ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಯಲ್ಲಿ ಬಂಡಾಯದ ಬಾವುಟ’

ತೀವ್ರಗೊಂಡ ಕೆಜೆಪಿ–ಬಿಜೆಪಿ ತಿಕ್ಕಾಟ; ಮೂಲ ಕಾರ್ಯಕರ್ತರ ಅಸಮಾಧಾನ
Last Updated 4 ಏಪ್ರಿಲ್ 2018, 14:22 IST
ಅಕ್ಷರ ಗಾತ್ರ

ವಿಜಯಪುರ: ಅಧಿಕಾರದ ಚುಕ್ಕಾಣಿ ಹಿಡಿಯುವ ಹೊಂಗನಸಿನಲ್ಲಿ ವಿಧಾನ ಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ, ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಕಡು ಬೇಸಿಗೆಯ ಬಿಸಿಲ ಝಳ ಹೆಚ್ಚಿದಂತೆ, ಬಂಡಾಯದ ಬಿಸಿಯೂ ತೀವ್ರ ಪ್ರಮಾಣದಲ್ಲಿ ತಾಕಲಾರಂಭಿಸಿದೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರ, ಮುದ್ದೇಬಿಹಾಳ, ಇಂಡಿ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತುಸು ಹೆಚ್ಚಿದ್ದರೆ, ಬಸವನಬಾಗೇವಾಡಿ, ನಾಗಠಾಣದಲ್ಲಿ ಬಿಜೆಪಿ–ಕೆಜೆಪಿ ಶೀತಲ ಸಮರ ಬಿರುಸಿನಿಂದ ನಡೆದಿದೆ.ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ದಿನ ಘೋಷಣೆ ಬಳಿಕವೂ ಮುಖಂಡ ಶಂಭುಲಿಂಗ ಕಕ್ಕಳಮೇಲಿ ‘ಒನ್ ಮ್ಯಾನ್‌ ಆರ್ಮಿ ಶೋ’ ಮುಂದುವರೆಸಿದ್ದು, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ವಲಸಿಗರು–ಮೂಲ ಕಾರ್ಯಕರ್ತರ ತಿಕ್ಕಾಟ ನಡೆದಿದೆ.

ರಾಜುಗೌಡ ರಾಜೀನಾಮೆ?

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಹಿಂದಿನ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ, ನಂತರದ ಬೆಳವಣಿಗೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಜಿಲ್ಲಾ ಘಟಕದ ಉಪಾ ಧ್ಯಕ್ಷರಾಗಿದ್ದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಬಿಜೆಪಿಗೆ ರಾಜೀನಾಮೆ ನೀಡುವುದು ಖಚಿತವಾಗಿದೆ. ದೇವರ ಹಿಪ್ಪರಗಿಯಿಂದಲೇ ಜೆಡಿಎಸ್ ಅಭ್ಯರ್ಥಿ ಯಾಗಿ ಕಣಕ್ಕಿಳಿಯಲಿದ್ದಾರೆ. ಇದು ಜಿಲ್ಲಾ ಬಿಜೆಪಿಗೆ ಮೊದಲ ಮರ್ಮಾಘಾತ.ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಸೇರ್ಪಡೆಗೆ ಮುದ್ದೇಬಿಹಾಳ ಟಿಕೆಟ್‌ ಆಕಾಂಕ್ಷಿಗಳು, ಮಂಡಲ ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಟಸ್ಥರಾಗಿ ಉಳಿಯುವ ಬೆದರಿಕೆಯ ತಂತ್ರಗಾರಿಕೆ ನಡೆಸಿದ್ದಾರೆ. ಸಿ.ಎಸ್‌.ನಾಡಗೌಡ ‘ಕೈ’ ಚಳಕ ಯಾವ ರೀತಿ ನಡೆಯಲಿದೆ ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ.ಇಂಡಿ ಮಂಡಲದಲ್ಲಿ ಬಿಜೆಪಿ–ಕೆಜೆಪಿ ತಿಕ್ಕಾಟ ಬಿರುಸುಗೊಂಡಿದೆ. ಮಾಜಿ ಶಾಸಕ ರವಿಕಾಂತ ಪಾಟೀಲ ವಿರುದ್ಧ ಟಿಕೆಟ್‌ ಆಕಾಂಕ್ಷಿಗಳು ಒಟ್ಟಾಗಿ ಗುಡುಗಿದ್ದಾರೆ.‘ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡರೆ, ವಿಜಯಪುರ ಮಹಾನಗರ ಪಾಲಿಕೆಯ ಹತ್ತು ಬಿಜೆಪಿ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದೇವೆ ’ಎಂದು ಸದಸ್ಯ ಗೋಪಾಲ ಘಟಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಅಪ್ಪು ಬೆಂಬಲಿಗರ ಆಕ್ರೋಶ

ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗರು, ಮಂಗಳವಾರ ರಾತ್ರಿ ಶೆಟ್ಟರ ನಿವಾಸದಲ್ಲಿ ಸಭೆ ನಡೆಸಿದರು.‘ಇನ್ನೂ ಕಾಲ ಮಿಂಚಿಲ್ಲ. ಯಾವುದೇ ಕಾರಣಕ್ಕೂ ಯತ್ನಾಳ ಸೇರ್ಪಡೆ ಮಾಡಿಕೊಳ್ಳಬಾರದು. ಕಾರ್ಯಕರ್ತರ ವಿರೋಧವನ್ನು ಲೆಕ್ಕಿಸದೆ ಬಸನಗೌಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರೆ, ಪಕ್ಷದ ಜಿಲ್ಲಾ ಘಟಕದ ಕಚೇರಿ ಮುಂಭಾಗ ಪ್ರತಿಭಟನೆ, ಮುಖಂಡರಿಗೆ ಘೇರಾವ್‌ ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ. ಅಂತಿಮ ನಿರ್ಣಯ ತೆಗೆದುಕೊಳ್ಳುವುದನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ನೀಡಲಾಗಿದೆ’ ಎಂದು ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ತಿಳಿಸಿದರು.

‘ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್, ಹಾಲಿ ಸದಸ್ಯ ಗೋಪಾಲ ಘಟಕಾಂಬಳೆ ನೇತೃತ್ವದ ಬಿಜೆಪಿ ಸದಸ್ಯರ ತಂಡ ಮಂಗಳವಾರ ಹುಬ್ಬಳ್ಳಿಗೆ ತೆರಳಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಸ್ಥಳೀಯ ವಿದ್ಯಮಾನ, ಅಪಸ್ವರದ ಮಾಹಿತಿ ನೀಡಿದೆ. ಹೈಕಮಾಂಡ್‌ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಿ ಎಂದು ಮುಖಂಡರಿಬ್ಬರೂ ನಿಯೋಗದ ಸದಸ್ಯರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌, ಬಿಜೆಪಿ ಪ್ರತಿಭಟನೆ ಇಂದು

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷಗಳ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.ಬಿಜೆಪಿ ಕಾರ್ಯಕರ್ತರು ಬಸನಗೌಡ ಪಾಟೀಲ ಯತ್ನಾಳ ಅವರ ಸೇರ್ಪಡೆ ವಿರೋಧಿಸಿದರೆ, ಕಾಂಗ್ರೆಸ್‌ ಕಾರ್ಯಕರ್ತರು ಹಾಲಿ ನಗರ ಶಾಸಕ ಡಾ.ಮಕ್ಬೂಲ್‌ ಎಸ್‌.ಬಾಗವಾನಗೆ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿ ಪ್ರತಿಭಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

**

ಕಾರ್ಯಕರ್ತರ ಅಭಿಪ್ರಾಯ ಆಲಿಸಿ. ಅವರ ಮನಸ್ಸಿನ ನೋವು ತಪ್ಪಿಸಿ ಎಂದು ಸ್ಥಳೀಯ ವಿದ್ಯಮಾನಗಳನ್ನು ವರಿಷ್ಠರ ಗಮನಕ್ಕೆ ತಂದಿರುವೆ – ವಿಠ್ಠಲ ಕಟಕದೊಂಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

ಪಕ್ಷದ ನಿಷ್ಠಾವಂತರ ಸಭೆ ನಡೆದಿದೆ. ಅಭಿಪ್ರಾಯ ಹಂಚಿಕೊಂಡಿದ್ದೇವೆ. ಸಂಕಷ್ಟದ ಕಾಲದಲ್ಲೂ ಬಿಜೆಪಿಯಿಂದ ಆಚೆ ಇನ್ನೊಂದು ಆಲೋಚಿಸಿಲ್ಲ – ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT