ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತನಾಳಗಳಲ್ಲಿ ಅಡಚಣೆ: ಚಿಕಿತ್ಸೆ ಏನು? ಹೇಗೆ?

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಅಂದು ನನ್ನ ಹತ್ತನೆಯ ತರಗತಿಯ ಸಹಪಾಠಿ ಗಿರೀಶ ಫೋನ್ ಮಾಡಿ ‘ನನ್ನ ಅಣ್ಣನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಹೃದಯದ ರಕ್ತನಾಳದಲ್ಲಿ ಅಡಚಣೆಯಿದೆ, ದೊಡ್ಡ ಶಸ್ತ್ರಚಿಕಿತ್ಸೆಯೇನೂ ಬೇಡ, ತೂರುನಾಳದ (ಕ್ಯಾಥೇಟರ್) ಸಹಾಯದಿಂದಲೇ ಅಡಚಣೆಯನ್ನು ಸರಿಪಡಿಸುತ್ತೇವೆ ಎಂದಿದ್ದ ವೈದ್ಯರು ಈಗ ತೆರೆದ ಎದೆಯ ಶಸ್ತ್ರಚಿಕಿತ್ಸೆ ಮಾಡಬೇಕು ಎನ್ನುತ್ತಿದ್ದಾರೆ, ನನಗೊಂದೂ ಅರ್ಥವಾಗುತ್ತಿಲ್ಲ...?’ ಎಂದಿದ್ದ. ನಾನು ಅವನಿಗೆ ಹೃದಯದ ರಕ್ತನಾಳಗಳ ಅಡಚಣೆಗೆ ಚಿಕಿತ್ಸೆ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದು ವಿವರವಾಗಿ ತಿಳಿಸಿ ಹೇಳಿದ ಮೇಲೆಯೇ ಆತನಿಗೆ ಸಮಾಧಾನವಾಗಿದ್ದು.

ಹೌದು, ಹೃದಯದ ರಕ್ತನಾಳಗಳಲ್ಲಿನ ಅಡಚಣೆಗೆ ವಿವಿಧ ರೀತಿಯ ಚಿಕಿತ್ಸೆಗಳು ಲಭ್ಯ. ಹೃದಯರೋಗತಜ್ಞರು ವ್ಯಕ್ತಿಯನ್ನು ಕೆಲವು ತಪಾಸಣೆಗಳಿಗೆ ಒಳಪಡಿಸಿ ಅವುಗಳ ವರದಿಗಳ ಆಧಾರದ ಮೇಲೆ ಯಾವ ಚಿಕಿತ್ಸೆಯು ವ್ಯಕ್ತಿಗೆ ಸೂಕ್ತ ಎಂಬುದನ್ನು ನಿರ್ಧರಿಸುತ್ತಾರೆ.

ದೇಹದ ಯಾವುದೇ ಭಾಗದ ರಕ್ತನಾಳಗಳಲ್ಲಿನ ಅಡಚಣೆ ಅಪಾಯಕಾರಿ. ಅದರಲ್ಲಿಯೂ ಹೃದಯಕ್ಕೆ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿನ ಅಡಚಣೆ ಜೀವಕ್ಕೇ ಸಂಚಕ! ಹೃದಯದ ಸ್ನಾಯುಗಳಿಗೆ ಒಂದು ಕ್ಷಣ ರಕ್ತದ ಪೂರೈಕೆಯಲ್ಲಿ ವ್ಯತ್ಯಯವಾದರೂ ವ್ಯಕ್ತಿ ಹೃದಯಾಘಾತಕ್ಕೆ ತುತ್ತಾಗುತ್ತಾನೆ. ಹೃದಯದ ಸ್ನಾಯುಗಳ ಯಾವ ಭಾಗ ಹಾಗೂ ಎಷ್ಟು ವಿಸ್ತಾರದ ಭಾಗವು ರಕ್ತಪರಿಚಲನೆಯ ವ್ಯತ್ಯಯದಿಂದ ಹಾನಿಗೊಳಗಾಗಿದೆ ಎಂಬ ಅಂಶದ ಮೇಲೆ ಹೃದಯಾಘಾತದ ತೀವ್ರತೆ ಅವಲಂಬಿತವಾಗಿರುತ್ತದೆ.

ವೈದ್ಯವಿಜ್ಞಾನದ ಹೃದಯರೋಗಗಳ ವಿಭಾಗವು ಇದೀಗ ಸಾಕಷ್ಟು ಮುಂದುವರೆದಿದ್ದು, ವ್ಯಕ್ತಿಯ ಹೃದಯದ ರಕ್ತನಾಳಗಳಲ್ಲಿನ ಅಡಚಣೆಯನ್ನು ಮೊದಲೇ ಪತ್ತೆ ಹಚ್ಚಿ ಅದನ್ನು ಸರಿಪಡಿಸಬಹುದಾಗಿದೆ.

ಹೃದಯದ ರಕ್ತಪೂರೈಕೆಯಲ್ಲಿ ವ್ಯತ್ಯಯವಾದಾಗ ವ್ಯಕ್ತಿಯಲ್ಲಿ ಕಾಣಿಸಬಹುದಾದ ಗುಣಲಕ್ಷಣಗಳೇನು?

* ಆಯಾಸ, ದೇಹದಲ್ಲಿ ಒಂದು ರೀತಿಯ ಅಹಿತಕರ ಅನುಭವ, ಉಸಿರಾಡಲು ಕಷ್ಟವೆನಿಸುವುದು.

* ಎದೆಯ ಎಡಭಾಗದಲ್ಲಿ ತೀವ್ರವಾದ ನೋವು.

* ಎದೆಯ ಎಡಭಾಗದಿಂದ ನೋವು ಒಮ್ಮೊಮ್ಮೆ ಎಡಭುಜ, ಎಡಕೈ ಹಾಗೂ ಎಡಭಾಗದ ಬೆನ್ನಿನವರೆಗೂ ಹರಿದಂತಾಗಬಹುದು.

* ಬೆವರುವಿಕೆ, ತಲೆನೋವು, ವಾಂತಿ ಬಂದಂತಾಗುವುದು.

* ಸ್ವಲ್ಪ ದೂರ ನಡೆದಾಗ ಅಥವಾ ಮೆಟ್ಟಿಲುಗಳನ್ನು ಏರಿದಾಗ ದಣಿವೆನಿಸುವುದು, ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು.

ಇಂತಹ ಗುಣಲಕ್ಷಣಗಳನ್ನು ಹೊಂದಿದ ವ್ಯಕ್ತಿಯು ಆಸ್ಪತ್ರೆಗೆ ಧಾವಿಸಿದಾಗ ಹೃದಯರೋಗತಜ್ಞರು ಕೆಲವು ಮುಖ್ಯ ತಪಾಸಣೆಗಳನ್ನು ಮಾಡಿ ಸಮಸ್ಯೆಯು ಇಂತಹದ್ದೇ ಎಂದು ದೃಢಪಡಿಸಿಕೊಳ್ಳುತ್ತಾರೆ; ನಂತರವೇ ಚಿಕಿತ್ಸೆಗೆ ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಮಾಡಬಹುದಾದ ಪರೀಕ್ಷೆಗಳೆಂದರೆ – ಇ.ಸಿ.ಜಿ. ಪರೀಕ್ಷೆ (ಎಲೆಕ್ಟ್ರೋ ಕಾರ್ಡಿಯೋ ಗ್ರ್ಯಾಮ್), ಟ್ರೆಡ್ ಮಿಲ್ ಪರೀಕ್ಷೆ ಮತ್ತು ಹೃದಯದ ಸ್ಕ್ಯಾನಿಂಗ್ (ಎಕೋ ಕಾರ್ಡಿಯೋ ಗ್ರ್ಯಾಫಿ) ಪರೀಕ್ಷೆ. ಈ ಪರೀಕ್ಷೆಗಳಿಂದ ವ್ಯಕ್ತಿಯ ತೊಂದರೆಗೆ ನಿಖರವಾದ ಕಾರಣ ತಿಳಿದು ಬರುತ್ತದೆ. ಒಂದು ವೇಳೆ ಹೃದಯದ ರಕ್ತನಾಳಗಳಲ್ಲಿ ಅಡಚಣೆ ಇರುವ ಸೂಚನೆಯಿದ್ದರೆ ಕೂಡಲೇ ಎರಡನೆಯ ಹಂತದ ಪರೀಕ್ಷೆಯಾದ ಕರೋನರಿ ಆ್ಯಂಜಿಯೋಗ್ರ್ಯಾಮ್ ಪರೀಕ್ಷೆಗೆ ವ್ಯಕ್ತಿಯನ್ನು ಒಳಪಡಿಸುತ್ತಾರೆ.

ಏನಿದು ಕರೋನರಿ ಆ್ಯಂಜಿಯೋಗ್ರ್ಯಾಮ್?
ಹೃದಯದ ರಕ್ತನಾಳಗಳಲ್ಲಿನ ಅಡಚಣೆಯನ್ನು ಪತ್ತೆ ಹಚ್ಚುವ ತಪಾಸಣೆಯೇ ಕರೋನರಿ ಆ್ಯಂಜಿಯೋಗ್ರ್ಯಾಮ್. ಈ ತಪಾಸಣೆಯಲ್ಲಿ ವ್ಯಕ್ತಿಯ ಕೈ ಅಥವಾ ಕಾಲಿನ ಮುಖ್ಯ ರಕ್ತನಾಳದ ಮೂಲಕ ಒಂದು ವರ್ಣದ್ರವ್ಯವನ್ನು ರಕ್ತವ್ಯೂಹಕ್ಕೆ ಹರಿಯ ಬಿಡಲಾಗುತ್ತದೆ. ಆ ವಸ್ತುವು ಹೃದಯದ ರಕ್ತನಾಳಗಳಲ್ಲಿ ಹರಿದಾಡುವ ಚಿತ್ರಣವನ್ನು ಹೃದಯರೋಗತಜ್ಞರು ಕಂಪ್ಯೂಟರ್ ಪರದೆಯ ಮೇಲೆ ಗಮನಿಸುವ ವ್ಯವಸ್ಥೆಯಿರುತ್ತದೆ. ಆ ದ್ರವ್ಯವು ರಕ್ತನಾಳಗಳಲ್ಲಿ ಸರಾಗವಾಗಿ ಹರಿಯಿತು ಎಂದರೆ ಅಲ್ಲಿ ಅಡಚಣೆ ಇಲ್ಲ ಎಂದರ್ಥ.

ಒಂದು ವೇಳೆ ಅಲ್ಲಿ ಯಾವುದಾದರೂ ರಕ್ತನಾಳಗಳಲ್ಲಿ ಅಡಚಣೆ ಇದ್ದರೆ, ಎಷ್ಟು ರಕ್ತನಾಳಗಳಲ್ಲಿ ಅಡಚಣೆ ಇದೆ, ಅಡಚಣೆ ರಕ್ತನಾಳದ ಎಷ್ಟು ಭಾಗವನ್ನು ಆವರಿಸಿದೆ ಎಂಬ ಎಲ್ಲ ವಿವರಗಳನ್ನು ಈ ತಪಾಸಣೆಯಿಂದ ತಿಳಿಯಬಹುದು. ಈ ತಪಾಸಣೆಗೆ ರೋಗಿಯ ಅರೆವಳಿಕೆ (ಪ್ರಜ್ಞೆ ತಪ್ಪಿಸುವ) ಅಗತ್ಯವಿರುವುದಿಲ್ಲ. ವರ್ಣದ್ರವ್ಯವನ್ನು ಹರಿಯ ಬಿಡಲು ಬಳಸುವ ಕೈ ಅಥವಾ ಕಾಲಿನ ರಕ್ತನಾಳದ ಸುತ್ತಲೂ ಸ್ಥಳೀಯ ಅರೆವಳಿಕೆಯ ಮದ್ದನ್ನು ಮಾತ್ರ ಕೊಡಲಾಗುತ್ತದೆ. ಹಾಗಾಗಿ ಈ ತಪಾಸಣೆಯ ಸಂದರ್ಭದಲ್ಲಿ ರೋಗಿಯು ಎಚ್ಚರವಾಗಿಯೇ ಇರುತ್ತಾರೆ. ಈ ತಪಾಸಣೆಯಿಂದ ರಕ್ತನಾಳಗಳಲ್ಲಿ ಇರಬಹುದಾದ ಕ್ಯಾಲ್ಸಿಯಂನಂತಹ ಅಥವಾ ಕೊಬ್ಬಿನಂತಹ ವಸ್ತುವಿನ ಶೇಖರಣೆ ಇದೆಯೇ ಎಂಬುದರ ಬಗ್ಗೆಯೂ ತಿಳಿದು ಬರುತ್ತದೆ.

ರಕ್ತನಾಳದಲ್ಲಿನ ತಡೆಯು ಸೌಮ್ಯ ಸ್ವರೂಪದ್ದಾಗಿದ್ದರೆ ಅಥವಾ ಕೇವಲ ಕೊಬ್ಬಿನಂತಹ ವಸ್ತುವಿನ ಶೇಖರಣೆಯಷ್ಟೇ ಕಂಡುಬಂದರೆ ಅದಕ್ಕೆ ಕೆಲವು ಕೊಬ್ಬು ಕರಗಿಸುವ ಔಷಧಗಳು ಹಾಗೂ ಜೀವನಶೈಲಿಯ ಬದಲಾವಣೆಯಷ್ಟೇ ಚಿಕಿತ್ಸೆಯಾಗುತ್ತದೆ. ಆದರೆ, ಅಡಚಣೆಯೇನಾದರೂ ಒಂದಕ್ಕಿಂತ ಹೆಚ್ಚು ರಕ್ತನಾಳಗಳಲ್ಲಿ ಕಂಡು ಬಂದರೆ ಅಥವಾ ಅಡಚಣೆಯು ದೊಡ್ಡ ಗಾತ್ರದ್ದಾಗಿದ್ದು ರಕ್ತನಾಳವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದರೆ ಅಥವಾ ಅಡಚಣೆಯು ಹೃದಯದ ಮುಖ್ಯ ರಕ್ತನಾಳದಲ್ಲಿದ್ದರೆ ಆಗ ಅದನ್ನು ತೆಗೆದು ಹಾಕುವ ಚಿಕಿತ್ಸೆ ಮಾಡಬೇಕಾಗುತ್ತದೆ.

ರಕ್ತನಾಳದಲ್ಲಿನ ಅಡಚಣೆಯ ಚಿಕಿತ್ಸೆ?
ಅಡಚಣೆಯು ಎಷ್ಟು ರಕ್ತನಾಳಗಳಲ್ಲಿದೆ, ಯಾವ ರಕ್ತನಾಳದಲ್ಲಿದೆ ಹಾಗೂ ಯಾವ ಗಾತ್ರದ್ದಿದೆ – ಎಂಬ ಅಂಶಗಳನ್ನು ಮತ್ತು ವ್ಯಕ್ತಿಯ ವಯಸ್ಸು, ಅವನ ಇತರ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಹೃದಯರೋಗತಜ್ಞರು ಚಿಕಿತ್ಸೆಗೆ ಮುಂದಾಗುತ್ತಾರೆ.

ಮುಖ್ಯವಾಗಿ ಎರಡು ಬಗೆಯ ಚಿಕಿತ್ಸೆಗಳು ಲಭ್ಯವಿವೆ.
1. ಪರ್ ಕ್ಯುಟೇನಿಯಸ್ ಟ್ರ್ಯಾನ್ಸ್ ಲುಮಿನಲ್ ಕರೋನರಿ ಆ್ಯಂಜಿಯೋಪ್ಲ್ಯಾಸ್ಟಿ ( ಪಿ. ಟಿ ಸಿ. ಎ.)
2. ಕರೋನರಿ ಆರ್ಟರಿ ಬೈಪಾಸ್ ಗ್ರ್ಯಾಫ್ಟಿಂಗ್ (ಸಿ. ಎ. ಬಿ. ಜಿ. )

ಪರ್ ಕ್ಯುಟೇನಿಯಸ್ ಟ್ರ್ಯಾನ್ಸ್ ಲುಮಿನಲ್ ಕರೋನರಿ ಆ್ಯಂಜಿಯೋಪ್ಲ್ಯಾಸ್ಟಿ ( ಪಿ. ಟಿ ಸಿ. ಎ): ಈ ಚಿಕಿತ್ಸೆಯಲ್ಲಿ ತೊಡೆಯ ಭಾಗದ ರಕ್ತನಾಳದ ಮೂಲಕ ಒಂದು ಬಲೂನಿನಂತಹ ವಸ್ತುವನ್ನು ಹಾಗೂ ಕೊಳವೆಯಾಕಾರದ ಒಂದು ವಸ್ತುವನ್ನು ತೂರು ನಾಳದ ಸಹಾಯದಿಂದ ತೂರಿಸುತ್ತಾರೆ. ಈ ಬಲೂನು ಮತ್ತು ಕೊಳವೆಯಾಕರದ ವಸ್ತು (ಸ್ಟೆಂಟ್) ಅಡಚಣೆ ಇರುವ ಹೃದಯದ ರಕ್ತನಾಳವನ್ನು ತಲುಪಿದ ಕೂಡಲೇ ಬಲೂನನ್ನು ಹಿಗ್ಗಿಸಲಾಗುತ್ತದೆ. ಆ ಬಲೂನನ್ನು ಕೊಳವೆಯಾಕಾರದ ವಸ್ತುವಿನ ಬೆಂಬಲದೊಂದಿಗೆ ರಕ್ತನಾಳದಲ್ಲಿ ಅಳವಡಿಸಲಾಗುತ್ತದೆ.

ಇದು ಅಲ್ಲಿದ್ದ ತಡೆಯನ್ನು ತೆಗೆದು ರಕ್ತಸಂಚಾರ ಸರಾಗವಾಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ಒಂದೇ ರಕ್ತನಾಳದಲ್ಲಿ ತಡೆಯಿದ್ದು ವ್ಯಕ್ತಿಯ ಆರೋಗ್ಯ ಸ್ಥಿತಿಯು ಸಮರ್ಪಕವಾಗಿದ್ದರೆ ಈ ಚಿಕಿತ್ಸೆಯನ್ನು ಆರಿಸಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಗೆ ಮೊದಲು ವ್ಯಕ್ತಿಗೆ ಸಂಪೂರ್ಣ ಅರೆವಳಿಕೆಯ ಅಗತ್ಯವಿರುವುದಿಲ್ಲ. ಕೇವಲ ಒಂದು ಅಥವಾ ಎರಡು ದಿನಗಳಲ್ಲಿ ರೋಗಿಯು ಮನೆಗೆ ಮರಳಬಹುದು.

ಕರೋನರಿ ಆರ್ಟರಿ ಬೈಪಾಸ್ ಗ್ರ್ಯಾಫ್ಟಿಂಗ್ (ಸಿ.ಎ.ಬಿ.ಜಿ.): ಈ ಬಗೆಯ ಚಿಕಿತ್ಸೆಯನ್ನು ಹೃದಯದ ಶಸ್ತ್ರಚಿಕಿತ್ಸಾತಜ್ಞರು ಮಾಡುತ್ತಾರೆ. ಇದು ಒಂದು ತೆರೆದ ಎದೆಯ ಶಸ್ತ್ರಚಿಕಿತ್ಸೆ. ಈ ಚಿಕಿತ್ಸೆಯಲ್ಲಿ ಅಡಚಣೆಯಿರುವ ರಕ್ತನಾಳದ ಭಾಗವನ್ನು ತೆಗೆದು ಅಲ್ಲಿ ಕಾಲಿನಿಂದ ಅಥವಾ ಎದೆಯ ಭಾಗದಿಂದ ತೆಗೆದ ಬೇರೊಂದು ರಕ್ತನಾಳವನ್ನು ಜೋಡಿಸುತ್ತಾರೆ. ಸಾಮಾನ್ಯವಾಗಿ ಒಂದಕ್ಕಿಂತಲೂ ಹೆಚ್ಚು ರಕ್ತನಾಳಗಳಲ್ಲಿ ಅಡಚಣೆಯಿದ್ದಾಗ, ಅಡಚಣೆಯು ದೊಡ್ಡ ಗಾತ್ರದಿದ್ದಾಗ, ವ್ಯಕ್ತಿಗೆ ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆಗಳು, ಹೃದಯದ ವೈಫಲ್ಯ ಮುಂತಾದ ಸಮಸ್ಯೆಗಳು ಇದ್ದಾಗ ಈ ಬಗೆಯ ಚಿಕಿತ್ಸೆಯನ್ನು ಆರಿಸಿಕೊಳ್ಳಲಾಗುತ್ತದೆ. ಈ ಚಿಕಿತ್ಸೆಯಲ್ಲಿ ರೋಗಿಯು ಹತ್ತರಿಂದ ಹದಿನೈದು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಸೂಚಿಸುವ ಕೆಲವು ಔಷಧಗಳನ್ನು ರೋಗಿಯು ತಪ್ಪದೇ ತೆಗೆದುಕೊಳ್ಳಬೇಕಾಗುತ್ತದೆ.

ಅಡಚಣೆಗೆ ಕಾರಣಗಳೇನು..?
* ಆನುವಂಶೀಯ ಅಂಶಗಳು
* ಅಧಿಕ ರಕ್ತದೊತ್ತಡ
* ಮಧುಮೇಹ
* ಧೂಮಪಾನ
* ಅತಿಯಾದ ಮದ್ಯಪಾನ
* ಜಡ ಜೀವನಶೈಲಿ
* ಆಹಾರದಲ್ಲಿ ಅಧಿಕ ಕೊಬ್ಬಿನಾಂಶ, ಮೊದಲಾದುವು

ಸೂಚನೆ: ಈ ಲೇಖನದಲ್ಲಿ ‘ರಕ್ತನಾಳ’ ಎಂದರೆ ಅಪಧಮನಿ, ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸುವ ರಕ್ತನಾಳ.

ಮುಂಜಾಗ್ರತಾ ಕ್ರಮಗಳಾವುವು?
* ನೀವು ಅಧಿಕ ರಕ್ತದೊತ್ತಡ ಅಥವಾ ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದು ನಿಯಂತ್ರಣದಲ್ಲಿದೆಯೇ ಎಂಬುದನ್ನು ನಿಯಮಿತವಾದ ತಪಾಸಣೆಗಳಿಂದ ಖಾತ್ರಿ ಪಡಿಸಿಕೊಳ್ಳಿರಿ.
* ಧೂಮಪಾನ ಹಾಗೂ ಮದ್ಯಪಾನವನ್ನು ವರ್ಜಿಸಿ.
* ಆಹಾರದಲ್ಲಿ ಅಧಿಕ ಕೊಬ್ಬಿನಾಂಶ ಬೇಡ. ಹಣ್ಣು-ತರಕಾರಿ ಸೇವನೆಗೆ ಆದ್ಯತೆ ನೀಡಿ.
* ಪ್ರತಿದಿನವೂ ಯಾವುದಾದರೊಂದು ಬಗೆಯ ವ್ಯಾಯಾಮ ಅಥವಾ ನಡಿಗೆಯನ್ನು ತಪ್ಪಿಸಬೇಡಿ.
* ವರ್ಷಕ್ಕೊಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಿ. ವೈದ್ಯರ ಸಲಹೆಯ ಮೇರೆಗೆ ಇ.ಸಿ.ಜಿ. ಪರೀಕ್ಷೆಯೂ ಅದರಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT