ಬುಧವಾರ, ನವೆಂಬರ್ 13, 2019
23 °C

17 ದಿನದ ಹೆಣ್ಣು ಶಿಶುವನ್ನು ಜೀವಂತ ಸಮಾಧಿ ಮಾಡಿದ ತಂದೆ

Published:
Updated:

ಚೆನ್ನೈ: ಗಂಡು ಮಗುವಿನ ಆಸೆಗಾಗಿ 17 ದಿನದ ಹೆಣ್ಣು ಮಗುವನ್ನು ತಂದೆಯೇ ಜೀವಂತ ಸಮಾಧಿ ಮಾಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಅಥಂದಮಾರುತುರ್ ಗ್ರಾಮದಲ್ಲಿ ನಡೆದಿದೆ.

ಘಟನೆ ಸಂಬಂಧ ಪೊಲೀಸರು 29 ವರ್ಷದ ಆರೋಪಿಯನ್ನು ಬಂಧಿಸಿದ್ದು, ಡಿ ವರದರಾಜನ್ ಎಂದು ಗುರುತಿಸಲಾಗಿದೆ. ನವಜಾತ ಶಿಶುವನ್ನು ಆರೋಪಿಯು ಥೆನಪೆನ್ನನೈ ನದಿ ತೀರದಲ್ಲಿ ಜೀವಂತ ಸಮಾಧಿ ಮಾಡಿದ್ದಾನೆ.

ಮೂಲಗಳ ಪ್ರಕಾರ, ವರದರಾಜನ್ ಮಗು ಹೆಣ್ಣಾಗಿದ್ದಕ್ಕೆ ಮೂರು ದಿನದ ಮಗುವಿದ್ದಾಗಲೇ ಹತ್ಯೆ ಮಾಡಲು ಯತ್ನಿಸಿದ್ದ. ಆದರೆ ಸಂಬಂಧಿಕರಿಂದ ಅದು ತಪ್ಪಿತ್ತು. ರೈತನಾಗಿರುವ ಆರೋಪಿಯು 15 ತಿಂಗಳ ಹಿಂದಷ್ಟೇ ಸುಂದರೇಶಪುರಂ ಗ್ರಾಮದ ಮಹಿಳೆಯನ್ನು ವಿವಾಹವಾಗಿದ್ದ.

ಪಾಂಡಿಚೆರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದಾಗಿ ಆತ ಬೇಸರಗೊಂಡಿದ್ದ.
ಮಂಗಳವಾರ ರಾತ್ರಿ ತಾಯಿ ಮಲಗಿದ್ದಾಗ ಆರೋಪಿಯು ರಹಸ್ಯವಾಗಿ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ. ನದಿ ಸಮೀಪದಲ್ಲಿ ಮಗುವನ್ನು ಸಜೀವ ಸಮಾಧಿ ಮಾಡಿದ್ದಾನೆ. ಮುಂಜಾನೆ 4 ಗಂಟೆ ಸುಮಾರಿಗೆ ಮಹಿಳೆ ಎದ್ದು ನೋಡಿದಾಗ ಮಗು ಇಲ್ಲದನ್ನು ಕಂಡು ಗಾಬರಿಗೊಳಗಾಗಿದ್ದಾರೆ.

ಮಗು ಕಾಣೆಯಾದ ಕುರಿತು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ವಿಚಾರಣೆ ಕೈಗೊಂಡಾಗ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)