ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರತ್‌: ಕಾನುಬಾಹಿರ ಮಹಡಿ ನಿರ್ಮಾಣ

ಬೆಂಕಿ ದುರಂತ: ಸುರಕ್ಷತಾ ಕ್ರಮಕೈಗೊಳ್ಳಲು ನಿರ್ಲಕ್ಷ್ಯ
Last Updated 25 ಮೇ 2019, 19:34 IST
ಅಕ್ಷರ ಗಾತ್ರ

ಅಹಮದಾಬಾದ್‌: ಸೂರತ್‌ನಲ್ಲಿ ಬೆಂಕಿ ದುರಂತ ಸಂಭವಿಸಿದ ಕಟ್ಟಡದ ನಾಲ್ಕನೇ ಮಹಡಿಯನ್ನು ಕಾನೂನುಬಾಹಿರವಾಗಿ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕನೇ ಮಹಡಿಯಲ್ಲೇ ಕೋಚಿಂಗ್‌ ಸೆಂಟರ್ ನಡೆಸಲಾಗುತ್ತಿತ್ತು.ಹರ್ಷುಲ್‌ ಭಾಯಿ ವೆಕರಿಯಾ ಮತ್ತು ಜಿಗ್ನೇಶ್‌ ಸಾವ್‌ಜಿಭಾಯ್‌ ಎನ್ನುವವರು ಈ ಕಟ್ಟಡ ನಿರ್ಮಿಸಿದ್ದರು.ನಾಲ್ಕನೇ ಮಹಡಿ ನಿರ್ಮಾಣಕ್ಕೆ ಅನುಮತಿ ಪಡೆದಿರಲಿಲ್ಲ. ಜತೆಗೆ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಪಾರಾಗುವಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸುರಕ್ಷತಾ ಕ್ರಮಗಳನ್ನು ಅಳವಡಿಸದಿದ್ದರೂ ಆರೋಪಿಗಳಾದ ಹರ್ಷುಲ್‌ ಮತ್ತು ಜಿಗ್ನೇಶ್‌ ಅವರು ನಾಲ್ಕನೇ ಮಹಡಿಯನ್ನು ಕೋಚಿಂಗ್‌ ಸೆಂಟರ್‌ ನಡೆಸುತ್ತಿದ್ದ ಭಾರ್ಗವ್‌ ಭುತಾನಿಗೆ ಬಾಡಿಗೆಗೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ಈ ಮೂವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ಕೋಚಿಂಗ್‌ ಸೆಂಟರ್‌ ಮುಚ್ಚಲು ಆದೇಶ: ಬೆಂಕಿ ದುರಂತದ ಹಿನ್ನೆಲೆಯಲ್ಲಿ ಸೂರತ್‌, ಅಹಮದಾಬಾದ್‌, ವಡೋದರಾ ಮತ್ತು ಇತರ ನಗರಗಳಲ್ಲಿನ ಕೋಚಿಂಗ್‌ ಸೆಂಟರ್‌ಗಳನ್ನು ಮುಚ್ಚುವಂತೆ ಅಲ್ಲಿನ ಜಿಲ್ಲಾಡಳಿತಗಳು ಆದೇಶ ಹೊರಡಿಸಿವೆ. ಈ ಎಲ್ಲ ಕೇಂದ್ರಗಳ ತಪಾಸಣೆ ನಡೆಸಲು ತಂಡಗಳನ್ನು ರಚಿಸಲಾಗಿದೆ.

ಪೊಲೀಸ್‌, ಅಗ್ನಿಶಾಮಕದ ದಳದ ವೈಫಲ್ಯ

ಮಕ್ಕಳನ್ನು ರಕ್ಷಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ವಿಫಲರಾಗಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಅಗ್ನಿಶಾಮಕ ದಳದ ಅಧಿಕಾರಿಗಳು ಘಟನೆ ನಡೆದ 10 ನಿಮಿಷಕ್ಕೆ ಸ್ಥಳಕ್ಕೆ ಧಾವಿಸಿದ್ದರೂ ರಕ್ಷಣಾ ಕಾರ್ಯಾಚರಣೆ ನಡೆಸಲು ಉಪಕರಣಗಳು ಇರಲಿಲ್ಲ ಎಂದು ತಿಳಿಸಿದ್ದಾರೆ.

ಕಟ್ಟಡಕ್ಕೆ ಸುಗಮವಾಗಿ ತೆರಳಲು ಪೊಲೀಸರು ಸಹಕಾರ ನೀಡಲಿಲ್ಲ. ವಾಹನಗಳ ಸಂಚಾರ ದಟ್ಟಣೆಯನ್ನು ತೆರವುಗೊಳಿಸುವಲ್ಲಿ ವಿಫಲರಾದರು. ಕಟ್ಟಡದ ಸುತ್ತ ಜನ ಸಮೂಹವೇ ಸೇರಿದ್ದರೂ ಅವರನ್ನು ಚದುರಿಸಲು ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

12ನೇ ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರು

ಸಾವಿಗೀಡಾದವರಲ್ಲಿ 16 ವಿದ್ಯಾರ್ಥಿನಿಯರು ಸೇರಿದ್ದಾರೆ. ಇವರಲ್ಲಿ ಮೂವರು 12 ತರಗತಿ ವಿದ್ಯಾರ್ಥಿನಿಯರಾಗಿದ್ದರು. ಶನಿವಾರ ಪ್ರಕಟವಾದ 12ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಎಲ್ಲರೂ ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿನಿಯರಾದ ಯಶಿ ಕೆವಡಿಯಾ ಶೇಕಡ 67.75 ಮತ್ತು ಮಾನ್ಸಿ ವರ್ಸಾನಿ ಶೇಕಡ 52.03 ಹಾಗೂ ಹಸ್ತಿ ಸುರಾನಿ ಶೇಕಡ 69.39ರಷ್ಟು ಅಂಕಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹುತೇಕ ವಿದ್ಯಾರ್ಥಿನಿಯರು 17ರಿಂದ 18 ವಯಸ್ಸಿನವರು. 15 ವರ್ಷದ ಇಷಾ ಕಕಡಿಯಾ ಕಿರಿಯವಳು ಮತ್ತು ಗ್ರಿಷ್ಮಾ ಗಜೆರಾ ಎನ್ನುವ ವಿದ್ಯಾರ್ಥಿನಿ 22 ವರ್ಷದವರು. ಬಹುತೇಕ ವಿದ್ಯಾರ್ಥಿನಿಯರು ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ. ಇಬ್ಬರು ಅಥವಾ ಮೂವರು ನಾಲ್ಕನೇ ಮತ್ತು ಮೂರನೇ ಮಹಡಿಯಿಂದ ಜಿಗಿದು ಸಾವಿಗಿಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT