ಕುಟುಂಬದ ಬಿಕ್ಕಟ್ಟು ಆರ್‌ಜೆಡಿಗೆ ತರಲಿದೆ ಇಕ್ಕಟ್ಟು

7

ಕುಟುಂಬದ ಬಿಕ್ಕಟ್ಟು ಆರ್‌ಜೆಡಿಗೆ ತರಲಿದೆ ಇಕ್ಕಟ್ಟು

Published:
Updated:
Deccan Herald

ಪಟ್ನಾ: ‘ತಂದೆಯ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಲಾಲು ಪ್ರಸಾದ್‌–ರಾಬ್ಡಿ ದೇವಿಯ ಹಿರಿಯ ಮಗ ತೇಜ್‌ ಪ್ರತಾಪ್‌ ದೃಢ ಧ್ವನಿಯಲ್ಲಿ ಹೇಳಿದ್ದಾರೆ.

ರಾಂಚಿಯ ಆಸ್ಪತ್ರೆಯಲ್ಲಿ ತಂದೆ ಲಾಲು ಅವರನ್ನು ಭೇಟಿಯಾದ ಬಳಿಕ ಅವರು ಹೀಗೆಂದರು. ಆಸ್ಪತ್ರೆಯಲ್ಲಿ ಸುಮಾರು ಮೂರು ತಾಸು ತಂದೆಯ ಜತೆಗೆ ಮಾತನಾಡಿದ ತೇಜ್‌ ಪ್ರತಾಪ್‌, ಹೆಂಡತಿ ಐಶ್ವರ್ಯಾ ರಾಯ್‌ ಅವರಿಂದ ವಿಚ್ಛೇದನ ಯಾಕೆ ಬೇಕು ಎಂಬುದನ್ನು ವಿವರಿಸಿದರು. 

ಆಕ್ರೋಶಗೊಂಡಿರುವ ಮಗನನ್ನು ಶಾಂತಗೊಳಿಸಲು ಲಾಲು ಯತ್ನಿಸಿದರು. ಆದರೆ, ವಿಚ್ಛೇದನದ ನಿರ್ಧಾರ ಬದಲಿಸಲು ತೇಜ್‌ ಪ್ರತಾಪ್ ಒಪ್ಪಿಲ್ಲ. 

ಕಳೆದ ಮೂರು ದಶಕಗಳಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಅವರ ಮಾತನ್ನು ಕುಟುಂಬದ ಹೊರಗೆ ಅಥವಾ ಒಳಗೆ ತಿರಸ್ಕರಿಸಿದ್ದು ಇದೇ ಮೊದಲು. 

ಲಾಲು ಅವರು 2017ರ ಡಿಸೆಂಬರ್‌ನಿಂದ ಜೈಲಿನಲ್ಲಿದ್ದಾರೆ. ನಂತರದ ದಿನಗಳಲ್ಲಿ ಲಾಲು ಕುಟುಂಬದಲ್ಲಿ ಹಲವು ಬಿಕ್ಕಟ್ಟುಗಳು ಎದುರಾಗಿವೆ. ತೇಜ್‌ ಪ್ರತಾಪ್ ಮತ್ತು ತಮ್ಮ ತೇಜಸ್ವಿ ನಡುವಣ ಕಿತ್ತಾಟ ಕಳೆದ ತಿಂಗಳಷ್ಟೇ ದೊಡ್ಡ ಸುದ್ದಿಯಾಗಿತ್ತು. ಈ ದಾಯಾದಿ ಕಲಹವನ್ನು ಚಿಗುರಾಗಿರುವಾಗಲೇ ಚಿವುಟಿ ಹಾಕುವಲ್ಲಿ ಲಾಲು ಮಗಳು ಮೀಸಾ ಭಾರತಿ ಯಶಸ್ವಿಯಾದರು. 

ಆದರೆ, ಕುಟುಂಬದ ಒಳಜಗಳಕ್ಕೆ ಚುನಾವಣೆಯಲ್ಲಿ ಆರ್‌ಜೆಡಿ ದೊಡ್ಡ ಬೆಲೆ ತೆರಬೇಕಾಗಬಹುದು ಎಂಬುದು ಲಾಲು ಕುಟುಂಬದ ಬಗ್ಗೆ ಗೊತ್ತಿರುವವರಿಗೆ ತಿಳಿದಿದೆ. 

‘ಆರ್‌ಜೆಡಿ ವಿರುದ್ಧ ಟೀಕೆ ಮಾಡಲು ಎನ್‌ಡಿಎಗೆ ನಾವು ಒಳ್ಳೆಯ ಅಸ್ತ್ರವನ್ನೇ ಕೊಟ್ಟಿದ್ದೇವೆ. ಲಾಲು ಅವರಿಗೆ ತಮ್ಮ ಕುಟುಂಬವನ್ನೇ ಸರಿಯಾಗಿ ಇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂಥವರು ರಾಜ್ಯದ ಆಳ್ವಿಕೆ (ಮಕ್ಕಳ ಮೂಲಕ ಪರೋಕ್ಷ ಆಡಳಿತ) ನಡೆಸುವುದು ಹೇಗೆ ಎಂದು ಎನ್‌ಡಿಎಯ ಎಲ್ಲ ಮುಖಂಡರು ಪ್ರಶ್ನಿಸಲಿದ್ದಾರೆ' ಎಂದು ಆರ್‌ಜೆಡಿಯ ಹಿರಿಯ ಮುಖಂಡರೊಬ್ಬರು ವಿಷಾದದಿಂದ ಹೇಳಿದ್ದಾರೆ. 

ವಿಚ್ಛೇದನ ನಿರ್ಧಾರದ ಹಿಂದೆಯೂ ರಾಜಕಾರಣವೇ ಇದೆ ಎಂಬ ಸುಳಿವು ಕೊಡುವ ಎರಡು ಅಂಶಗಳನ್ನು ಇಲ್ಲಿ ಗಮನಿಸಬಹುದು: ಮೊದಲನೆಯದು, ಐಶ್ವರ್ಯಾ ಅವರ ತಂದೆ ಚಂದ್ರಿಕಾ ರಾಯ್‌ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಬಂದಿದೆ. ಈಗ ಅವರು ಆರ್‌ಜೆಡಿ ಶಾಸಕ ಮತ್ತು ಹಿಂದೆ, ನಿತೀಶ್‌ ಕುಮಾರ್‌ ಸಂಪುಟದಲ್ಲಿ ಸಚಿವರಾಗಿದ್ದರು. ಎರಡನೆಯದು, ಸಹೋದರರಿಬ್ಬರ ನಡುವೆ ಬಿರುಕು ಮೂಡಿಸಲು ಐಶ್ವರ್ಯಾ ಯತ್ನಿಸುತ್ತಿದ್ದಾರೆ ಎಂಬುದನ್ನು ಆರ್‌ಜೆಡಿ ಮುಖಂಡರು ಮತ್ತು ಕಾರ್ಯಕರ್ತರು ಮೆಲುದನಿಯಲ್ಲಿ ಮಾತನಾಡುತ್ತಿದ್ದಾರೆ. ಇದನ್ನು ಲಾಲು ಕುಟುಂಬ ಈಗಾಗಲೇ ಅಲ್ಲಗಳೆದಿದೆ. 

‘ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ಅತ್ಯಂತ ದೊಡ್ಡ ಪಕ್ಷ. ಮಹಾ ಮೈತ್ರಿಕೂಟದಿಂದ ನಿತೀಶ್‌ ಅವರು ಹೊರಹೋದ ಬಳಿಕ ನಡೆದ ಎಲ್ಲ ಉಪಚುನಾವಣೆಗಳಲ್ಲಿ ಆರ್‌ಜೆಡಿ ಗೆದ್ದಿದೆ. ಲಾಲು ಅವರಿಗೆ ಇರುವ ಜನಪ್ರೀತಿಯೇ ಇದಕ್ಕೆ ಕಾರಣ. ಅವರು ಜೈಲಿನಲ್ಲಿ
ದ್ದರೂ ಅವರ ಮತಬ್ಯಾಂಕ್‌ ಅಚಲವಾಗಿದೆ. ತೇಜಸ್ವಿ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂಬುದೂ ನಿಜವೇ. ಕುಟುಂಬದ ಒಳಜಗಳ ಖಂಡಿತವಾಗಿಯೂ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ರಾಬ್ಡಿ ದೇವಿ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !