ನಿರ್ದಿಷ್ಟ ದಾಳಿಯ ವಿಡಿಯೊ ಬಹಿರಂಗ

7
ಕಾರ್ಯಾಚರಣೆಯ ದೃಶ್ಯ ಬಯಲು

ನಿರ್ದಿಷ್ಟ ದಾಳಿಯ ವಿಡಿಯೊ ಬಹಿರಂಗ

Published:
Updated:

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಭಾರತೀಯ ಸೇನೆ 2016ರ ಸೆಪ್ಟೆಂಬರ್ 28–29ರಂದು ನಡೆಸಿದ್ದ ನಿರ್ದಿಷ್ಟ ದಾಳಿಯ (ಸರ್ಜಿಕಲ್ ಸ್ಟ್ರೈಕ್) ವಿಡಿಯೊ ಬಹಿರಂಗವಾಗಿದೆ.

ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೊವನ್ನು ಪ್ರಮುಖ ಸುದ್ದಿವಾಹಿನಿಗಳು ಬುಧವಾರ ರಾತ್ರಿ ಪ್ರಸಾರ ಮಾಡಿವೆ.

ಬಂಕರ್‌ಗಳು ಮತ್ತು ಇತರೆ ಕಟ್ಟಡಗಳನ್ನು ಧ್ವಂಸ ಮಾಡುವ, ಭಯೋತ್ಪಾದಕರ ಶಿಬಿರಗಳನ್ನು ನಾಶಗೊಳಿಸುವ ಮತ್ತು ಕೆಲವು ಉಗ್ರರನ್ನು ಹತ್ಯೆ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಈ ವಿಡಿಯೊ ಅಧಿಕೃತ ಮೂಲಗಳಿಂದಲೇ ಲಭ್ಯವಾಗಿದೆ ಎಂದು ಸುದ್ದಿವಾಹಿನಿಗಳು ಹೇಳಿಕೊಂಡಿವೆ.

‘ನಿರ್ದಿಷ್ಟ ದಾಳಿ ನಡೆದ 636 ದಿನಗಳ ನಂತರ ಭಾರತೀಯ ಯೋಧರು ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೊ ಬಹಿರಂಗವಾಗಿದೆ. ಕಮಾಂಡೊಗಳ ಹೆಲ್ಮೆಟ್‌ಗಳಲ್ಲಿ ಮತ್ತು ಡ್ರೋನ್‌ ಕ್ಯಾಮೆರಾಗಳ ಮೂಲಕ ಚಿತ್ರೀಕರಿಸಿದ ದೃಶ್ಯಗಳು ಇದರಲ್ಲಿವೆ’ ಎಂದು ಝೀನ್ಯೂಸ್ ವರದಿ ಮಾಡಿದ್ದು, ವಿಡಿಯೊವನ್ನೂ ಪ್ರಸಾರ ಮಾಡಿದೆ.

‘ನಿರ್ದಿಷ್ಟ ದಾಳಿ ‘ನಕಲಿ ದಾಳಿ’ ಎಂದು ಕೇಂದ್ರ ಮಾಜಿ ಸಚಿವ ಅರುಣ್ ಶೌರಿ ಪ್ರತಿಪಾದಿಸಿದ ಮರುದಿನವೇ ನಮಗೆ ನಿರ್ದಿಷ್ಟ ದಾಳಿಯ ವಿಡಿಯೊ ದೊರೆತಿದ್ದು, ದಾಳಿ ನಡೆದಿರುವುದನ್ನು ರುಜುವಾತುಪಡಿಸಿದೆ’ ಎಂದು ಟೈಮ್ಸ್ ನೌ ಸುದ್ದಿವಾಹಿನಿ ವರದಿ ಮಾಡಿದೆ.

ನಿರ್ದಿಷ್ಟ ದಾಳಿಯಲ್ಲಿ ಭಯೋತ್ಪಾದಕರ ಏಳು ಶಿಬಿರಗಳನ್ನು ನಾಶಪಡಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿಕೊಂಡಿತ್ತು. ನಿರ್ದಿಷ್ಟ ದಾಳಿ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆಯಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.

ನೈಜ ವಿಡಿಯೊ ಎಂದ ಕಮಾಂಡರ್

‘ಈ ವಿಡಿಯೊ ನೈಜವಾದದ್ದು’ ಎಂದು ನಿರ್ದಿಷ್ಟ ದಾಳಿಯ ನೇರ ಉಸ್ತುವಾರಿ ವಹಿಸಿದ್ದ, ಸದ್ಯ ನಿವೃತ್ತರಾಗಿರುವ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ನಿರ್ದಿಷ್ಟ ದಾಳಿಯ ಸಂದರ್ಭ ಉಧಮ್‌ಪುರದಲ್ಲಿರುವ ತಮ್ಮ ಪ್ರಧಾನ ಕಚೇರಿಯಲ್ಲಿ ಕಾರ್ಯಾಚರಣೆಗಳ ದೃಶ್ಯಾವಳಿಗಳನ್ನು ನೇರ ಪ್ರಸಾರ ಮಾಡಲಾಗಿತ್ತು. ಈಗ ಬಹಿರಂಗವಾಗಿರುವ ವಿಡಿಯೊದಲ್ಲಿ ಅದೇ ದೃಶ್ಯಗಳಿವೆ ಎಂದು ಹೂಡಾ ತಿಳಿಸಿದ್ದಾರೆ.

ನಿರ್ದಿಷ್ಟ ದಾಳಿ ನಡೆದ ಬಳಿಕ ಅದಕ್ಕೆ ಸಾಕ್ಷಿಯಾಗಿ ವಿಡಿಯೊ ಬಹಿರಂಗ ಮಾಡಬೇಕು ಎಂಬುದು ನನ್ನ ನಿಲುವಾಗಿತ್ತು. ಈಗಲಾದರೂ ವಿಡಿಯೊ ಬಹಿರಂಗವಾಗಿರುವುದು ಒಳ್ಳೆಯದು ಎಂದೂ ಹೂಡಾ ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು...

* ನಿರ್ದಿಷ್ಟ ದಾಳಿ ಎಂದರೇನು?

* ನಿರ್ದಿಷ್ಟ ದಾಳಿ: ಒಂದು ಟಿಪ್ಪಣಿ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !