ತಿರುಪತಿಯಲ್ಲಿ ಕಾಣಿಸಿಕೊಂಡಿದೆ ಹಂದಿಜ್ವರ: ಮಹಿಳೆ ಸಾವು

7

ತಿರುಪತಿಯಲ್ಲಿ ಕಾಣಿಸಿಕೊಂಡಿದೆ ಹಂದಿಜ್ವರ: ಮಹಿಳೆ ಸಾವು

Published:
Updated:
Deccan Herald

ತಿರುಪತಿ: ‘ಯಾತ್ರಿಗಳಿಂದ ಕಿಕ್ಕಿರಿದಿರುವ ತಿರುಪತಿಯಲ್ಲಿ ಹಂದಿಜ್ವರದ (swine flu) ಮೂರು ಪ್ರಕರಣಗಳು ವರದಿಯಾಗಿವೆ. ರೋಗದಿಂದ ಬಳಲುತ್ತಿದ್ದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಪರಿಸ್ಥಿತಿ ಅವಲೋಕಿಸಿದ ಚಿತ್ತೂರು ಜಿಲ್ಲಾಧಿಕಾರಿ ಪಿ.ಎಸ್.ಪ್ರದ್ಯುಮ್ನ ‘ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಕ್ತರು ಹೆದರಬೇಕಿಲ್ಲ’ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ’ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಟೆಲಿಕಾನ್‌ಫರೆನ್ಸ್ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ ಜಿಲ್ಲಾಧಿಕಾರಿ, ‘ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಶ್ರೀ ರಾಮನಾರಾಯಣ ಆಸ್ಪತ್ರೆಗಳಲ್ಲಿ ಹಂದಿಜ್ವರ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಲೆಂದು ವಿಶೇಷ ವಾರ್ಡ್‌ಗಳನ್ನು ರೂಪಿಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಯಾರೂ ಹೆದರಬೇಕಾದ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚಿತ್ತೂರು ಜಿಲ್ಲಾ ವೈದ್ಯಾಧಿಕಾರಿ ಆರ್.ರಾಮಗಿಡ್ಡಯ್ಯ, ‘ಹಂದಿಜ್ವರದ ಲಕ್ಷಣಗಳಿದ್ದ ಮೂವರು ಯಾತ್ರಾರ್ಥಿಗಳನ್ನು ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ಸೇರಿಸಲಾಗಿದೆ. ಆಸ್ಪತ್ರೆಗೆ ಸೇರಿದ್ದವರ ಪೈಕಿ, ಚಿತ್ತೂರಿನ ಗಂಗಾಧರನೆಲ್ಲೂರು ಗ್ರಾಮದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

‘ತಿರುಪತಿ ಮತ್ತು ತಿರುಮಲಗಳ ವಿಮಾನ ನಿಲ್ದಾಣ, ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ವ್ಯಾಪಕವಾಗಿ ಮುಖಗವಸು ಹಂಚಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಿರುಪತಿಯಲ್ಲಿ ಹಂದಿಜ್ವರದ ಪ್ರಮಾಣ ಅತಿಕಡಿಮೆ. ಈ ವರ್ಷ ಈವರೆಗೆ ಒಟ್ಟು ಒಂಬತ್ತು ಹಂದಿಜ್ವರದ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ 232 ಪ್ರಕರಣಗಳು ವರದಿಯಾಗಿದ್ದವು’ ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನ ಜನರು ಪವಿತ್ರ ಎಂದು ಕರೆಯುವ ‘ಪುರತ್ತಸಿ ಮಾಸಂ’ ಆರಂಭವಾಗಿರುವ ಹಿನ್ನೆಲೆಯಲ್ಲಿ ತಿರುಮಲ ಬೆಟ್ಟದಲ್ಲಿರುವ ಬಾಲಾಜಿ ದೇಗುಲಕ್ಕೆ ಪ್ರತಿದಿನ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಒಂದು ಲಕ್ಷ ದಾಟಿದೆ.

ಹಂದಿಜ್ವರದ ಲಕ್ಷಣಗಳೇನು?
* ಇದೊಂದು ಸಾಂಕ್ರಾಮಿಕ ರೋಗ. ಗಾಳಿಯ ಮೂಲಕ ರೋಗಾಣುಗಳು ಹರಡುತ್ತವೆ

* ಕೆಮ್ಮು, ಜ್ವರ, ಕಫಗಟ್ಟಿರುವ ಗಂಟಲು, ಸುಸ್ತು, ತಲೆನೋವು, ವಾಂತಿ ಮತ್ತು ಬೇಧಿ

ಹೇಗೆ ಹರಡುತ್ತೆ

* ರೋಗಾಣು ಬೆರೆತ ನೀರು, ಮಾಂಸ, ಸೇವಿಸುವುದರಿಂದ ರೋಗ ಹರಡಬಹುದು

* ಜ್ವರ ಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಎಂಜಲು ಸಿಡಿದ ಆಹಾರ ಸೇವಿಸಬಾರದು

ಎಚ್ಚರಿಕೆ ಕ್ರಮಗಳು

* ಮೂಗಿಗೆ ಸದಾ ಬಟ್ಟೆ, ಮಾಸ್ಕ್ ಕಟ್ಟಿಕೊಳ್ಳುವುದು

* ಬಿಸಿನೀರು ಸೇವನೆ 

* ನದಿ ಪಾತ್ರದ ಪ್ರವಾಸಿತಾಣಗಳಿಗೆ ಹೋಗುವಾಗ, ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ವೇಳೆ ಮುಖಕ್ಕೆ ಮಾಸ್ಕ್ ಧರಿಸಿ

* ಒಬ್ಬರು ಧರಿಸಿದ ಮಾಸ್ಕ್ ಮತ್ತೊಬ್ಬರು ಧರಿಸಬಾರದು

* ಕೈ, ಕಾಲು, ಮುಖ ತೊಳೆಯದೆ ಯಾವುದೇ ಆಹಾರ ಸೇವಿಸಬೇಡಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !