ದೇಗುಲಗಳ ನಿರ್ವಹಣೆ: ಅಧಿಕಾರಿಗಳು ಮೂಗುತೂರಿಸುವುದೇಕೆ – ಸುಪ್ರೀಂ

ಶನಿವಾರ, ಏಪ್ರಿಲ್ 20, 2019
29 °C

ದೇಗುಲಗಳ ನಿರ್ವಹಣೆ: ಅಧಿಕಾರಿಗಳು ಮೂಗುತೂರಿಸುವುದೇಕೆ – ಸುಪ್ರೀಂ

Published:
Updated:
Prajavani

ನವದೆಹಲಿ: ಸರ್ಕಾರಿ ಅಧಿಕಾರಿಗಳು ಧಾರ್ಮಿಕ ಸ್ಥಳಗಳು ಮತ್ತು ದೇಗುಲಗಳ ನಿರ್ವಹಣೆ ವೇಳೆ ಮೂಗು ತೂರಿಸುವುದೇಕೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದೆ.

ಪುರಿಯಲ್ಲಿನ ಜಗನ್ನಾಥ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಅಧಿಕಾರಿಗಳು ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಮತ್ತು ಎಸ್.ಎ. ನಜೀರ್‌ ಅವರನ್ನು ಒಳಗೊಂಡ ಪೀಠ ಈ ಪ್ರತಿಕ್ರಿಯೆ ನೀಡಿದೆ. 

ಧಾರ್ಮಿಕ ಸ್ಥಳಗಳು ಮತ್ತು ದೇಗುಲಗಳಲ್ಲಿ ಸರ್ಕಾರಿ ‘ಸೇವಕರು’ (ಸಿಬ್ಬಂದಿ) ನಿರ್ವಹಣೆ ಹೆಸರಿನಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

‘ಇದು ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಸರ್ಕಾರಿ ಅಧಿಕಾರಿಗಳೇಕೆ ದೇಗುಲಗಳ ನಿರ್ವಹಣೆ ಅಥವಾ ನಿಯಂತ್ರಣಕ್ಕೆ ಮುಂದಾಗುತ್ತಿದ್ದಾರೋ ನನಗೆ ತಿಳಿಯುತ್ತಿಲ್ಲ’ ಎಂದು ನ್ಯಾಯಮೂರ್ತಿ ಬೊಬ್ಡೆ ಪ್ರಶ್ನಿಸಿದರು. 

‘ಕೇರಳದಲ್ಲಿ ಶಬರಿಮಲೆ ದೇಗುಲದ ಆಡಳಿತವನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನೋಡಿಕೊಳ್ಳುತ್ತಿದೆ. ಈ ರೀತಿ, ದೇಶದ ಹಲವು ದೇಗುಲಗಳಲ್ಲಿ ಸರ್ಕಾರವೇ ನೇಮಿಸಿದ ಮಂಡಳಿಗಳು ಆಡಳಿತ ಜವಾಬ್ದಾರಿ ನಿರ್ವಹಿಸುತ್ತಿವೆ’ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದರು.

ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ರಂಜಿತ್‌ಕುಮಾರ್‌, ‘ಹಲವು ಧಾರ್ಮಿಕ ಸ್ಥಳಗಳು ಮತ್ತು ದೇಗುಲಗಳಿಗೆ ಭೇಟಿ ನೀಡಿದ್ದು, ಭಕ್ತರು ಎದುರಿಸುವ ತೊಂದರೆಗಳ ಕುರಿತು ನ್ಯಾಯಾಲಯಕ್ಕೆ ಸಮಗ್ರ ವರದಿ ನೀಡಿದ್ದೇನೆ’ ಎಂದು ತಿಳಿಸಿದರು. 

ಈ ವರದಿ ಆಧಾರದ ಮೇಲೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ‘ದೇಗುಲಗಳಿಗೆ ಭೇಟಿ ನೀಡುವವರಿಗೆ ಹಲವು ರೀತಿಯಿಂದ ಮಾನಸಿಕ ಕಿರಿಕಿರಿ ಆಗುತ್ತಿದೆ. ಕೆಲವು ಅರ್ಚಕರೇ ಭಕ್ತರಿಗೆ ನಿರ್ಬಂಧ ವಿಧಿಸುತ್ತಾರೆ. ಬಡವರು ಮತ್ತು ಅಶಿಕ್ಷಿತರಾಗಿರುವ ಇಂತಹ ಭಕ್ತರು, ಇಂತಹ ನಿರ್ಬಂಧ ಅಥವಾ ಕಿರುಕುಳವನ್ನು ಪ್ರಶ್ನಿಸುವುದೇ ಇಲ್ಲ’ ಎಂದು ಹೇಳಿತು.

‘ಈ ಕುರಿತು ಪುರಿಯ ಜಿಲ್ಲಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಪುರಿ ಜಗನ್ನಾಥ ದೇಗುಲದ ಆಡಳಿತ ಮಂಡಳಿಯು ಈ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ನ್ಯಾಯಾಲಯ ಪ್ರಶ್ನಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠವನ್ನು ವಿನಂತಿಸಿಕೊಂಡರು. 

ಮುಂದಿನ ತಿಂಗಳು ಈ ಕುರಿತು ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ತಿಳಿಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !