ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.47 ಲಕ್ಷ ಕೋಟಿ ಬಾಕಿ; ಟೆಲಿಕಾಂ ಕಂಪನಿಗಳ ಅರ್ಜಿ ವಜಾ ಮಾಡಿದ ಸುಪ್ರೀಂ

Last Updated 16 ಜನವರಿ 2020, 13:32 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಕ್ಕೆ ಬಾಕಿ ಇರುವ ಶುಲ್ಕ ಪಾವತಿಸುವಂತೆ ಆದೇಶಿಸಿ ನೀಡಿದ್ದ ತೀರ್ಪು ಮರು ಪರಿಶೀಲಿಸುವಂತೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್‌ ಐಡಿಯಾ ಸಲ್ಲಿಸಿದ್ದ ಅರ್ಜಿಯನ್ನುಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಅರುಣ್‌ ಮಿಶ್ರ, ಎಸ್‌.ಎ.ನಜೀರ್‌ ಹಾಗೂ ಎಂ.ಆರ್‌.ಶಾ ಅವರನ್ನು ಒಳಗೊಂಡ ನ್ಯಾಯಪೀಠವು ಮರುಪರಿಶೀಲನೆ ಮನವಿ ತಿರಸ್ಕರಿಸಿತು. ಕಂಪನಿಗಳ ದೂರಸಂಪರ್ಕ ವಲಯ ಹೊರತಾದ ಮೂಲಗಳ ಆದಾಯವನ್ನೂ ಸೇರಿಸಿ ಬಾಕಿ ಇರುವ ಮೊತ್ತದ ಲೆಕ್ಕಾಚಾರ ಮಾಡುವಂತೆ ಕೋರ್ಟ್‌ ಕಳೆದ ವರ್ಷ ಅಕ್ಟೋಬರ್‌ 24ರಂದು ಆದೇಶಿಸಿತ್ತು.ದೂರಸಂಪರ್ಕ ಇಲಾಖೆ (ಡಿಒಟಿ) ಪ್ರತಿಪಾದಿಸಿದ್ದ ಒಟ್ಟು ಆದಾಯದ ಲೆಕ್ಕಾಚಾರವನ್ನು ಎತ್ತಿಹಿಡಿದಿತ್ತು.

ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಸೇರಿದಂತೆ ಇತರೆ ದೂರಸಂಪರ್ಕ ಕಂಪನಿಗಳು ₹ 1.47 ಲಕ್ಷ ಕೋಟಿಯಷ್ಟು ಶುಲ್ಕ ಬಾಕಿ ಇರಿಸಿಕೊಂಡಿವೆ ಎಂದು 2019ರ ನವೆಂಬರ್‌ನಲ್ಲಿ ದೂರಸಂಪರ್ಕ ಸಚಿವ ರವಿ ಶಂಕರ್‌ ಪ್ರಸಾದ್‌ ಸಂಸತ್ತಿಗೆ ತಿಳಿಸಿದ್ದರು. ಬಾಕಿ ಮೊತ್ತದ ಮೇಲಿನ ದಂಡ ಮತ್ತು ಬಡ್ಡಿ ಮನ್ನಾ ಮಾಡುವ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಎಜಿಆರ್‌ಗೆ ಸಂಬಂಧಿಸಿದಂತೆ ದಂಡ, ದಂಡದ ಮೇಲಿನ ಬಡ್ಡಿ ಹಾಗೂ ಬಡ್ಡಿಗೆ ವಿಧಿಸಲಾಗಿರುವ ತೆರಿಗೆ ಕುರಿತು ನೀಡಿರುವ ಸೂಚನೆಯ ಕುರಿತು ಪರಿಶೀಲಿಸುವಂತೆ ಭಾರ್ತಿ ಏರ್‌ಟೆಲ್‌ ಮನವಿ ಸಲ್ಲಿಸಿದ್ದಾಗಿ ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.

ಸರ್ಕಾರಕ್ಕೆ ದೂರಸಂಪರ್ಕ ಕಂಪನಿಗಳು ಪರವಾನಗಿ ಶುಲ್ಕ ₹ 92,642 ಕೋಟಿ ಹಾಗೂ ತರಂಗಾಂತರಗಳ ಬಳಕೆ ಶುಲ್ಕ ₹ 55,054 ಕೋಟಿ ಬಾಕಿ ಇರುವುದಾಗಿ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದರು.

ವಸೂಲಿ ಆಗಬೇಕಿರುವ ಶುಲ್ಕ

* ಭಾರ್ತಿ ಏರ್‌ಟೆಲ್‌– ₹ 21,682.13 ಕೋಟಿ

* ವೊಡಾಫೋನ್‌– ₹ 19,823.71 ಕೋಟಿ

* ರಿಲಯನ್ಸ್‌ ಕಮ್ಯುನಿಕೇಷನ್ಸ್‌– ₹ 16,456.47 ಕೋಟಿ

* ಬಿಎಸ್‌ಎನ್‌ಎಲ್‌– ₹ 2,098.72 ಕೋಟಿ

* ಎಂಟಿಎನ್‌ಎಲ್‌– ₹ 2,537.48 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT