ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ದು ನ್ಯಾಮಗೌಡ ಅಮರ್‌ ರಹೇ’

ಜಮಖಂಡಿ ಶುಗರ್ಸ್ ಆವರಣದಲ್ಲಿ ಅಂತಿಮ ವಿಧಿ–ವಿಧಾನ
Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಸೋಮವಾರ ನಸುಕಿನಲ್ಲಿ ಅಸುನೀಗಿದ್ದ ಶಾಸಕ ಸಿದ್ದು ನ್ಯಾಮಗೌಡ ಅವರ ಅಂತ್ಯಕ್ರಿಯೆ ಜಮಖಂಡಿ ತಾಲ್ಲೂಕಿನ ನಾಗನೂರಿನ ‘ಜಮಖಂಡಿ ಶುಗರ್ಸ್’ ಕಾರ್ಖಾನೆ ಆವರಣದಲ್ಲಿ ಮಂಗಳವಾರ ಸಂಜೆ ನೆರವೇರಿತು.

ನೆರೆದಿದ್ದ ಸಾವಿರಾರು ಮಂದಿ ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳ ಅಶ್ರುತರ್ಪಣದ ನಡುವೆ ನಡೆದ ಅಂತಿಮ ವಿಧಿವಿಧಾನದ ವೇಳೆ ಪತ್ನಿ ಹಾಗೂ ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು. ಮುತ್ತಿನಕಂತಿ ಮಠದ ಶ್ರೀಗಳು ಅಂತಿಮ ವಿಧಿ– ವಿಧಾನದ ನೇತೃತ್ವ ವಹಿಸಿದ್ದರು.

ಕೊನೆಗೆ ಕುಶಾಲ ತೋಪು ಸಿಡಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್‌ ಸರ್ಕಾರದ ಪರವಾಗಿ ಗೌರವ ಸಲ್ಲಿಸಿದರು. ಈ ವೇಳೆ ಕಲ್ಲಿನಾಥ ಶ್ರೀಗಳು, ದಯಾನಂದ ಸ್ವಾಮೀಜಿ, ಓಲೆಮಠದ ಚನ್ನಬಸವ ಸ್ವಾಮೀಜಿ, ಇಳಕಲ್ ವಿಜಯ ಮಹಾಂತೇಶ ಪೀಠದ ಗುರುಮಹಾಂತ ಶ್ರೀಗಳು ಸೇರಿದಂತೆ 10ಕ್ಕೂ ಹೆಚ್ಚು ಮಠಾಧೀಶರು ಹಾಜರಿದ್ದರು.

ಅಂತಿಮ ದರ್ಶನ: ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಮಖಂಡಿಯ ಪೊಲೊ ಮೈದಾನದಲ್ಲಿ ಇಡಲಾಗಿದ್ದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಈ ವೇಳೆ ನಡೆದ ನುಡಿನಮನ ಸಭೆಯ ನೇತೃತ್ವವನ್ನು ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು. ತತ್ವಪದಕಾರ ಇಬ್ರಾಹಿಂ ಸುತಾರ, ಶಾಸಕರಾದ ಎಂ.ಬಿ.ಪಾಟೀಲ, ಎಚ್.ಕೆ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಶಿವಾನಂದ ಪಾಟೀಲ, ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಬಸವರಾಜ ಹೊರಟ್ಟಿ, ಮಾಜಿ ಸಚಿವೆ ಉಮಾಶ್ರೀ ನುಡಿನಮನ ಸಲ್ಲಿಸಿದರು.

ನಂತರ ಪಾರ್ಥಿವ ಶರೀರವನ್ನು ಟ್ರ್ಯಾಕ್ಟರ್‌ನಲ್ಲಿ ಇಟ್ಟು ಕಾರ್ಖಾನೆಯ ಆವರಣಕ್ಕೆ 18 ಕಿ.ಮೀ ದೂರ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸ್ಥಳೀಯರು ಪುಷ್ಪನಮನ ಅರ್ಪಿಸಿ ಕಂಬನಿ ಮಿಡಿದರು. ‘ಸಿದ್ದು ನ್ಯಾಮಗೌಡ ಅಮರ್‌ ರಹೇ’ ಘೋಷಣೆಗಳು ಮುಗಿಲುಮುಟ್ಟಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT