ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಆದೇಶ ಪ್ರಶ್ನಿಸಿದ ಬಿಬಿಎಂಪಿ: ‘ಸುಪ್ರೀಂ’ ತರಾಟೆ

ಅಕ್ರಮ ಕಟ್ಟಡ ನೆಲಸಮಗೊಳಿಸಲು ಸಮೀಕ್ಷೆ...
Last Updated 2 ಮಾರ್ಚ್ 2020, 19:26 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕ್ರಮವನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತು.

‘ಹೈಕೋರ್ಟ್‌ ಈ ರೀತಿ ಸೂಚಿಸಿದ್ದರಲ್ಲಿ ತಪ್ಪೇನಿದೆ’ ಎಂದು ಬಿಬಿಎಂಪಿ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರಿದ್ದ ಪೀಠ, ‘ಜವಾಬ್ದಾರಿಯುತ ಸ್ಥಳೀಯ ಸಂಸ್ಥೆಗೆ ಇದರಿಂದ ಏನಾದರೂ ತೊಂದರೆ ಇದೆಯೇ?, ಈ ಮೂಲಕ ನೀವು ಅಕ್ರಮ ಕಟ್ಟಡಗಳನ್ನು ಕ್ರಮಬದ್ಧಗೊಳಿಸಲು ಬಯಸಿದ್ದೀರಾ’ ಎಂದು ಕಿಡಿಕಾರಿತು.

ಅಕ್ರಮ ಕಟ್ಟಡಗಳನ್ನು ಕ್ರಮಬದ್ಧಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ‘ಅಕ್ರಮ–ಸಕ್ರಮ’ ಯೋಜನೆ ಆರಂಭಿಸಿದೆ. ಹಾಗಾಗಿ, 2019ರ ನವೆಂಬರ್‌ 25ರಂದು ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಲಾಗಿದೆ. ಅಲ್ಲದೆ, ‘ಅಕ್ರಮ– ಸಕ್ರಮ’ ಯೋಜನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಎಂದು ಮೆಹ್ತಾ ತಿಳಿಸಿದರು.

‘ನಮ್ಮ ನಗರಗಳ ಸ್ಥಿತಿ ಈಗಾಗಲೇ ಸಂಪೂರ್ಣ ಹದಗೆಟ್ಟಿದೆ. ಆದರೂ, ಆದೇಶ ಪಾಲಿಸಿ ಎಂದು ಹೇಳುವವರೆಗೆ ನೀವು ಸುಮ್ಮನಿರುವಿರಾ’ ಎಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡಿರುವ ಪೀಠ ಆಕ್ರೋಶ ವ್ಯಕ್ತಪಡಿಸಿತು. ಈ ಸಂದರ್ಭ ಅರ್ಜಿಯನ್ನು ಹಿಂದೆ ಪಡೆಯುವುದಾಗಿ ಮೆಹ್ತಾ ಸ್ಪಷ್ಟಪಡಿಸಿದರು.

ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು 1961ರ ಕರ್ನಾಟಕ ಪಟ್ಟಣ ಮತ್ತು ಯೋಜನಾ ಕಾಯ್ದೆ ಹಾಗೂ 1964ರ ಪುರಸಭೆ ಕಾಯ್ದೆಗಳಿಗೆ ಅನೇಕ ತಿದ್ದುಪಡಿಗಳನ್ನು ತರಲಾಗಿದೆ. ಈ ಅಂಶವನ್ನು ಪರಿಗಣಿಸದೆ ಹೈಕೋರ್ಟ್ ಆದೇಶ ನೀಡಿದೆ ಎಂದು ಬಿಬಿಎಂಪಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT