸೀಮಿತಗೊಳಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಾರ್ಖಾನೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರು ಇರಬೇಕು ಎಂಬ ಮಾರ್ಗಸೂಚಿ ಇದ್ದುದರಿಂದ, ತಯಾರಿಕೆಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕೆಲಸದ ಅವಧಿಯನ್ನು ಸರರ್ಕಾರವು ದಿನಕ್ಕೆ 12 ಗಂಟೆಗೆ ಹೆಚ್ಚಿಸಿತ್ತು. ಏಪ್ರಿಲ್‌ 24ರಂದು ಈ ಕುರಿತ ಪ್ರಕಟಣೆಯನ್ನು ಹೊರಡಿಸಿತ್ತು. ಈಗ ಅದನ್ನು ಮತ್ತೆ 8 ಗಂಟೆಗೆ ಇಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಹುತೇಕ ಎಲ್ಲಾ ಕಾರ್ಖಾನೆಗಳು ಪೂರ್ಣಪ್ರಮಾಣದಲ್ಲಿ ಕೆಲಸ ಆರಂಭಿಸಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆರಂಭವಾಗಿ, ಕಾರ್ಮಿಕರ ಓಡಾಟಕ್ಕೆ ಅನುಕೂಲವಾಗಿದೆ. ಆದ್ದರಿಂದ ಕೆಲಸದ ಅವಧಿಯನ್ನು ಮತ್ತೆ ಹಿಂದಿನ ಸ್ಥಿತಿಗೆ ತರಲಾಗಿದೆ’ ಎಂದು ರಾಜ್ಯದ ಕಾರ್ಮಿಕ ಸಚಿವ ಟೀಕಾರಾಮ್‌ ಜೂಲೀ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT