ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತುಗೊಂಡ ಐಪಿಎಸ್‌ ಅಧಿಕಾರಿ ಐಐಎಂ ಪ್ರಾಧ್ಯಾಪಕ

ಕೇಂದ್ರದ ಆಕ್ಷೇಪಕ್ಕೆ ಗುಜರಾತ್‌ ಹೈಕೋರ್ಟ್‌ ಕಿಡಿ
Last Updated 24 ಜುಲೈ 2019, 19:46 IST
ಅಕ್ಷರ ಗಾತ್ರ

ಅಹಮದಾಬಾದ್‌: ಇಲ್ಲಿನ ಪ್ರತಿಷ್ಠಿತ ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂ) ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿ ರಜನೀಶ್‌ ರೈ ಅವರನ್ನು ನೇಮಿಸಿರುವುದಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ಈ ಐಪಿಎಸ್‌ ಅಧಿಕಾರಿ ಅಮಾನತಿನಲ್ಲಿರುವುದರಿಂದ ನೇಮಕ ಮಾಡಬಾರದಿತ್ತು ಎಂದು ಅದು ತಿಳಿಸಿದೆ.

ಇನ್ನೊಂದೆಡೆ, ಸ್ವಾಯತ್ತ ಸಂಸ್ಥೆಯ ಆಡಳಿತದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಗುಜರಾತ್‌ ಹೈಕೋರ್ಟ್‌ ಕಿಡಿಕಾರಿದೆ.

ಯಾವುದೇ ಸಂಸ್ಥೆಯಲ್ಲಿ ಹೊಸದಾಗಿ ಉದ್ಯೋಗ ದೊರೆತರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎನ್ನುವ ಸೂಚನೆ ನೀಡಬೇಕು ಎಂದು ಕೋರಿ ಗುಜರಾತ್‌ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ರೈ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.

ಅಮಾನತಿನಲ್ಲಿದ್ದರೂ ರೈ ಅವರನ್ನು ಏಕೆ ನೇಮಿಸಿಕೊಳ್ಳಲಾಗಿದೆ ಎನ್ನುವ ವಿವರಣೆ ಕೋರಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಐಐಎಂ–ಅಹಮದಾಬಾದ್‌ಗೆ ಪತ್ರ ಬರೆದಿದೆ ಎಂದು ರೈ ಅವರ ವಕೀಲ ರಾಹುಲ್‌ ಶರ್ಮಾ ನ್ಯಾಯಾಲಯದಲ್ಲಿ ವಿವರಿಸಿದರು.

ಈ ಮೊದಲು ಸಹ, ಕಾನೂನಿನ ಪ್ರಕಾರ ಸ್ವಯಂ ಇಚ್ಛೆಯಿಂದ ನಿವೃತ್ತಿ ಪಡೆಯಲು ರೈ ಅವರಿಗೆ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತ್ತು. ಸ್ವಯಂ ನಿವೃತ್ತಿ ಪಡೆಯುವ ಸಂದರ್ಭದಲ್ಲಿ ರೈ ಅಮಾನತುಗೊಂಡಿರಲಿಲ್ಲ.

1992ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ರೈ, 50 ವರ್ಷ ಪೂರ್ಣಗೊಂಡ ಬಳಿಕ 2018ರ ನವೆಂಬರ್‌ 30ರಂದು ಸ್ವಯಂ ನಿವೃತ್ತಿ ಕೋರಿದ್ದರು. ಆದರೆ, ಕೇಂದ್ರ ಸರ್ಕಾರ ಈ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ ರೈ ಮೊರೆ ಹೋಗಿದ್ದರು. ಅಮಾನತಿನಲ್ಲಿರದ ಸರ್ಕಾರಿ ನೌಕರ 50 ವರ್ಷ ಪೂರ್ಣಗೊಳಿಸಿದ್ದರೆ ಸ್ವಯಂ ನಿವೃತ್ತಿ ಪಡೆಯಲು ಅವಕಾಶವಿದೆ ಎಂದು ಅಖಿಲ ಭಾರತ ಸೇವಾ ನಿಯಮಾವಳಿಗಳು–1958ರಲ್ಲಿ ಹೇಳುತ್ತವೆ ಎಂದು ಪ್ರತಿಪಾದಿಸಿದ್ದರು.

ಇದೇ ವೇಳೆ, ಅನಧಿಕೃತವಾಗಿ ಅಧಿಕಾರ ಹಸ್ತಾಂತರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ರೈ ಅವರನ್ನು ಅಮಾನತುಗೊಳಿಸಿತ್ತು. ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಮೊದಲ ಬಾರಿ ಕೆಲವರನ್ನು ರೈ ಬಂಧಿಸಿದ್ದರು. ಮೇ ತಿಂಗಳಲ್ಲಿ ರೈ ಅವರನ್ನು ಐಐಎಂಎಗೆ ನೇಮಕ ಮಾಡಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT