ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಡ್ಯಾನ್ಸ್‌ ಬಾರ್‌ಗಳಲ್ಲಿ ನೋಟು ಎರಚುವಂತಿಲ್ಲ; ಮದ್ಯ ಪೂರೈಕೆ ಸರಾಗ

Last Updated 17 ಅಕ್ಟೋಬರ್ 2019, 10:03 IST
ಅಕ್ಷರ ಗಾತ್ರ

ನವದೆಹಲಿ: 2005ರಿಂದ ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್‌ ಬಾರ್‌ಗಳಿಗೆ ಪರವಾನಗಿ ನೀಡದಿರುವುದನ್ನು ಪ್ರಸ್ತಾಪಿಸಿ, ಡ್ಯಾನ್ಸ್‌ ಬಾರ್‌ಗಳನ್ನು ನಿಯಂತ್ರಿಸಬಹುದೇ ಹೊರತು ನಿಷೇಧಿಸಲು ಸಾಧ್ಯವಿಲ್ಲ. ಮದ್ಯ ಮತ್ತು ನೃತ್ಯ ಒಟ್ಟಿಗೆ ಇರಬಹುದು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಮೂಲಕ ಸರ್ಕಾರ ವಿಧಿಸಿದ್ದ ಕಠಿಣ ನಿಯಮಗಳನ್ನು ಗುರುವಾರ ಸುಪ್ರೀಂ ಕೋರ್ಟ್‌ ಸಡಿಲಗೊಳಿಸಿದೆ.

ಕೋರ್ಟ್‌ ಆದೇಶವನ್ನು ಸ್ವಾಗತಿಸಿರುವ ಮಹಾರಾಷ್ಟ್ರ ಸರ್ಕಾರದ ವಕೀಲ ನಿಶಾಂತ್‌ ಕಾಟ್ನೇಶ್ವರ್ಕರ್‌, ಕೋರ್ಟ್‌ ನಿಗದಿ ಪಡಿಸಿರುವ ನಿಯಮಗಳನ್ನು ಪೂರೈಸಿರುವ ಯಾರಿಗೇ ಆದರೂ ಡ್ಯಾನ್ಸ್‌ ಬಾರ್‌ ಪರವಾನಗಿ ನೀಡಲಾಗುತ್ತದೆ ಎಂದಿದ್ದಾರೆ. ಡ್ಯಾನ್ಸ್ ಬಾರ್‌ ನಿಷೇಧಿಸಿ ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ 2016ರ ಕಾಯ್ದೆಯನ್ನು ಪ್ರಶ್ನಿಸಿ ಹೊಟೇಲ್‌ ಮತ್ತು ರೆಸ್ಟೊರೆಂಟ್ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತ್ತು. 2018ರ ಆಗಸ್ಟ್‌ನಲ್ಲಿ ಈ ಪ್ರಕರಣದ ತೀರ್ಪು ಕಾಯ್ದಿರಿಸಿತ್ತು.

ಕೋರ್ಟ್‌ ಆದೇಶ ಪ್ರಮುಖಾಂಶಗಳು

* ’ಡ್ಯಾನ್ಸ್‌ ಬಾರ್‌ಗಳು ಧಾರ್ಮಿಕ ಸ್ಥಳಗಳು ಹಾಗೂ ಶಿಕ್ಷಣ ಸಂಸ್ಥೆಗಳಿಂದ 1 ಕಿ.ಮೀ. ದೂರದಲ್ಲಿರಬೇಕು’– ಮುಂಬೈನಂತಹ ನಗರದಲ್ಲಿ ಈ ನಿಯಮವನ್ನು ಅನ್ವಯಿಸುವುದು ಸಮಂಜಸವಾದುದಲ್ಲ ಎಂದು ಕೋರ್ಟ್‌ ಹೇಳಿದೆ

ಬಾರ್‌ ಡ್ಯಾನ್ಸರ್‌ಗಳು ಸಿಹಿ ಹಂಚಿ ಸಂಭ್ರಮಿಸುತ್ತಿರುವುದು– ಪಿಟಿಐ ಸಂಗ್ರಹ ಚಿತ್ರ
ಬಾರ್‌ ಡ್ಯಾನ್ಸರ್‌ಗಳು ಸಿಹಿ ಹಂಚಿ ಸಂಭ್ರಮಿಸುತ್ತಿರುವುದು– ಪಿಟಿಐ ಸಂಗ್ರಹ ಚಿತ್ರ

* ಡ್ಯಾನ್ಸ್‌ ಬಾರ್‌ಗಳಲ್ಲಿ ನೃತ್ಯ ಪ್ರದರ್ಶಿಸುವ ನೃತ್ಯಗಾರರಿಗೆ ಪ್ರಶಂಸೆ ವ್ಯಕ್ತಪಡಿಸಿ ಟಿಪ್ಸ್‌ ನೀಡಬಹುದು. ಆದರೆ, ಹಣವನ್ನು ಸುರಿಯುವಂತಿಲ್ಲ.

* ಮಹಾರಾಷ್ಟ್ರದಲ್ಲಿ ಡ್ಯಾನ್ಸ್‌ ಬಾರ್‌ಗಳು ಸಂಜೆ 6ರಿಂದ ರಾತ್ರಿ 11:30ರ ವರೆಗೂ ಕಾರ್ಯನಿರ್ವಹಿಸುವಂತೆ ಕೋರ್ಟ್‌ ಸೂಚಿಸಿದೆ.

* ನೃತ್ಯ ಮಾಡುವ ಸ್ಥಳ ಹಾಗೂ ಮದ್ಯ ಸೇವನೆಯ ಸ್ಥಳವನ್ನು ಪ್ರತ್ಯೇಕವಾಗಿಡುವಂತೆ ಸರ್ಕಾರ ರೂಪಿಸಿದ್ದ ನಿಯಮವನ್ನು ಕೋರ್ಟ್‌ ರದ್ದುಪಡಿಸಿದೆ.

* ಖಾಸಗಿತನಕ್ಕೆ ಧಕ್ಕೆ ಬರುವ ಕಾರಣದಿಂದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯಗೊಳಿಸುವುದಕ್ಕೂ ಕೋರ್ಟ್‌ ತಡೆ ನೀಡಿದೆ.

* ಡ್ಯಾನ್ಸ್‌ ಬಾರ್‌ಗಳ ಮಾಲೀಕರು ’ಉತ್ತಮ ನಡತೆಯುಳ್ಳವರು’ ಹಾಗೂ ಯಾವುದೇ ’ಅಪರಾಧ ಹಿನ್ನೆಲೆ ಇಲ್ಲದವರು’ ಆಗಿರಬೇಕು ಎಂಬುದನ್ನು ಕೋರ್ಟ್ ತಳ್ಳಿಹಾಕಿದೆ. ಉತ್ತಮ ನಡತೆ, ಗುಣ ಹಾಗೂ ಹಿನ್ನೆಲೆ ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸಲು ಸರಿಯಾದ ವ್ಯಾಖ್ಯಾನ ಇಲ್ಲದಿರುವುದನ್ನು ಪ್ರಸ್ತಾಪಿಸಿದೆ.

* ಡ್ಯಾನ್ಸ್‌ ಬಾರ್‌ಗಳ ಮೇಲೆ ನಿಯಂತ್ರಣ ಹೇರಬಹುದಾದರೂ ಸಂಪೂರ್ಣ ನಿಷೇಧಿಸುವುದು ಸಾಧ್ಯವಿಲ್ಲ. 2005ರಿಂದ ಈವರೆಗೂ ಯಾರೊಬ್ಬರಿಗೂ ಡ್ಯಾನ್ಸ್‌ ಬಾರ್‌ ನಡೆಸಲು ಸರ್ಕಾರ ಪರವಾನಗಿ ನೀಡಿಲ್ಲ ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ಮತ್ತು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

* 2016ರಲ್ಲಿ ಡ್ಯಾನ್ಸ್‌ ಬಾರ್‌ ನಿಯಂತ್ರಣ ಮಸೂದೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆಯಾಗಿತ್ತು. ಇದರ ಅನ್ವಯ, ನೃತ್ಯ ಪ್ರದರ್ಶನ ನಡೆಯುವ ಸ್ಥಳದಲ್ಲಿ ಮದ್ಯ ಪೂರೈಕೆ ಮಾಡುವುದನ್ನು ನಿಷೇಧಿಸಲಾಗಿತ್ತು. ರಾತ್ರಿ 11:30ಕ್ಕೆ ಬಾರ್‌ ಸ್ಥಗಿತಗೊಳ್ಳಬೇಕು, ನಿಯಮಗಳನ್ನು ಅನುಸರಿಸ ಡ್ಯಾನ್ಸ್‌ ಬಾರ್‌ನ ಮಾಲೀಕರು ಹಾಗೂ ಗ್ರಾಹಕರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT