ಗುರುವಾರ , ಫೆಬ್ರವರಿ 25, 2021
30 °C

ಜಂಟಿ ಸೇನಾ ಕಸರತ್ತು: ಭಾರತ–ಅಮೆರಿಕ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: 2019ರಲ್ಲಿ ಭಾರತದ ಪೂರ್ವ ಕರಾವಳಿಯಲ್ಲಿ ಜಂಟಿ ಸೇನಾ ಕಸರತ್ತು ನಡೆಸುವ ಒಪ್ಪಂದಕ್ಕೆ ಭಾರತ ಹಾಗೂ ಅಮೆರಿಕ ಸಹಿ ಹಾಕಿವೆ. ಉಭಯ ದೇಶಗಳ ಸೇನೆಗಳ ನಡುವೆ ‘ಸುರಕ್ಷಿತ ಸೇನಾ ಸಂವಹನ ಒಪ್ಪಂದ’ಕ್ಕೂ ಅಂಕಿತ ಬಿದ್ದಿತು. 

ಭಾರತ–ಅಮೆರಿಕ ನಡುವಿನ ಮೊಟ್ಟಮೊದಲ 2+2 ಸಭೆ ಗುರುವಾರ ನಡೆಯಿತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೊ ಹಾಗೂ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಜೊತೆ ಮಹತ್ವದ ಮಾತುಕತೆ ನಡೆಸಿದರು.

‘ದಿ ಕಮ್ಯುನಿಕೇಷನ್ಸ್ ಕಂಪ್ಯಾಟಿಬಿಲಿಟಿ ಅಂಡ್ ಸೆಕ್ಯುರ್ ಅಗ್ರಿಮೆಂಟ್‌’ (ಸಿಒಎಂಸಿಎಎಸ್‌ಎ) ಒಪ್ಪಂದದ ಪ್ರಕಾರ, ಅಮೆರಿಕದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಭಾರತ ಬಳಸಿಕೊಳ್ಳಬಹುದು. ‘ಮೂರು ಮೂಲಭೂತ ಒಪ್ಪಂದ’ಗಳಲ್ಲಿ ಇದೂ ಒಂದಾಗಿದ್ದು, ಸಹಿ ಹಾಕುವಂತೆ ಭಾರತಕ್ಕೆ ಅಮೆರಿಕ ಬಹು ಹಿಂದಿನಿಂದಲೂ ಮನವೊಲಿಸುತ್ತಾ ಬಂದಿತ್ತು. ಅಮೆರಿಕ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನವನ್ನು ಭಾರತ ಸರಳವಾಗಿ ಬಳಸಿಕೊಳ್ಳಲು ಈ ಒಪ್ಪಂದದಿಂದ ಸಾಧ್ಯವಾಗಲಿದೆ.

ಸರಕು ಸಾಗಣೆಗೆ ಸಂಬಂಧಿಸಿದ ‘ಲಾಜಿಸ್ಟಿಕ್ಸ್ ಎಕ್ಸ್‌ಚೇಂಜ್ ಮೆಮೊರಂಡಮ್ ಆಫ್ ಅಗ್ರಿಮೆಂಟ್‌’ಗೆ ಹಿಂದಿನ ರಕ್ಷಣಾ ಸಚಿವ ಮನೋಹರ್ ಪ‍ರ್ರೀಕರ್ ಹಾಗೂ ಆಶ್ಟನ್ ಕಾರ್ಟರ್ ಸಹಿ ಹಾಕಿದ್ದರು. ಮೂರನೇ ಒಪ್ಪಂದಕ್ಕೆ ಇನ್ನಷ್ಟೇ ಸಹಿ ಹಾಕಬೇಕಿದೆ.

ಹಾಟ್‌ಲೈನ್: ವೇಗದ ಸಂವಹನ ಸಾಧಿಸಲು ಎರಡೂ ದೇಶಗಳ ರಕ್ಷಣಾ ಹಾಗೂ ವಿದೇಶಾಂಗ ಸಚಿವಾಲಯಗಳ ಕಚೇರಿಗಳಲ್ಲಿ ಹಾಟ್‌ಲೈನ್ ಸ್ಥಾಪನೆಗೂ ಇದೇ ವೇಳೆ ಒಪ್ಪಂದ ಏರ್ಪಟ್ಟಿತು.

**

ಹೊಸ ರೀತಿಯ ಮಾತುಕತೆ

2+2 ಎಂಬುದು ಅಮೆರಿಕ ಹಾಗೂ ಭಾರತದ ನಡುವಿನ ಹೊಸ ರೀತಿಯ ರಾಜತಾಂತ್ರಿಕ ಮಾತುಕತೆಯಾಗಿದೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ನಡುವೆ ಹೊಸ ರೀತಿಯ ಸಂವಹನ ಏರ್ಪಡಿಸಲು ನಿರ್ಧರಿಸಿದ್ದರು.

**

ಎಚ್‌1-ಬಿ ವೀಸಾ: ಭಾರತ ಮನವಿ

ಅಮೆರಿಕದ ಉದ್ದೇಶಿತ ಎಚ್‌1ಬಿ ವೀಸಾ ನಿಯಮ ಬದಲಾವಣೆ ವೇಳೆ ಸಮತೋಲಿತ ಹಾಗೂ ಸೂಕ್ಷ್ಮ ದೃಷ್ಟಿಕೋನ ಅಳವಡಿಸಿಕೊಳ್ಳುವಂತೆ ಭಾರತ ಅಮೆರಿಕವನ್ನು ಒತ್ತಾಯಿಸಿದೆ. ಇದು ಉಭಯ ದೇಶಗಳ ಜನರ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟರು.

‘ಪ್ರಧಾನಿ ಮೋದಿ ಹಾಗೂ ಟ್ರಂಪ್ ಅವರ ಸ್ನೇಹವನ್ನು ಗಮನದಲ್ಲಿಟ್ಟಿಕೊಂಡಿರುವ ಭಾರತೀಯರು, ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಅಮೆರಿಕ ನಡೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ಹೊಂದಿದ್ದಾರೆ’ ಎಂದು ಸುಷ್ಮಾ ಹೇಳಿದರು. ಈ ಸಂಬಂಧ 
ಮೈಕ್ ಪಾಂಪಿಯೊ ಅವರಿಗೆ ಸುಷ್ಮಾ ಮನವರಿಕೆ ಮಾಡಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.