ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರತ್‌ ಕೋಚಿಂಗ್ ಸೆಂಟರ್‌‌ನಲ್ಲಿ ಬೆಂಕಿ-ಮೃತ ವಿದ್ಯಾರ್ಥಿಗಳ ಸಂಖ್ಯೆ 19

ಬೆಂಕಿಯಲ್ಲಿ ಸುಟ್ಟು ಕರಕಲಾದ ಭವಿಷ್ಯದ ಕುಡಿಗಳು !
Last Updated 24 ಮೇ 2019, 17:45 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಸೂರತ್ ನಗರದ ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 19 ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಸಾರ್ಥನಾ ಪ್ರದೇಶದ ತಕ್ಷಶಿಲಾ ವಾಣಿಜ್ಯ ಸಂಕೀರ್ಣದಲ್ಲಿನ ಕೋಚಿಂಗ್‌ ಸೆಂಟರ್‌ನಲ್ಲಿ ಮಧ್ಯಾಹ್ನ 3.30ಕ್ಕೆ ಈ ದುರ್ಘಟನೆ ಸಂಭವಿಸಿದೆ. ಬಹುತೇಕ ವಿದ್ಯಾರ್ಥಿಗಳು 12 ರಿಂದ 17 ವಯಸ್ಸಿನವರು. ಕೆಲವು ವಿದ್ಯಾರ್ಥಿಗಳು ಕಟ್ಟಡದಲ್ಲಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಇನ್ನು ಹಲವರು ಆತಂಕದಿಂದ ಜೀವ ಉಳಿಸಿಕೊಳ್ಳಲು ನಾಲ್ಕು ಮತ್ತು ಮೂರನೇ ಮಹಡಿಯಿಂದ ಜಿಗಿದಾಗ ಮೃತಪಟ್ಟಿದ್ದಾರೆ. ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆಯ ನಡುವೆ ಪ್ರಾಣ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಕಿಟಕಿಯಿಂದ ಹಾರುತ್ತಿರುವ ದೃಶ್ಯ ಮನಕಲಕುವಂತಿತ್ತು. ಕಟ್ಟಡದಿಂದ ಜಿಗಿದವರಲ್ಲಿ ಆರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನಾಲ್ಕು ಮತ್ತು ಮೂರನೇ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ಉಳಿದೆಡೆಯೂ ವ್ಯಾಪಿಸಿಕೊಂಡಿತು. ವಾಣಿಜ್ಯ ಸಂಕೀರ್ಣದಲ್ಲಿ ಕೋಚಿಂಗ್‌ ಸೆಂಟರ್‌ ನಡೆಸಲಾಗುತ್ತಿತ್ತು. 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ದುರಂತದ ಸಮಯದಲ್ಲಿ 10 ಮತ್ತು 12ನೇ ತರಗತಿಯ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ತರಗತಿಯಲ್ಲಿ ಮೊದಲು ಹೊಗೆ ಬರಲು ಆರಂಭವಾಯಿತು. ಕೆಲ ನಿಮಿಷಗಳಲ್ಲಿ ಹೊಗೆ ದಟ್ಟವಾಗಿ ಬೆಂಕಿಯ ಜ್ವಾಲೆ ಆವರಿಸಿಕೊಂಡಿತು ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

‘10 ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಐವರು ನಾಲ್ಕನೇ ಮಹಡಿಯಿಂದ ಜಿಗಿದು ಸಾವಿಗೀಡಾಗಿದ್ದಾರೆ. ನಾಲ್ಕು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಕಟ್ಟಡದಲ್ಲಿದ್ದ ಇತರರನ್ನು ರಕ್ಷಿಸಿದರು. ಈ ಕಾರ್ಯಕ್ಕೆ ಸ್ಥಳೀಯರೂ ಕೂಡ ನೆರವಾದರು.

19 ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಆದರೆ, ಸಿಬ್ಬಂದಿ ಸಮರ್ಪಕ ಉಪಕರಣ ಹೊಂದಿರಲಿಲ್ಲ. ವಿದ್ಯಾರ್ಥಿಗಳು ಜಿಗಿಯುತ್ತಿದ್ದಾಗ ಅವರು ಮೂಕಪ್ರೇಕ್ಷಕರಾಗಿದ್ದರು ಎಂದು ಸ್ಥಳೀಯರು ದೂರಿದ್ದಾರೆ.

‘ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ’ ಎಂದು ಗುಜರಾತ್‌ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ತಿಳಿಸಿದ್ದಾರೆ.

**

ಅಗ್ನಿ ಅವಘಡದಲ್ಲಿ ಸಾವಿಗೀಡಾದವರಿಗೆ ನನ್ನ ಸಂತಾಪ. ತೊಂದರೆಗೆ ಒಳಗಾದವರಿಗೆ ಅಗತ್ಯ ಸಹಕಾರ ನೀಡುವಂತೆ ಗುಜರಾತ್‌ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ
- ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT