ಎಐಎಡಿಎಂಕೆ ಬೆನ್ನೇರಿ ಬಿಜೆಪಿ ನಿರೀಕ್ಷೆಯ ಸವಾರಿ

ಗುರುವಾರ , ಮಾರ್ಚ್ 21, 2019
26 °C

ಎಐಎಡಿಎಂಕೆ ಬೆನ್ನೇರಿ ಬಿಜೆಪಿ ನಿರೀಕ್ಷೆಯ ಸವಾರಿ

Published:
Updated:
Prajavani

ಚೆನ್ನೈ: ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ತಮಿಳುನಾಡಿನ ಕಡೆಗೆ ಗಮನ ಹರಿಸಿದೆ. ವಿಶೇಷವೆಂದರೆ ತಮಿಳುನಾಡಿನ ಜನರು ಈ ಪಕ್ಷವನ್ನು ಹೊರಗಿನ ಪಕ್ಷ ಎಂದೇ ಪರಿಗಣಿಸುತ್ತಾರೆ. ತಮಿಳುನಾಡಿಗೆ ಬಂದಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಬೀದಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಪ್ರತಿಭಟನೆಗಳನ್ನು ಎದುರಿಸಿದ್ದಾರೆ. 

ಹಾಗಿದ್ದರೂ, ಮತಗಟ್ಟೆ ಮಟ್ಟದ ಕಾರ್ಯಕರ್ತರ ಜತೆಗೆ ಕಳೆದ ವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ಸಂವಾದದಲ್ಲಿ ತಮಿಳುನಾಡಿನಲ್ಲಿ ‘ಚಾರಿತ್ರಿಕ ಗೆಲುವು’ ದಾಖಲಿಸುವುದಾಗಿ ಮೋದಿ ಅವರು ಹೇಳಿದ್ದಾರೆ. ಇದು ಚುನಾವಣಾ ಸಂದರ್ಭದ ವೀರಾವೇಶದ ಹೇಳಿಕೆ ಎಂದು ಪರಿಗಣಿಸಿದರೂ ಬಿಜೆಪಿಗೆ ಈ ಹೊಸ ಆತ್ಮವಿಶ್ವಾಸ ಎಲ್ಲಿಂದ ಲಭಿಸಿತು ಎಂಬ ಪ್ರಶ್ನೆಯನ್ನು ಕೇಳಬಹುದು. 

ಮೈತ್ರಿ ಮೇಲೆ ಭರವಸೆ: ಬಿಜೆಪಿ ಸಂಪೂರ್ಣವಾಗಿ ಮೈತ್ರಿ ಪಕ್ಷದ (ಎಐಎಡಿಎಂಕೆ) ಮೇಲೆ ಅವಲಂಬಿತವಾಗಿರುವ ಏಕೈಕ ರಾಜ್ಯ ತಮಿಳುನಾಡು. 2017ರ ಡಿಸೆಂಬರ್‌ನಲ್ಲಿ ಆರ್‌. ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ನೋಟಾದಷ್ಟು (ಯಾರಿಗೂ ಮತ ಇಲ್ಲ) ಮತಗಳೂ ಸಿಕ್ಕಿರಲಿಲ್ಲ. ಆದರೆ, ಬಿಜೆಪಿ ಈಗ ಪುದುಚೇರಿಯ ಒಂದು ಲೋಕಸಭಾ ಕ್ಷೇತ್ರ ಸೇರಿ ತಮಿಳುನಾಡಿನ 40 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳುತ್ತಿದೆ. 

ಉತ್ತರ ಭಾರತದಲ್ಲಿ ವಿವಿಧ ಕಾರಣಗಳಿಂದಾಗಿ ನಿರೀಕ್ಷಿತ ಸಾಧನೆ ಸಾಧ್ಯವಿಲ್ಲ ಎಂಬ ಭಾವನೆ ಬಿಜೆಪಿಯಲ್ಲಿ ಇದೆ. ಹಾಗಾಗಿ, ಈ ನಷ್ಟವನ್ನು ಸರಿದೂಗಿಸಲು 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣ ಭಾರತದ ಅತ್ಯಂತ ದೊಡ್ಡ ರಾಜ್ಯದ ಮೇಲೆ ಕಣ್ಣಿಟ್ಟಿದೆ. 

ಮೈತ್ರಿ ಲೆಕ್ಕಾಚಾರ ಗೆಲ್ಲಬಹುದೇ?: ಮೈತ್ರಿಗೆ ಯಶಸ್ಸು ಸಿಗಬಹುದು ಎನ್ನಲು ಕೆಲವು ಕಾರಣಗಳಿವೆ. ವಣ್ಣಿಯಾರ್‌ ಸಮುದಾಯದಲ್ಲಿ ಭಾರಿ ಪ್ರಭಾವ ಹೊಂದಿರುವ ಪಟ್ಟಾಳಿ ಮಕ್ಕಳ್‌ ಕಚ್ಚಿ (ಪಿಎಂಕೆ) ಈ ಮೈತ್ರಿಕೂಟವನ್ನು ಸೇರಿಕೊಂಡಿದೆ. ಪ್ರಾದೇಶಿಕವಾಗಿ ಪ್ರಬಲವಾಗಿರುವ ಪಕ್ಷಗಳನ್ನೂ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲಾಗಿದೆ. ಪಿಎಂಕೆಗೆ ಉತ್ತರ ತಮಿಳುನಾಡಿನಲ್ಲಿ ಪ್ರಭಾವ ಇದೆ. ಅಖಿಲ ಭಾರತ ಮೂವೆಂಡಾರ್‌ ಮುನ್ನಣಿ ಕಳಗಂ, ಪುದಿಯ ತಮಿಳಗಂ, ತಮಿಳಗ ಮಕ್ಕಳ ಮುನ್ನೇತ್ರ ಕಳಗಂನಂತಹ ಪಕ್ಷಗಳು ದಕ್ಷಿಣ ತಮಿಳುನಾಡಿನಲ್ಲಿ ಪ್ರಬಲವಾಗಿವೆ; ಕೊಂಗು ಪ್ರದೇಶದಲ್ಲಿ ಪ್ರಾಬಲ್ಯ ಇರುವ ಪಕ್ಷಗಳೂ ಈ ಮೈತ್ರಿಕೂಟದಲ್ಲಿ ಇವೆ. 

2016ರ ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ ಶೇ 41ರಷ್ಟು ಮತಗಳನ್ನು ಪಡೆದಿತ್ತು. ಜಯಲಲಿತಾ ಆಪ್ತರಾಗಿದ್ದ ವಿ.ಕೆ. ಶಶಿಕಲಾ ಅವರ ಸಂಬಂಧಿ ಟಿ.ಟಿ.ವಿ. ದಿನಕರನ್‌ ಅವರ ಬಂಡಾಯ ಮತ್ತು ಇತರ ಕಾರಣಗಳಿಂದಾಗಿ ಶೇ 10–15ರಷ್ಟು ಮತಗಳು ಖೋತಾ ಆದರೂ ತಮಿಳುನಾಡಿನ ಆಡಳಿತ ಪಕ್ಷಕ್ಕೆ ಶೇ 25ರಷ್ಟು ಮತಗಳು ಗಟ್ಟಿ ಎಂಬುದು ಬಿಜೆಪಿಯ ಲೆಕ್ಕಾಚಾರ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಂಗು ಪ್ರದೇಶ ಎಐಎಡಿಎಂಕೆ ಹಿಂದೆ ಬಲವಾಗಿ ನಿಂತಿತ್ತು. ಅಲ್ಲಿ ಎಂಟು ಕ್ಷೇತ್ರಗಳಿವೆ. ಕೊಂಗು ಪ್ರದೇಶದ ಪ್ರಭಾವಿ ಗೌಂಡರ್‌ ಸಮುದಾಯಕ್ಕೆ ಸೇರಿದವರು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ. ಇದು ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ವರವಾಗಬಹುದು ಎಂದು ಬಿಜೆಪಿ ಭಾವಿಸಿದೆ. 

ಒಳಗಿನ ಹುಳುಕು: ಮೇಲಿನ ಅಂಶಗಳೆಲ್ಲವೂ ಬಿಜೆಪಿ–ಎಐಎಡಿಎಂಕೆ ಪರವಾಗಿ ನಿಲ್ಲಬಹುದು. ಆದರೆ, ಬಿಜೆಪಿ ಜತೆಗೆ ಮೈತ್ರಿ ಮಾಡಿ ಕೊಂಡಿರುವುದಕ್ಕೆ ಎಐಎಡಿಎಂಕೆ ಕಾರ್ಯಕರ್ತರಲ್ಲಿ ಭಾರಿ ಅಸಮಾಧಾನ ಇದೆ. ಮೋದಿ ಅವರು ಬುಧವಾರ ಚೆನ್ನೈ ಹೊರವಲಯದಲ್ಲಿ ನಡೆಸಿದ ಸಮಾವೇಶಕ್ಕೆ ಜನರನ್ನು ಸೇರಿಸಲು ಎಐಎಡಿಎಂಕೆ ಕಾರ್ಯಕರ್ತರು ಹರಸಾಹಸಪಟ್ಟಿದ್ದಾರೆ. ರಾಜ್ಯ ಸರ್ಕಾರವನ್ನು ಬಿಜೆಪಿಯೇ ನಡೆಸುತ್ತಿದೆ ಎಂಬ ಅತೃಪ್ತಿಯೂ ಕಾರ್ಯಕರ್ತರಲ್ಲಿ ಇದೆ. 

ದಿನಕರನ್‌ ಬಂಡಾಯದ ಪರಿಣಾಮವೂ ಕಡಿಮೆ ಏನಲ್ಲ. ಎಐಎಡಿಎಂಕೆಯ ಗಣನೀಯ ಪ್ರಮಾಣದ ಮತಗಳನ್ನು ದಿನಕರನ್‌ ಪಕ್ಷವು ಸೆಳೆದುಕೊಂಡರೆ ಅದರ ನೇರ ಲಾಭ ಪ್ರತಿಸ್ಪರ್ಧಿ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಆಗಲಿದೆ. 

ಕೇಂದ್ರದಲ್ಲಿ ಅಧಿಕಾರ ಹಿಡಿಯುವಷ್ಟು ಸ್ಥಾನಗಳನ್ನು ಗೆಲ್ಲಲು ಎಐಎಡಿಎಂಕೆಯನ್ನು ಬಿಜೆಪಿ ಬಲವಾಗಿ ನೆಚ್ಚಿಕೊಂಡಿದೆ. ಆದರೆ, ಜಯಲಲಿತಾ ನಿಧನಾನಂತರ ಪಕ್ಷದ ಬಲ ಏನು ಎಂಬುದರ ಪರೀಕ್ಷೆ ಈವರೆಗೆ ಆಗಿಲ್ಲ. ಬಿಜೆಪಿಯನ್ನು ಜನರು ಹೊರಗಿನ ಪಕ್ಷ ಎಂದೇ ಭಾವಿಸಿದರೆ ಜಯಲಲಿತಾ ಅವರ ನಾಯಕತ್ವ ಇಲ್ಲದ ಪಕ್ಷವು ತನ್ನ ಸಾಂಪ್ರದಾಯಿಕ ಮತಗಳನ್ನೂ ಕಳೆದುಕೊಳ್ಳಬಹುದು. ಪ್ರತಿಸ್ಪರ್ಧಿ ಮೈತ್ರಿಕೂಟದ ಗೆಲುವು ಸುಲಭವಾಗಹುದು. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !