3
ಜಿಎಸ್‌ಟಿಗೆ ವರ್ಷ, ಬಗೆಹರಿಯಲಿಲ್ಲ ವರ್ತಕರ ಸಂಕಷ್ಟ

ಜಿಎಸ್‌ಟಿ ತೊಡಕಿಗೆ ತಂತ್ರಜ್ಞಾನ ಹೊಣೆಯಲ್ಲ ಎಂದರು ಮೋಹನ್‌ದಾಸ್ ಪೈ

Published:
Updated:
ಟಿ.ವಿ. ಮೋಹನ್‌ದಾಸ್ ಪೈ ಮತ್ತು ಹಂಸಮುಖ್ ಆಧ್ಯಾ

ಬೆಂಗಳೂರು: ‘ಜಿಎಸ್‌ಟಿಯ ಸುಲಲಿತ ಅನುಷ್ಠಾನಕ್ಕೆ ತಂತ್ರಜ್ಞಾನವೇ ತೊಡಕು’ ಎಂದು ಹೇಳಿರುವ ಹಣಕಾಸು ಇಲಾಖೆ ಕಾರ್ಯದರ್ಶಿ ಹಂಸಮುಖ ಆಧ್ಯಾ ಅವರ ಮಾತನ್ನು ಪ್ರಸ್ತಾಪಿಸಿ ಇನ್‌ಫೋಸಿಸ್ ಮಾಜಿ ನಿರ್ದೇಶಕ ಟಿ.ವಿ. ಮೋಹನ್‌ದಾಸ್ ಪೈ ಅವರು ಮಾಡಿರುವ ಟ್ವಿಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

‘ಫೈನಾನ್ಷಿಯಲ್‌ ಎಕ್ಸ್‌ಪ್ರೆಸ್‌’ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಆಧ್ಯಾ ಹೇಳಿಕೆಯ ವರದಿಯನ್ನು ರಿಟ್ವಿಟ್ ಮಾಡಿರುವ ಮೋಹನ್‌ದಾಸ್ ಪೈ, ‘ತಂತ್ರಜ್ಞಾನವನ್ನು ದೂರುವುದು ತಪ್ಪು; ಸಂಕೀರ್ಣ ಫೈಲಿಂಗ್ ವ್ಯವಸ್ಥೆ ರೂಪಿಸಿದ್ದು ಯಾರು? ಗೊಂದಲಕಾರಿ ತೆರಿಗೆ ವ್ಯವಸ್ಥೆ ರೂಪಿಸಿದ್ದು ಯಾರು? ರಿಫಂಡ್‌ಗೆ ವ್ಯವಸ್ಥೆ ರೂಪಿಸಲು ಗಮನ ಕೊಡದವರು ಯಾರು? ಬಳಕೆದಾರರಿಗೆ ತರಬೇತಿ ಕೊಡಬೇಕಾದವರು ಯಾರು? ತಂತ್ರಜ್ಞಾನವಲ್ಲ’ ಎಂದು ಒಕ್ಕಣೆ ಬರೆದಿದ್ದಾರೆ. 

ತಮ್ಮ ಟ್ವಿಟ್‌ಗೆ ಟ್ವಿಟ್‌ಗೆ ಪ್ರಧಾನಿ ಕಚೇರಿ, ನರೇಂದ್ರ ಮೋದಿ, ಅರುಣ್‌ಜೇಟ್ಲಿ ಮತ್ತು ಆಧ್ಯಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಪೈ ಅವರ ಟ್ವಿಟ್‌ಗೆ 2238 ಲೈಕ್‌ಗಳು, 372 ಕಾಮೆಂಟ್‌ಗಳು ಬಂದಿವೆ. 1310 ಮಂದಿ ಇದನ್ನು ರಿಟ್ವಿಟ್ ಮಾಡಿದ್ದಾರೆ.

ಪೈ ಅವರ ಟ್ವಿಟ್‌ಗೆ ಕಾಮೆಂಟ್ ಮಾಡಿರುವ ಹಲವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ಜಿಎಸ್‌ಟಿಯ ತಡಪಾವತಿ ಶುಲ್ಕ ಜಿಲ್ಲಾ ಕೇಂದ್ರಗಳಲ್ಲಿರುವ ಸಣ್ಣ ವ್ಯಾಪಾರಿಗಳ ನಿದ್ದೆಗೆಡಿಸಿದೆ. ವಹಿವಾಟಿನ ಒಟ್ಟು ಮೊತ್ತು ₹4 ಕೋಟಿ ದಾಟುವವರೆಗೆ ತಡಪಾತಿ ಶುಲ್ಕ ರದ್ದುಪಡಿಸಬೇಕು' ಎಂದು ಮಹೇಶ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ತಂತ್ರಜ್ಞಾನದ ತಪ್ಪು ಏನೂ ಇಲ್ಲ ಎನ್ನುವ ಧಾಟಿಯಲ್ಲಿರುವ ಮೋಹನ್‌ದಾಸ್ ಪೈ ಅವರ ಅಭಿಪ್ರಾಯವನ್ನೂ ಹಲವರು ಟೀಕಿಸಿದ್ದಾರೆ. ‘ಜಿಎಸ್‌ಟಿ ನೆಟ್‌ವರ್ಕ್ ಮತ್ತು ತಂತ್ರಜ್ಞಾನ ಎರಡೂ ಹಲವು ಹಂತಗಳಲ್ಲಿ ವಿಫಲವಾಗಿವೆ. ತೆರಿಗೆದಾರರು ಮತ್ತು ಸಮಾಲೋಚಕರ ಸಮಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೆ ಜಿಎಸ್‌ಟಿ ಅನುಷ್ಠಾನದ ಹೊಣೆ ಹೊತ್ತ ಅಧಿಕಾರಿಗಳು ಮತ್ತು ಇನ್‌ಫೋಸಿಸ್‌ ಕಾರಣ. ಅವಗೇಕೆ ದಂಡ ವಿಧಿಸುತ್ತಿಲ್ಲ’ ಎಂದು ಅಮಿತ್ ರಾಠಿ ಪ್ರಶ್ನಿಸಿದ್ದಾರೆ.

ಎಲ್ಲ ಸಮಸ್ಯೆಗಳಿಗೂ ಸರ್ವರ್ ಸಮಸ್ಯೆ ಕಾರಣ ಎನ್ನುವ ಸರ್ಕಾರಿ ಅಧಿಕಾರಿಗಳ ಮನಸ್ಥಿತಿಯನ್ನು ನಿಶಾ ಪ್ರಶ್ನಿಸಿದ್ದಾರೆ. ‘ಕೆಲ ಸಾವಿರ ಸಂಖ್ಯೆಯ ತೆರಿಗೆದಾರರು ಲಾಗಿನ್ ಆದರೆ ಸರ್ವರ್ ಕೆಟ್ಟು ಹೋಗುತ್ತೆ. ಕೆಲ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳು ಫಲಿತಾಂಶ ನೋಡಲೆಂದು ಲಾಗಿನ್ ಆದರೆ ಸರ್ವರ್ ಡೌನ್ ಆಗುತ್ತೆ. ನೂರಾರು ಕೋಟಿ ಜನರ ಖಾತೆಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರನ್ನು ಏಕೆ ಕೇಳಬಾರದು? ಕ್ಲೌಡ್ ತಂತ್ರಜ್ಞಾನ, ಲೋಡ್ ಬ್ಯಾಲೆನ್ಸಿಂಗ್ ಬಗ್ಗೆ ಇವರಿಗೆ ಏನಾದರೂ ಗೊತ್ತಿದೆಯೇ?’ ಎಂದು ನಿಶಾ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಜಿಎಸ್‌ಟಿ ವೈಫಲ್ಯಕ್ಕೆ ತಂತ್ರಜ್ಞರು ಮತ್ತು ತಂತ್ರಜ್ಞಾನ ಕಾರಣವಲ್ಲ’ ಎನ್ನುವ ಧಾಟಿಯಲ್ಲಿರುವ ಮೋಹನ್‌ದಾಸ್ ಪೈ ಅವರ ಟ್ವಿಟ್‌ನ ಧಾಟಿ ಸಹ ಟೀಕೆ ಮತ್ತು ವ್ಯಂಗ್ಯಕ್ಕೆ ಗುರಿಯಾಗಿದೆ.

‘ಜಿಎಸ್‌ಟಿ ನೆಟ್‌ವರ್ಕ್‌ ರೂಪಿಸಲು ತೆರಿಗೆದಾರರ ಸಾವಿರಾರು ಕೋಟಿ ರೂಪಾಯಿ ಪಡೆದುಕೊಂಡವರು ಯಾರು? ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರು ಯಾರು? ದೇಶದ ವ್ಯಾಪಾರಿಗಳ ಕಾಲವ್ಯಯವನ್ನು ಲೆಕ್ಕಕ್ಕೆ ಇರಿಸಿಕೊಳ್ಳದವರು ಯಾರು? ವೈಫಲ್ಯದ ನಂತರವೂ ಹಣ ಪಡೆದುಕೊಳ್ಳುವವರು ಯಾರು? ತಂತ್ರಜ್ಞರೇ ತಾನೇ...?' ಎಂದು ಪ್ರಶ್ನಿಸಿದ್ದಾರೆ.

ಜಿಎಸ್‌ಟಿ ಅನುಷ್ಠಾನಕ್ಕೆ ತಂತ್ರಜ್ಞಾನವೇ ತೊಡಕು

‘ಜಿಎಸ್‌ಟಿಯ ಸುಗಮ ಅನುಷ್ಠಾನಕ್ಕೆ ತಂತ್ರಜ್ಞಾನದ ವೈಫಲ್ಯವೇ ಮುಖ್ಯ ತೊಡಕಾಗಿದೆ. ಜಿಎಸ್‌ಟಿ ನೆಟ್‌ವರ್ಕ್‌ಗಾಗಿ ಕೆಲಸ ಮಾಡುತ್ತಿರುವ ತಂತ್ರಜ್ಞರು ಪರಿಶ್ರಮ ಹಾಕುತ್ತಿದ್ದಾರೆ. ಆದರೆ ಇಂದಿಗೂ ಅನೇಕ ಬಾರಿ ಜಿಎಸ್‌ಟಿ ನೆಟ್‌ವರ್ಕ್‌ ವಿಫಲವಾಗುತ್ತಿದೆ’ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಹಂಸಮುಖ ಆಧ್ಯಾ ಹೇಳಿದರು.

ನವದೆಹಲಿಯಲ್ಲಿ ಎಫ್‌ಕೆಸಿಸಿಐ (ಅಖಿಲ ಭಾರತ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ, ಎಫ್‌ಐಸಿಸಿಐ- ದಿ ಫೆಡರೇಶನ್ ಆರ್ಫ ಇಂಡಿಯನ್ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಆಯೋಜಿಸಿದ್ದ ‘ಜಿಎಸ್‌ಟಿ ಒಂದು ವರ್ಷ ಪಯಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಈಗ ಅನೇಕ ಗಡುವುಗಳನ್ನು ಮುಟ್ಟಬೇಕಿದೆ. ತಾಂತ್ರಿಕ ಪ್ರಕ್ರಿಯೆಗಳನ್ನು ವೇಗವಾಗಿ ನಿರ್ವಹಿಸಬೇಕಿದೆ. ತಂತ್ರಜ್ಞಾನ ನಮ್ಮನ್ನು ಹಿಡಿದೆಳೆಯುತ್ತಿದೆ ಎಂದು ನಾನು ಕೆಲವೆಡೆ ಹೇಳಿದ್ದೆ. ಇದರ ಅರ್ಥ ತಂತ್ರಜ್ಞರು ವಿಫಲರಾಗಿದ್ದಾರೆ ಎಂದು ಅಲ್ಲ’ ಎಂದು ತಮ್ಮ ಹೇಳಿಕೆಗೆ ತಾವೇ ಸ್ಪಷ್ಟನೆಯನ್ನೂ ಕೊಟ್ಟುಕೊಂಡರು.

ಉದ್ಯಮಿಗಳ ಅಸಮಾಧಾನ

ನೋಂದಣಿ, ಇನ್‌ವಾಯ್ಸ್‌ ಅಪ್‌ಲೋಡ್ ಮಾಡುವುದು, ತೆರಿಗೆ ರಿಟರ್ನ್ ಸಲ್ಲಿಕೆ ಮತ್ತು ತೆರಿಗೆ ಪಾವತಿಯನ್ನು ಜಿಎಸ್‌ಟಿ ನೆಟ್‌ವರ್ಕ್‌ ನಿರ್ವಹಿಸುತ್ತದೆ. ಐಟಿ ದೈತ್ಯ ಇನ್‌ಫೋಸಿಸ್‌ ಈ ವ್ಯವಸ್ಥೆಯ ಉಸ್ತುವಾರಿ ಹೊತ್ತಿದೆ.

ಕೇಂದ್ರ ಸರ್ಕಾರವು ಜಿಎಸ್‌ಟಿ ತೆರಿಗೆ ಪದ್ಧತಿಯನ್ನು ಜುಲೈ 1, 2017ರಿಂದ ಜಾರಿ ಮಾಡಿತು. ಹೊಸ ವ್ಯವಸ್ಥೆ ಜಾರಿಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಎಫ್‌ಕೆಸಿಸಿಐ ಉದ್ಯಮಿಗಳ ಸಮೀಕ್ಷೆ ನಡೆಸಿತು. ವರದಿಯ ಪ್ರಮುಖ ಅಂಶಗಳನ್ನು ’ಬ್ಯುಸಿನೆಸ್ ಟುಡೇ‘ ಪ್ರಕಟಿಸಿದೆ.

ಸಮೀಕ್ಷೆಯಲ್ಲಿ ಅಭಿಪ್ರಾಯ ದಾಖಲಿಸಿದ ಅರ್ಧಕ್ಕೂ ಹೆಚ್ಚು ಉದ್ಯಮಿಗಳು ಜಿಎಸ್‌ಟಿ ನೆಟ್‌ವರ್ಕ್ ಪೋರ್ಟಲ್‌ನ ಕಾರ್ಯನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಜಿಎಸ್‌ಟಿ ಜಾರಿಯಾಗಿ ಒಂದು ವರ್ಷವಾದರೂ ಪರಿಸ್ಥಿತಿ ಸುಧಾರಿಸಿಲ್ಲ’ ಎನ್ನುವುದು ಹಲವರ ಟೀಕೆಯಾಗಿದೆ. ಜಿಎಸ್‌ಟಿ ಅನುಷ್ಠಾನದ ಎರಡನೇ ವರ್ಷದಲ್ಲಿ ಸರ್ಕಾರ ಫೈಲಿಂಗ್ ಪ್ರಕ್ರಿಯೆಯನ್ನು ಸರಳೀಕರಿಸುವ ಮತ್ತು ಏಕರೂಪದ ಫೈಲಿಂಗ್ ವ್ಯವಸ್ಥೆ ಜಾರಿ ಮಾಡುವ ನಿರೀಕ್ಷೆಯನ್ನು ಉದ್ಯಮ ವಲಯ ಹೊಂದಿದೆ.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !