ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಹೊಗಳಿದ ‘ಸುಪ್ರೀಂ’ ನ್ಯಾಯಮೂರ್ತಿ

ದೂರದೃಷ್ಟಿ ಹೊಂದಿರುವ ನರೇಂದ್ರ ಮೋದಿ:
Last Updated 22 ಫೆಬ್ರುವರಿ 2020, 20:59 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಒಬ್ಬ ಮೇಧಾವಿ. ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ, ದೂರದೃಷ್ಟಿ ಹೊಂದಿರುವ ವ್ಯಕ್ತಿ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಯಮೂರ್ತಿ ಅರುಣ್‌ ಮಿಶ್ರಾ ಪ್ರಶಂಸೆಯ ಸುರಿಮಳೆಗೈದರು.

ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರ ನಡೆದ ‘ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ–2020’ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾಗತಿಕವಾಗಿ ಚಿಂತನೆ ನಡೆಸುವ ಮೋದಿ, ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಾರೆ’ ಎಂದು ಶ್ಲಾಘಿಸಿದರು.

‘ಸದ್ಯ ಅಪ್ರಸ್ತುತವಾಗಿರುವ 1500 ಕಾನೂನುಗಳನ್ನು ರದ್ದುಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅತ್ಯುತ್ತಮ ಕಾರ್ಯ ಮಾಡಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಈಗ, ಅಂತರರಾಷ್ಟ್ರೀಯ ಸಮುದಾಯದ ಅತ್ಯಂತ ಆಪ್ತ ಸ್ನೇಹಿತವಾಗಿದೆ’ ಎಂದು ತಿಳಿಸಿದರು.

‘ಬದಲಾಗುತ್ತಿರುವ ಜಗತ್ತಿನಲ್ಲಿ ನ್ಯಾಯಾಂಗವೂ ಮಹತ್ವದ ಪಾತ್ರ ವಹಿಸಬೇಕಾಗಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳು ಒಂದೇ ರೀತಿಯಾಗಿವೆ. ಘನತೆಯಿಂದ ಎಲ್ಲರೂ ಬದುಕಬೇಕು ಎನ್ನುವುದು ನಮ್ಮ ಆಶಯವಾಗಿದೆ. ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದ ಉದ್ಘಾಟನಾ ಭಾಷಣ ನಮಗೆ ಸ್ಫೂರ್ತಿಯಾಗಿದೆ’ ಎಂದರು.

‘ಪ್ರಜಾಪ್ರಭುತ್ವದ ಬೆನ್ನಲುಬಾಗಿರುವ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅಗತ್ಯವಿದೆ. ಶಾಸಕಾಂಗ ಹೃದಯವಾಗಿದ್ದರೆ, ಕಾರ್ಯಾಂಗ ಮಿದುಳು. ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಲು ಮೂರು ಅಂಗಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು' ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿರುವ ಹಿರಿಯ ನ್ಯಾಯಮೂರ್ತಿಗಳಲ್ಲಿ ಮಿಶ್ರಾ ಮೂರನೇಯವರಾಗಿದ್ದಾರೆ. ಸುಮಾರು 20 ದೇಶಗಳ ನ್ಯಾಯಮೂರ್ತಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

‘ಭಯೋತ್ಪಾದನೆ ಸಮಸ್ಯೆಗೂ ಸ್ಪಂದಿಸಬೇಕಾಗಿದೆ’
ಭಯೋತ್ಪಾದನೆ, ಸೈಬರ್‌ ಅಪರಾಧ, ಪರಿಸರಕ್ಕೆ ಧಕ್ಕೆ ಮತ್ತು ಆರೋಗ್ಯ ಸಮಸ್ಯೆಗಳಿಗೂ ನ್ಯಾಯಾಂಗ ಸ್ಪಂದಿಸಬೇಕಾಗಿದೆ ಎಂದು ನ್ಯಾಯಮೂರ್ತಿ ಎನ್‌.ವಿ. ರಮಣ ಹೇಳಿದರು.

‘ಜಗತ್ತಿನಾದ್ಯಂತ ಈ ಸಮಸ್ಯೆಗಳೇ ದೊಡ್ಡ ಸವಾಲುವೊಡ್ಡುತ್ತಿವೆ. ಎಲ್ಲ ರಾಷ್ಟ್ರಗಳಲ್ಲಿ ಸಮಸ್ಯೆಗಳು ಬಹುತೇಕ ಒಂದೇ ರೀತಿಯಾಗಿರುವುದರಿಂದ ಸರ್ವಾನುಮತದಿಂದ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಎನ್‌. ವಿ. ರಮಣ ಅವರು 2021ರ ಏಪ್ರಿಲ್‌ನಲ್ಲಿ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲಿದ್ದಾರೆ.

‘ನ್ಯಾಯಾಂಗ ತೀರ್ಪುಗಳಿಗೆ ಹೃದಯಪೂರ್ವಕ ಸ್ವಾಗತ’
ನವದೆಹಲಿ (ಪಿಟಿಐ): ‘ನ್ಯಾಯಾಲಯ ಇತ್ತೀಚೆಗೆ ನೀಡಿರುವ ಮಹತ್ವದ ತೀರ್ಪುಗಳನ್ನು ಯಾವುದೇ ಅನುಮಾನಗಳಿಲ್ಲದೆಯೇ ಹೃದಯಪೂರ್ವಕವಾಗಿ 130 ಕೋಟಿ ಭಾರತೀಯರು ಒಪ್ಪಿಕೊಂಡಿದ್ದಾರೆ. ಜಾಗತಿಕವಾಗಿಯೂ ಈ ತೀರ್ಪುಗಳು ಚರ್ಚೆಯಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ–2020’ ಉದ್ಘಾಟಿಸಿ ಮಾತನಾಡಿದ ಅವರು, ಅಯೋಧ್ಯೆ ಪ್ರಕರಣ ಸೇರಿದಂತೆ ಇತರ ಮಹತ್ವದ ಪ್ರಕರಣಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

‘ಬದಲಾಗುತ್ತಿರುವ ಕಾಲಘಟ್ಟದಲ್ಲಿ ದತ್ತಾಂಶ ರಕ್ಷಣೆ, ಸೈಬರ್‌ ಅಪರಾಧಗಳು ನ್ಯಾಯಾಂಗಕ್ಕೂ ಹೊಸ ಸವಾಲುಗಳನ್ನು ಸೃಷ್ಟಿಸಿವೆ. ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ’ ಎಂದು ತಿಳಿಸಿದರು.

‘ಲಿಂಗ ಸಮಾನತೆ ಇಲ್ಲದೆಯೇ ಯಾವುದೇ ದೇಶ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಸೇನೆಯಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. 26 ವಾರಗಳ ಹೆರಿಗೆ ರಜೆ ಸಹ ನೀಡಲಾಗುತ್ತಿದೆ. ಜತೆಗೆ, ತ್ರಿವಳಿ ತಲಾಖ್‌, ತೃತೀಯ ಲಿಂಗಿಗಳು ಮತ್ತು ಅಂಗವಿಕಲರಿಗಾಗಿ ಕಾನೂನುಗಳನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಅಭಿವೃದ್ಧಿ ಮತ್ತು ಪರಿಸರ ರಕ್ಷಣೆಯ ನಡುವೆ ಸಮತೋಲನ ಕಾಪಾಡಲು ನ್ಯಾಯಾಂಗ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಿದೆ’ ಎಂದು ಹೇಳಿದರು.

ಜಾಲತಾಣಗಳಲ್ಲಿ ಅಪಪ್ರಚಾರ; ಸಚಿವರ ಎಚ್ಚರಿಕೆ
‘ನ್ಯಾಯಾಂಗದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಅಪಾಯಕಾರಿ ಪ್ರವೃತ್ತಿಯಾಗಿದೆ’ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದರು.

ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ತೀರ್ಪುಗಳು ತಮ್ಮ ನಿರೀಕ್ಷೆಯಂತೆ ಇರದಿದ್ದರೆ ಟೀಕೆ ಮಾಡಲು ಆರಂಭಿಸುತ್ತಾರೆ. ಹೀಗಾಗಿ, ಕೆಲವು ನಿಯಮಾವಳಿಗಳನ್ನು ರೂಪಿಸಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ವೈಯಕ್ತಿಕವಾಗಿ ನಾನು ಸಾಮಾಜಿಕ ಮಾಧ್ಯಮಗಳು ಮತ್ತು ಸ್ವಾತಂತ್ರ್ಯ ಬೆಂಬಲಿಸುತ್ತೇನೆ. ಕಾನೂನಿನ ಪ್ರಕಾರ ಸರಿಯಾದ ತೀರ್ಪುಗಳನ್ನು ನೀಡಲು ನ್ಯಾಯಮೂರ್ತಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು’ ಎಂದರು.

*
ನ್ಯಾಯಾಲಯ ನೀಡುವ ತೀರ್ಪುಗಳ ಪರಿಣಾಮಗಳು ನಮ್ಮ ನಿರ್ದಿಷ್ಟ ವ್ಯಾಪ್ತಿಗೆ ಮಾತ್ರ ಸೀಮಿತವಾಗಿಲ್ಲ. ಆಧುನಿಕ ತಂತ್ರಜ್ಞಾನದಿಂದಾಗಿ ಇತರ ಪ್ರದೇಶಗಳಲ್ಲೂ ಪರಿಣಾಮ ಬೀರುತ್ತವೆ.
-ಎಸ್‌.ಎ. ಬೊಬಡೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT