ದೊಂಬಿ ಹತ್ಯೆ: ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಲು ಸುಪ್ರೀಂ ತಾಕೀತು

7

ದೊಂಬಿ ಹತ್ಯೆ: ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಲು ಸುಪ್ರೀಂ ತಾಕೀತು

Published:
Updated:
Deccan Herald

ನವದೆಹಲಿ (ಪಿಟಿಐ): ‘ಅಮಾಯಕರ ಮೇಲೆ ನಡೆಯುತ್ತಿರುವ ದೊಂಬಿ ಹತ್ಯೆ ಪ್ರಕರಣಗಳನ್ನು ತಡೆಯಲು ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳು ಏನೆಲ್ಲ ಕ್ರಮಕೈಗೊಂಡಿದ್ದೀರಿ ಎನ್ನುವ ಬಗ್ಗೆ ಇನ್ನೊಂದು ವಾರದಲ್ಲಿ ವರದಿ ನೀಡಬೇಕು’ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ತಾಕೀತು ಮಾಡಿದೆ.

ದೇಶದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳಿಗೆ ಕಡಿವಾಣ ಹಾಕುವಂತೆ ಕೋರಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಮತ್ತು ಸಾಮಾಜಿಕ ಹೋರಾಟಗಾರ ತೆಹಸೀನ್‌ ಪೂನಾವಾಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ಸೂಚನೆ ನೀಡಿದೆ.

‘ದೇಶದಲ್ಲಿ ಅಮಾಯಕರ ಮೇಲೆ ಹೆಚ್ಚುತ್ತಿರುವ ಹಲ್ಲೆ ಮತ್ತು ಹತ್ಯೆಯಂತಹ ಅಮಾನವೀಯ ಘಟನೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ನ್ಯಾಯಾಲಯ ಹಲವಾರು‌ ನಿರ್ದೇಶನಗಳನ್ನು ನೀಡಿದ್ದು, ಅದರ ಅನ್ವಯ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಿ’ ಎಂದು ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ ಸ್ಪಷ್ಟವಾಗಿ ಹೇಳಿದೆ.  

ಇಂತಹ ಹೀನ ಕೃತ್ಯಗಳು ಮುಂದೊಂದು ದಿನ ಹೊಸ ಸಂಪ್ರದಾಯ ಹುಟ್ಟು ಹಾಕುವ ಅಪಾಯವಿದ್ದು, ಈ ರೀತಿಯ ಕೃತ್ಯ ಎಸಗುವವರನ್ನು ಶಿಕ್ಷಿಸಲು ಕೇಂದ್ರ ಸರ್ಕಾರ ಶೀಘ್ರ ಪ್ರತ್ಯೇಕ ಕಾನೂನು ರಚಿಸಬೇಕು ಎಂದೂ ಕೋರ್ಟ್‌ ತಿಳಿಸಿದೆ.

ಕಳೆದ ಒಂದು ವರ್ಷದಲ್ಲಿ ಒಂಬತ್ತು ರಾಜ್ಯಗಳಲ್ಲಿ ಸುಮಾರು 40 ಜನರನ್ನು ಮಕ್ಕಳ ಕಳ್ಳರೆಂದು ಶಂಕಿಸಿ, ಗುಂಪು ದಾಳಿ ಮಾಡಿ ಹತ್ಯೆ ಮಾಡಿರುವ ಪ್ರಕರಣಗಳು ನಡೆದಿವೆ.

ವರದಿ ಸಲ್ಲಿಕೆ: ಇದೇ ಜುಲೈನಲ್ಲಿ ನಡೆದ ವಿಚಾರಣೆ ವೇಳೆ ನಾಲ್ಕು ವಾರದೊಳಗೆ ಕಾನೂನು ರಚಿಸಲು ಕ್ರಮಕೈಗೊಳ್ಳಬೇಕು ಎಂದು ಪೀಠ ಹೇಳಿತ್ತು. ಅದರನ್ವಯ ಗೃಹ ಸಚಿವರ ನೇತೃತ್ವದಲ್ಲಿ ಸಚಿವರ ಗುಂಪು ಮತ್ತು ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಈ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತ್ತು. ಆ ಸಮಿತಿ ಆಗಸ್ಟ್ 29ರಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಸಚಿವರ ಗುಂಪಿಗೆ ವರದಿಯನ್ನು ಸಲ್ಲಿಸಿತ್ತು.

ನಿರ್ದೇಶನಗಳು

* ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯಗಳ ಹೊಣೆ. ಈ ರೀತಿಯ ಹಿಂಸಾಕೃತ್ಯಗಳು ನಡೆದಾಗ ನಿರ್ಲಕ್ಷ್ಯ ತೋರಬಾರದು

* ನಾಗರಿಕರು ಕಾನೂನು ಕೈಗೆ ತೆಗೆದುಕೊಂಡು ತಾವೇ ಕಾನೂನು ರಕ್ಷಕರಂತೆ ವರ್ತಿಸಬಾರದು

* ಗೋಸಂರಕ್ಷಣೆ ಹೆಸರಿನಲ್ಲಿ ಮತ್ತು ಸುಳ್ಳು ಸುದ್ದಿಗಳನ್ನು ನಂಬಿ ಜನರು ನಡೆಸುತ್ತಿರುವ ಹಿಂಸಾ ಕೃತ್ಯಗಳನ್ನು ತಡೆಯಲು ಪೀಠ ಕೆಲವು ನಿರ್ದೇಶನ ನೀಡಿದೆ.

* ಅಮಾಯಕರ ಹತ್ಯೆ ತಡೆಗಟ್ಟಲು ಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸಬೇಕು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !