ಗುರುವಾರ , ಸೆಪ್ಟೆಂಬರ್ 19, 2019
29 °C

ಸಂಭಾವನೆ ಹೆಚ್ಚಳವಾದರೆ ಕ್ರಿಕೆಟ್ ಕೋಚ್ ರವಿಶಾಸ್ತ್ರಿಗೆ ಸಿಗಲಿದೆ ₹ 10 ಕೋಟಿ

Published:
Updated:

ನವದೆಹಲಿ: ಟೀಮ್ ಇಂಡಿಯಾದ ಪ್ರಮುಖ ಕೋಚ್ ರವಿಶಾಸ್ತ್ರಿ ಸಂಭಾವನೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. 

ಸ್ಥಳೀಯ ಮಾಧ್ಯಮಗಳ ಪ್ರಕಾರ, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮರುನೇಮಕಗೊಂಡ ನಂತರ ಈ ಬಾರಿಯ ಒಪ್ಪಂದದಂತೆ ಹಿಂದೆ ಪಡೆಯುತ್ತಿದ್ದ ಸಂಭಾವನೆಗಿಂತ ಶೇ.20ರಷ್ಟು ಹೆಚ್ಚು ಸಂಭಾವನೆ ಪಡೆಯಲಿದ್ದಾರೆ. ಇದರಿಂದಾಗಿ ವಾರ್ಷಿಕ ₹ 9.5 ಕೋಟಿಯಿಂದ ₹ 10 ಕೋಟಿ ಪಡೆಯಲಿದ್ದಾರೆ. 

ಈ ಹಿಂದಿನ ಒಪ್ಪಂದದ ಪ್ರಕಾರ ರವಿಶಾಸ್ತ್ರಿ ₹ 8 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಹೊಸದಾಗಿ ಒಪ್ಪಂದ ಮಾಡಿಕೊಂಡಿದ್ದು, ಸಣ್ಣಪುಟ್ಟ ಬದಲಾವಣೆಯೊಂದಿಗೆ ಹಳೆಯ ತಂಡವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಹೊಸ ಒಪ್ಪಂದ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ.

ಸಂಭಾವನೆ ಹೆಚ್ಚಳವಾದರೆ ರವಿಶಾಸ್ತ್ರಿ ಅವರೊಂದಿಗೆ ಅವರ ಜೊತೆಯಲ್ಲಿರುವ ಇತರೆ ಸದಸ್ಯರಿಗೂ ಹೆಚ್ಚಳವಾಗಲಿದೆ. ಬೌಲಿಂಗ್ ಕೋಚ್ ಭರತ್ ಅರುಣ್ ₹ 3.5, ಫೀಲ್ಡಿಂಗ್ ಕೋಚ್ ಆರ್ .ಶ್ರೀಧರ್ ₹3.5 ಕೋಟಿ, ಬ್ಯಾಟಿಂಗ್ ಕೋಚ್ ಸ್ಥಾನದಲ್ಲಿದ್ದ ಸಂಜಯ್ ಬಂಗಾರ್ ಬದಲಿಗೆ ಅವಕಾಶ ಪಡೆದಿರುವ ವಿಕ್ರಮ್ ರಾಥೋಡ್ ₹ 2.5 ರಿಂದ ₹ 3 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವ ಸಂಭಾವನೆ ನೀಡುತ್ತದೆಯೋ ಇನ್ನೂ ಬಹಿರಂಗಪಡಿಸಿಲ್ಲ.

Post Comments (+)