ಭಾನುವಾರ, ಮಾರ್ಚ್ 7, 2021
30 °C
ವಿಧಾನಸಭೆ ಅವಧಿಗೆ ಮುನ್ನವೇ ವಿಸರ್ಜನೆ

ತೆಲಂಗಾಣ ಚುನಾವಣೆಗೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ನಿರೀಕ್ಷೆಯಂತೆಯೇ, ತೆಲಂಗಾಣ ವಿಧಾನಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಲಾಗಿದೆ. ಈ ನಿರ್ಧಾರಕ್ಕೆ ಸಚಿವ ಸಂಪುಟ ಸರ್ವಾನುಮತದಿಂದ ಅನುಮೋದನೆ ನೀಡಿದೆ.

ಈ ವಿಧಾನಸಭೆ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷ ಮೂರು ತಿಂಗಳು ಮತ್ತು ನಾಲ್ಕು ದಿನಗಳಾಗಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ಮತ್ತು ಮಿಜೋರಾಂ ಜತೆಗೆ ರಾಜ್ಯಕ್ಕೂ ಚುನಾವಣೆ ನಡೆಯಲಿ ಎಂಬ ಕಾರಣಕ್ಕೆ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ. ವಿಧಾನಸಭೆಯ 119 ಕ್ಷೇತ್ರಗಳ ಪೈಕಿ 105 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮೂಲಕ ಕೆ. ಚಂದ್ರಶೇಖರ ರಾವ್‌ ಚುನಾವಣಾ ಕಹಳೆ ಮೊಳಗಿಸಿದ್ದಾರೆ.

ಬಿಜೆಪಿ ಸೇರಿ ಯಾವುದೇ ಪಕ್ಷದ ಜತೆಗೆ ಮೈತ್ರಿ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಎಐಎಂಐಎಂ ಜತೆಗೆ ಸ್ನೇಹಪೂರ್ವಕ ಸಂಬಂಧ ಇದೆ. ಹಾಗಿದ್ದರೂ ಕೆಲವು ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ್ದಾರೆ.

ಕೆ.ಸಿ.ಆರ್‌ ಅಧಿಕೃತ ನಿವಾಸ ‘ಪ್ರಗತಿ ಭವನ’ದಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆಗೆ ನಡೆದ ಸಭೆಯಲ್ಲಿ ವಿಧಾನಸಭೆ ವಿಸರ್ಜನೆ ನಿರ್ಧಾರ ಕೈಗೊಳ್ಳಲಾಯಿತು. ಹತ್ತೇ ನಿಮಿಷದಲ್ಲಿ ಸಂಪುಟ ಸಭೆ ಕೊನೆಗೊಂಡಿತು. ಇದಕ್ಕೂ ಮೊದಲು ನಡೆದ ಸಭೆಯಲ್ಲಿ, ವಿಧಾನಸಭೆ ವಿಸರ್ಜನೆಯ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಚಿವ ಸಂಪುಟವು ಕೆ.ಸಿ.ಆರ್‌ ಅವರಿಗೆ ನೀಡಿತ್ತು. 

ರಾಜ್ಯಪಾಲ ಇ.ಎಸ್‌.ಎಲ್‌ ನರಸಿಂಹನ್‌ ಅವರನ್ನು ಭೇಟಿಯಾದ ಕೆ.ಸಿ.ಆರ್‌., ವಿಧಾನಸಭೆ ವಿಸರ್ಜನೆಗೆ ಕೈಗೊಂಡ ನಿರ್ಧಾರವನ್ನು ತಿಳಿಸಿದರು. ಉಸ್ತುವಾರಿ ಸರ್ಕಾರವಾಗಿ ಮುಂದುವರಿಯುವಂತೆ ಕೆ.ಸಿ.ಆರ್‌ ಮತ್ತು ಅವರ ಸಂಪುಟಕ್ಕೆ ಸೂಚಿಸಲಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ವಿಧಾನಸಭೆಯನ್ನು ತಕ್ಷಣದಿಂದಲೇ ವಿಸರ್ಜಿಸಲಾಗಿದೆ ಎಂಬ ಅಧಿಸೂಚನೆಯನ್ನು ಶಾಸನಸಭಾ ಕಾರ್ಯಾಲಯವು ಹೊರಡಿಸಿದೆ. 

ವಿರೋಧ ಪಕ್ಷಗಳು ತಮ್ಮ ವಿರುದ್ಧ ಒಟ್ಟಾಗಬಹುದು ಎಂಬ ಲೆಕ್ಕಾಚಾರದಲ್ಲಿ ಕೆ.ಸಿ.ಆರ್‌ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಚುನಾವಣಾ ಪ್ರಚಾರದ ಉತ್ಸಾಹದಲ್ಲಿರುವ ಅವರು ಶುಕ್ರವಾರದಿಂದಲೇ ರಾಜ್ಯದಾದ್ಯಂತ ಸರಣಿ ಸಮಾವೇಶಗಳನ್ನು ನಡೆಸಲಿದ್ದಾರೆ. ಮುಂದಿನ 50 ದಿನಗಳಲ್ಲಿ ನೂರು ಸಮಾವೇಶ ನಡೆಸುವ ಗುರಿ ಹೊಂದಿದ್ದಾರೆ. ‌

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನ ಬೆಳವಣಿಗೆಯನ್ನು ತಡೆಯವುದು ಕೆ.ಸಿ.ಆರ್‌. ನಿರ್ಧಾರ ಹಿಂದೆ ಇರುವ ಮುಖ್ಯ ಕಾರಣ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹೈದರಾಬಾದ್‌ಗೆ ಇತ್ತೀಚೆಗೆ ಭೇಟಿ ನೀಡಿದ ಬಳಿಕ ಕಾಂಗ್ರೆಸ್ ಪಕ್ಷ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದೆ. ಭರವಸೆಗಳನ್ನು ಕೆ.ಸಿ.ಆರ್‌. ಈಡೇರಿಸಿಲ್ಲ ಎಂಬುದನ್ನು ಚುನಾವಣೆಯ ಪ್ರಮುಖ ವಿಚಾರವಾಗಿ ಬಿಂಬಿಸಲು ಯತ್ನಿಸುತ್ತಿದೆ.

ಪರಿಶಿಷ್ಟ ಜಾತಿಯ ಜನರಿಗೆ ಮೂರು ಎಕರೆ ಜಮೀನು, ಮುಸ್ಲಿಂ ಮೀಸಲಾತಿ, ಆರ್ಥಿಕವಾಗಿ ಹಿಂದುಳಿದವರಿಗೆ ಎರಡು ಬೆಡ್‌ರೂಂನ ಮನೆ ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗದಂತಹ ಭರವಸೆಗಳು ಈಡೇರಿಲ್ಲ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ.

**

ನಾಯ್ಡುಗೆ ತಿರುಗುಬಾಣ 

2003ರಲ್ಲಿ ಅವಿಭಜಿತ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರು ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜಿಸಿದ್ದರು. ಆರು ತಿಂಗಳೊಳಗೆ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಅವರಿಗೆ ಇತ್ತು. ಆದರೆ, 199 ದಿನಗಳ ಬಳಿಕ ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು.

ರಾಜ್ಯದಲ್ಲಿ ಭಾರಿ ಬರ ಉಂಟಾಯಿತು. ನಾಯ್ಡು ಅವರನ್ನು ಹತ್ಯೆ ಮಾಡಲು ನಕ್ಸಲರು ನಡೆಸಿದ್ದ ಯತ್ನದ ಅನುಕಂಪ ನಾಯ್ಡು ಅವರಿಗೆ ದೊರೆಯಲಿಲ್ಲ. ಚುನಾವಣೆಯಲ್ಲಿ ನಾಯ್ಡು ಸೋತರು. 

ಚುನಾವಣೆ ತಕ್ಷಣವೇ ನಡೆಯದಿರಬಹುದು ಅಥವಾ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗಬಹುದು ಎಂಬ ಆತಂಕ ಟಿಆರ್‌ಎಸ್‌ನ ಕೆಲವರಲ್ಲಿ ಇದೆ. ವೈಎಸ್‌ಆರ್‌ ಕಾಂಗ್ರೆಸ್‌ನ ಇಬ್ಬರು ಸಂಸದರು ಕೆಲ ತಿಂಗಳ ಹಿಂದೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಲೋಕಸಭೆಯ ಸ್ಪೀಕರ್‌ ಅಂಗೀಕರಿಸಿ ಎರಡೂವರೆ ತಿಂಗಳಾದರೂ ಚುನಾವಣಾ ಆಯೋಗವು ಉಪಚುನಾವಣೆ ಘೋಷಿಸಿಲ್ಲ ಎಂಬುದನ್ನು ತಮ್ಮ ಆತಂಕಕ್ಕೆ ಸಮರ್ಥನೆಯಾಗಿ ಅವರು ನೀಡುತ್ತಿದ್ದಾರೆ. 

**

ಬಫೂನ್‌ ಮತ್ತು ಕೈಗೊಂಬೆ

ನವದೆಹಲಿ/ಹೈದರಾಬಾದ್‌: ವಿಧಾನಸಭೆ ವಿಸರ್ಜನೆಯಾದ ಬೆನ್ನಲ್ಲೇ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಖ್ಯಸ್ಥ ಕೆ.ಚಂದ್ರಶೇಖರ ರಾವ್‌ ಮತ್ತು ಕಾಂಗ್ರೆಸ್‌ ಪಕ್ಷದ ನಡುವೆ ವೈಯಕ್ತಿಕ ಮಟ್ಟದ ವಾಕ್ಸಮರ ನಡೆದಿದೆ. ರಾಹುಲ್‌ ಗಾಂಧಿ ಅವರು ಅತಿ ದೊಡ್ಡ ‘ಬಫೂನ್‌’, ‘ಟಿಆರ್‌ಎಸ್‌ಗೆ ಅವರು ಬಹುದೊಡ್ಡ ಆಸ್ತಿ’ ಎಂದು ಕೆ.ಸಿ.ಆರ್‌ ವ್ಯಂಗ್ಯವಾಡಿದ್ದಾರೆ.

‘ಕೆ.ಸಿ.ಆರ್‌ ಅವರು ಬಿಜೆಪಿಯ ವಿದೂಷಕ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಕೈಗೊಂಬೆ. ಅವರು ತೆಲಂಗಾಣ ಜನರ ಹಿತಾಸಕ್ತಿಗೆ ವಂಚನೆ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು