ಸೋಮವಾರ, ಮೇ 17, 2021
23 °C
ನಾಲ್ಕು ನೋವು ನಿವಾರಕ ಮಾತ್ರೆಗಳ ನಿಷೇಧ ತೆರವು l 324 ಔಷಧಗಳಿಗೆ ಇಲ್ಲ ವಿನಾಯ್ತಿ

ಸಾರಿಡಾನ್‌, ಡಾರ್ಟ್ ಮಾರಾಟಕ್ಕೆ ‘ಸುಪ್ರೀಂ’ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಚಿರಪರಿಚಿತ ನೋವು ನಿವಾರಕ ಮಾತ್ರೆಗಳಾದ ಸಾರಿಡಾನ್‌ ಸೇರಿದಂತೆ ನಾಲ್ಕು ಔಷಧಗಳ ಮಾರಾಟಕ್ಕೆ ಇದ್ದ ನಿಷೇಧವನ್ನು ಸುಪ್ರೀಂ ಕೋರ್ಟ್‌ ಸೋಮವಾರ ತೆರವು ಮಾಡಿದೆ.

ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಸಾರಿಡಾನ್‌, ಡಾರ್ಟ್‌ ಸೇರಿದಂತೆ 328 ಔಷಧಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿತ್ತು. 

ಇದನ್ನು ಪ್ರಶ್ನಿಸಿ ಔಷಧ ತಯಾರಕರು ಮತ್ತು ಮಾರಾಟ ಸಂಘಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿ ನೋಟಿಸ್‌ ನೀಡಿದೆ. 

ನ್ಯಾಯಮೂರ್ತಿಗಳಾದ ಆರ್‌.ಎಫ್‌. ನಾರಿಮನ್‌ ಮತ್ತು ಇಂದೂ ಮಲ್ಹೋತ್ರಾ ಅವರ ದ್ವಿಸದಸ್ಯ ಪೀಠವು ನಿಷೇಧಿತ ಔಷಧಗಳ ಪಟ್ಟಿಯಲ್ಲಿರುವ ಉಳಿದ 324 ಔಷಧಗಳಿಗೆ ಯಾವುದೇ ವಿನಾಯ್ತಿ ನೀಡಿಲ್ಲ.

ಎರಡು ಅಥವಾ ಅದಕ್ಕಿಂತ ಹೆಚ್ಚಿನ ನಿಗದಿತ ಪ್ರಮಾಣದ ಔಷಧಗಳ ಸಂಯೋಜನೆಯಿಂದ ತಯಾರಿಸುವ 328 ಔಷಧಗಳ ಮೇಲೆ ಹೇರಿದ್ದ ನಿಷೇಧ ಕಳೆದ ಬುಧವಾರದಿಂದ ಜಾರಿಯಾಗಿತ್ತು.ಸಂಯೋಜಿತ ಔಷಧಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು. 

ಸಾರಿಡಾನ್‌, ಪಿರಿಟಾನ್‌ ಮತ್ತು ಡಾರ್ಟ್‌ ನೋವು ನಿವಾರಕ ಮಾತ್ರೆಗಳು ಕ್ರಮವಾಗಿ ದೇಶದ ಪ್ರಸಿದ್ಧ ಔಷಧ ತಯಾರಿಕಾ ಕಂಪನಿಗಳಾದ ಪಿರಾಮಲ್‌ ಹೆಲ್ತ್‌ ಕೇರ್‌, ಗ್ಲಾಕ್ಸೊ ಸ್ಮಿತ್‌ಕ್ಲಿನ್ಸ್‌ ಮತ್ತು ಜುಗ್ಗತ್‌ ಫಾರ್ಮ ಉತ್ಪನ್ನಗಳಾಗಿವೆ. ಮತ್ತೊಂದು ಮಾತ್ರೆಯ ವಿವರ ಲಭ್ಯವಾಗಿಲ್ಲ.

ಇದಕ್ಕೂ ಮೊದಲು ದೆಹಲಿಯ ಹೈಕೋರ್ಟ್, ವೋಕಾರ್ಟ್ ಕಂಪನಿಯ ನೋವು ನಿವಾರಕ ಮಾತ್ರೆ ಪ್ರಾಕ್ಸಿವೊನ್‌ ಮಾರಾಟಕ್ಕೆ ಅನುಮತಿ ನೀಡಿತ್ತು.

ಎಸಿಕ್ಲೊಫೆನಕ್‌, ಪ್ಯಾರಾಸೆಟಾಮೊಲ್‌ ಮತ್ತು ರ‍್ಯಾಬಿಪ್ರೆಜಾಲ್ ಎಂಬ ಮೂರು ಔಷಧಗಳ ಸಂಯೋಜನೆಯಿಂದ ತಯಾರಿಸಲಾದ ಈ ಮಾತ್ರೆಯನ್ನು ವೋಕಾರ್ಟ್‌ ಕಂಪನಿ ಕಳೆದ 11 ವರ್ಷಗಳಿಂದ ಮಾರಾಟ ಮಾಡುತ್ತಿದೆ.

ಕಾನೂನು ಹೋರಾಟ: ನಿಷೇಧಕ್ಕೆ ಸಂಬಂಧಿಸಿ ಸರ್ಕಾರ ಮತ್ತು ಔಷಧ ಕಂಪನಿಗಳ ನಡುವೆ ಎರಡು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿದೆ.

ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ ಸೆಕ್ಷನ್‌ 26ಎ ಅಡಿ ಕೇಂದ್ರ ಆರೋಗ್ಯ ಸಚಿವಾಲಯವು 349 ಸಂಯೋಜಿತ ಔಷಧಿಗಳನ್ನು ನಿಷೇಧಿಸಿ 2016ರಲ್ಲಿ ಅಧಿಸೂಚನೆ ಹೊರಡಿಸಿತ್ತು.

ಇದರ ವಿರುದ್ಧ ಔಷಧ ತಯಾರಕಾ ಕಂಪೆನಿಗಳು ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು.

ಈ ಔಷಧಗಳನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕಳೆದ ಡಿಸೆಂಬರ್‌ನಲ್ಲಿ ಔಷಧ ತಾಂತ್ರಿಕ ಸಲಹಾ ಮಂಡಳಿಗೆ (ಡಿಟಿಎಬಿ) ಸೂಚಿಸಿತ್ತು.

ಡಿಟಿಎಬಿ ನೇಮಕ ಮಾಡಿದ್ದ ತಜ್ಞರ ಸಮಿತಿ 349 ಔಷಧಗಳ ಪರಿಶೀಲನೆಯ ಬಳಿಕ 328 ಔಷಧಗಳ ನಿಷೇಧಕ್ಕೆ ಶಿಫಾರಸು ಮಾಡಿತ್ತು. ಉಳಿದ ಔಷಧಗಳನ್ನು ನಿಷೇಧದ ಪಟ್ಟಿಯಿಂದ ಕೈಬಿಡುವಂತೆ ಸೂಚಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು