ಬುಧವಾರ, ಸೆಪ್ಟೆಂಬರ್ 18, 2019
23 °C

ಸಯ್ಯದ್ ಗಿಲಾನಿಗೆ ದೂರವಾಣಿ ಸೌಲಭ್ಯ: ಬಿಎಸ್‌ಎನ್‌ಎಲ್‌ ಅಧಿಕಾರಿಗಳ ಅಮಾನತು

Published:
Updated:

ಶ್ರೀನಗರ: ಜಮ್ಮು–ಕಾಶ್ಮೀರ ವಿಶೇಷಾಧಿಕಾರ ರದ್ದತಿ ಸಂದರ್ಭದಲ್ಲಿ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಗಿಲಾನಿಗೆ ಅಂತರ್ಜಾಲ, ದೂರವಾಣಿ ಸೌಲಭ್ಯ ಕಲ್ಪಿಸಿದ ಆರೋಪದಲ್ಲಿ ಬಿಎಸ್‌ಎನ್‌ಎಲ್‌ನ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ದೂರವಾಣಿ ಮತ್ತು ಅಂತರ್ಜಾಲ ಸೌಲಭ್ಯ ರದ್ದತಿಯಿಂದ ಇಡೀ ಕಣಿವೆ ರಾಜ್ಯ ಸುಮಾರು ಒಂದು ವಾರ ಸ್ತಬ್ಧವಾಗಿತ್ತು. ಅದೇ ವೇಳೆ ಹುರಿಯತ್ ನಾಯಕ ಗಿಲಾನಿ ತಮ್ಮ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದರು.

ಇದೇ ತಿಂಗಳ 5ರಂದು ಕೇಂದ್ರ ಸರ್ಕಾರವು ಜಮ್ಮು–ಕಾಶ್ಮೀರ ವಿಶೇಷಾಧಿಕಾರ ರದ್ದು ನಿರ್ಧಾರ ಪ್ರಕಟಿಸಿತ್ತು. ಜತೆಗೆ ರಾಜ್ಯ ವಿಂಗಡಣೆ ವಿಧೇಯಕವನ್ನು ಸಂಸತ್‌ನಲ್ಲಿ ಮಂಡಿಸಿತ್ತು. ಇದಕ್ಕೆ ಪೂರ್ವಭಾವಿಯಾಗಿ ಮತ್ತು ಭದ್ರತಾ ಕ್ರಮವಾಗಿ 4ರಿಂದ ಜಮ್ಮು–ಕಾಶ್ಮೀರದಾದ್ಯಂತ ಅಂತರ್ಜಾಲ, ದೂರವಾಣಿ ಸೇರಿದಂತೆ ಎಲ್ಲ ಸಂವಹನ ಸೇವೆ ಸ್ಥಗಿತಗೊಳಿಸಲಾಗಿತ್ತು. ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿರಿಸಲಾಗಿತ್ತು.

ಇಷ್ಟೆಲ್ಲ ಕ್ರಮ ಕೈಗೊಂಡ ಹೊರತಾಗಿಯೂ ಸಯ್ಯದ್ ಗಿಲಾನಿ ಅವರ ಮನೆಗೆ ಸ್ಥಿರ ದೂರವಾಣಿ ಮತ್ತು ಬ್ರಾಡ್‌ಬ್ಯಾಂಡ್‌ ಸೌಲಭ್ಯ ಆಗಸ್ಟ್‌ 8ರವರೆಗೆ ಲಭ್ಯವಿತ್ತು. ಗಿಲಾನಿ ಅವರು ಟ್ವೀಟ್ ಮಾಡುವವರೆಗೂ ಈ ವಿಷಯದ ಬಗ್ಗೆ ಅಧಿಕಾರಿಗಳಿಗೆ ಸುಳಿವೇ ಇರಲಿಲ್ಲ. ಇದಾದ ಬಳಿಕ ಗಿಲಾನಿ ಸೇರಿದಂತೆ ಹಲವರ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡುವಂತೆ ಜಮ್ಮು–ಕಾಶ್ಮೀರ ಪೊಲೀಸರು ಟ್ವಿಟರ್‌ಗೆ ಸೂಚಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ.

Post Comments (+)