ಮಂಗಳವಾರ, ಜೂನ್ 22, 2021
28 °C
ನಾರ್ವೆ, ಇಂಗ್ಲೆಂಡ್ ಮಾದರಿಯಾಗಲಿ;

ಈಜು ಕಲಿಕೆ, ಜಲಸುರಕ್ಷತೆ ಪಠ್ಯದ ಭಾಗವಾಗಲಿ: ತಜ್ಞರ ಅಭಿಮತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಈಜು ಮತ್ತು ಜಲಸುರಕ್ಷತೆ ತರಬೇತಿಯು ಶಾಲಾ ಪಠ್ಯಗಳಲ್ಲಿ ದೈಹಿಕ ಶಿಕ್ಷಣದ ಭಾಗವಾಗಿ ಕಡ್ಡಾಯವಾಗಿಸಬೇಕು ಎಂದು ಪರಿಣತರು ಸಲಹೆ ಮಾಡಿದ್ದಾರೆ.

ನಾರ್ವೆ ಮತ್ತು ಇಂಗ್ಲೆಂಡ್‌ನಲ್ಲಿ ಇಂಥ ಕ್ರಮವಿದೆ. ಭಾರತ ಅದರಿಂದ ಪ್ರೇರೇಪಣೆ ಪಡೆಯಬೇಕು. ನೀರಿನಲ್ಲಿ ಮುಳುಗಿ ಸಾಯುವುದು ಹಾಗೂ ಜಲಸಂಬಂಧಿ ಅವಘಡ ತಪ್ಪಿಸಲು ಇದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ 1994ರಿಂದ, ನಾರ್ವೆಯಲ್ಲಿ 2015ರಿಂದ ಜಲಸುರಕ್ಷತೆ ತರಬೇತಿ ಪಠ್ಯಕ್ರಮದ ಭಾಗವಾಗಿದೆ. ಭಾರತದಲ್ಲಿ ಅನೇಕ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಈಜುಕೊಳ ಸೌಲಭ್ಯವಿದೆ. ಆದರೆ, ಈಜು ಕಲಿಕೆ ಅಗತ್ಯ ಎಂಬುದಕ್ಕಿಂತಲೂ ವಿರಾಮ ವೇಳೆಯ ಚಟುವಟಿಕೆಯಾಗಿದೆ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಅನುಸಾರ, ವಿಶ್ವದಾದ್ಯಂತ ನೀರಿನಲ್ಲಿ ಮುಳುಗಿ ಸಾಯುವವರ ಸಂಖ್ಯೆ ವಾರ್ಷಿಕ 3.6 ಲಕ್ಷ. ರಾಷ್ಟ್ರೀಯ ಅಪರಾಧ ಮಾಹಿತಿ ಮಂಡಳಿ ಅಂಕಿ ಅಂಶಗಳಂತೆ ಭಾರತದಲ್ಲಿ ಪ್ರತಿ ನಿತ್ಯ ಸರಾಸರಿ 80 ಜನರು ನೀರಿನಲ್ಲಿ ಮುಳುಗಿ ಸಾಯುತ್ತಾರೆ.

ಜಲಸಂಬಂಧಿ ಅವಘಡಗಳು ಭಾರತದಲ್ಲಿ ಅಧಿಕ. ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗದಲ್ಲಿ ಸಾವಿನ ಸಂಖ್ಯೆ ಹೆಚ್ಚು. ಇದಕ್ಕೆ ಹೊಂಡ, ಕಾಲುವೆ, ನದಿ, ತೆರೆದ ಬಾವಿಗಳು ಜಲಪ್ರದೇಶ ಮುಕ್ತವಾಗಿರುವುದು ಕಾರಣ ಇರಬಹುದು ಎಂದು ಜಾರ್ಜ್ ಇನ್‌ಸ್ಟಿಟ್ಯೂಟ್‌ ಫಾರ್ ಗ್ಲೋಬಲ್‌ ಹೆಲ್ತ್‌ನ ಜಗನೂರ್‌ ಅಭಿಪ್ರಾಯಪಡುತ್ತಾರೆ.

ಭಾರತದಲ್ಲಿ ಜಲ ಸಂಬಂಧಿ ಸಾವುಗಳ ಸಂಖ್ಯೆ ಕುರಿತ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದ ಜಗನೂರ್ ಅವರು, ದರ್ಬಾನ್‌ನಲ್ಲಿ ಕಳೆದ ವಾರ ನಡೆದ ವಿಶ್ವ ಜಲ ಅವಘಡಗಳ ನಿಯಂತ್ರಣ ಸಮ್ಮೇಳನದಲ್ಲಿ ಈಜು ಕಲಿಕೆಯನ್ನು ಪಠ್ಯದ ಭಾಗವಾಗಿಸುವ ಚಿಂತನೆಯನ್ನು ಪ್ರತಿಪಾದಿಸಿದ್ದರು.

ಜಲ ಸಂಬಂಧಿ ಅವಘಡಗಳು ಹೆಚ್ಚುತ್ತಿರುವುದು ಭಾರತ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಮಕ್ಕಳಿಗೆ ಜಲಸುರಕ್ಷತೆ ಕುರಿತು ಅರಿವು ಮೂಡಿಸುವುದು ತುರ್ತು ಅಗತ್ಯವಾಗಿದೆ. ಸದ್ಯ, ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ಯಾವುದೇ ಶೈಕ್ಷಣಿಕ ಕಾರ್ಯಕ್ರಮಗಳು ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಪೋಷಕರ ಹೊಣೆಗಾರಿಕೆ ಹೆಚ್ಚಾಗಿದೆ. ಜಲತಾಣಗಳ ಸಮೀಪ ಸುರಕ್ಷತೆ ಕುರಿತು ಕಾಳಜಿ ವಹಿಸಬೇಕಾಗಿದೆ. ವಾಸ್ತವವಾಗಿ ಸೌಲಭ್ಯದ ಕೊರತೆ ಮತ್ತು ವೆಚ್ಚದ ಕಾರಣದಿಂದ ಈಜು ಕಲಿಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಕಳೆದ ವರ್ಷ ಮಕ್ಕಳಿಗೆ ಪ್ರತಿ ದಿನವೂ ಕ್ರೀಡಾ ತರಗತಿಯನ್ನು  ಕಡ್ಡಾಯಪಡಿಸಿತ್ತು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಇಷ್ಟದ ಆಟೋಟಕ್ಕೆ ಅವಕಾಶವಿತ್ತು. ಈಜು ಒಂದು ಆಯ್ಕೆಯಾಗಿದ್ದರೂ ಕಡ್ಡಾಯವಾಗಿರಲಿಲ್ಲ. ಸೌಲಭ್ಯಗಳ ಅಗತ್ಯವೂ ಇತ್ತು.

ರಾಷ್ಟ್ರೀಯ ಜೀವಸುರಕ್ಷತಾ ಸೊಸೈಟಿ (ಆರ್‌ಎಲ್‌ಎಸ್‌ಎಸ್‌)ಯು ಇತ್ತೀಚೆಗೆ ಕೇರಳದಲ್ಲಿ ಪ್ರಾಯೋಜಿಕವಾಗಿ ‘ಸ್ವಿಮ್‌ ಎನ್‌ ಸರ್ವೈವ್‌’ ಹೆಸರಿನ ಕಾರ್ಯಕ್ರಮ ಆರಂಭಿಸಿದ್ದು, ಮಕ್ಕಳಲ್ಲಿ ಜಲಸಂಬಂಧಿ ಅವಘಡಗಳ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು