ಗುರುವಾರ , ಡಿಸೆಂಬರ್ 12, 2019
17 °C
ತೆಲಂಗಾಣದ ಸಿರಿಸಿಲ್ಲಾ ಕ್ಷೇತ್ರ: ಮಾಫಿಯಾ ನಿಯಂತ್ರಿಸದ ರಾಮರಾವ್‌ ಮೇಲೆ ಅತೃಪ್ತಿ

ಕೆಸಿಆರ್‌ ಮಗನಿಗೆ ಮರಳೇ ಉರುಳೇ?

ಜೆ.ಬಿ.ಎಸ್‌. ಉಮಾನಾದ್‌ Updated:

ಅಕ್ಷರ ಗಾತ್ರ : | |

Deccan Herald

ಸಿರಿಸಿಲ್ಲಾ (ತೆಲಂಗಾಣ): ನೇಕಾರರೇ ಬಹುಸಂಖ್ಯೆಯಲ್ಲಿರುವ ವಿಧಾನಸಭಾ ಕ್ಷೇತ್ರ ಸಿರಿಸಿಲ್ಲಾ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಮಗ ತಾರಕ ರಾಮರಾವ್‌ ಸದ್ಯ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮೂರು ಬಾರಿ ಇಲ್ಲಿಂದ ಅವರು ಗೆದ್ದಿದ್ದಾರೆ. ತಾರಕ ರಾಮರಾವ್‌ ಬರುವವರೆಗೆ ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಪುನರಾಯ್ಕೆ ಆದದ್ದೇ ಇಲ್ಲ. ತಾರಕ ರಾಮರಾವ್‌ ಈಗ ನಾಲ್ಕನೇ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಕಳೆದ ಬಾರಿ ಇವರ ಎದುರು ಸೋತ ಅಭ್ಯರ್ಥಿ ಕೆ.ಕೆ. ಮಹೇಂದರ್‌ ರೆಡ್ಡಿ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ. 

ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ 42 ವರ್ಷದ ರಾಮರಾವ್‌ ಅವರು ವಿದೇಶದಲ್ಲಿ ಶಿಕ್ಷಣ ಪಡೆದವರು. ಇಂಗ್ಲಿಷ್‌, ಹಿಂದಿ, ಉರ್ದು ಮತ್ತು ತೆಲುಗು ಭಾಷೆಗಳಲ್ಲಿ ಸುಲಲಿತವಾಗಿ ವ್ಯವಹರಿಸಬಲ್ಲ ವ್ಯಕ್ತಿ. 

ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕ್ಷೇತ್ರದ ಬಗ್ಗೆ ರಾಮರಾವ್‌ ಹೆಚ್ಚು ಮಮತೆ ತೋರಿದ್ದಾರೆ. ಸುಮಾರು ₹6,000 ಕೋಟಿ ಮೊತ್ತದ ಕಾಮಗಾರಿಗಳು ಮಂಜೂರು ಆಗಿವೆ. ಬಹು ದಿನಗಳ ಬೇಡಿಕೆಯಾಗಿದ್ದ ಜವಳಿ ಪಾರ್ಕ್‌ ಕೂಡ ಸ್ಥಾಪನೆಯಾಗಿದೆ.  2017ರ ಜುಲೈ 2ರವರೆಗೆ ರಾಮರಾವ್‌ ಅವರಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ, ಅಂದು ಜಿಲ್ಲೆಲ್ಲ ಸಮೀಪ ಮರಳು ಸಾಗಿಸುತ್ತಿದ್ದ ಲಾರಿಯೊಂದು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ಮೇಲೆ ಹರಿದು ಅವರು ಮೃತಪಟ್ಟರು. ಮಧ್ಯ ಮಾನೇರು ಜಲಾಶಯದಿಂದ ಮರಳು ಸಾಗಿಸುವ ಲಾರಿಗಳಿಂದ ಒಟ್ಟು 42 ಅಪಘಾತಗಳಾಗಿವೆ, ಇದರಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. 

ಜಿಲ್ಲೆಲ್ಲದಲ್ಲಿ ನಡೆದ ಅಪಘಾತದಿಂದ ಕೆರಳಿದ ಗ್ರಾಮಸ್ಥರು ಮರಳು ಸಾಗಿಸುತ್ತಿದ್ದ ಹಲವು ಲಾರಿಗಳಿಗೆ ಬೆಂಕಿ ಇಟ್ಟಿದ್ದಾರೆ, ಪೊಲೀಸರ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಅದರಲ್ಲಿ ಎಸ್‌ಐ ಒಬ್ಬರು ಗಾಯಗೊಂಡಿದ್ದರು. ಪೊಲೀಸರು ಜುಲೈ 4ರಂದು ಹಲವು ಜನರನ್ನು ಬಂಧಿಸಿದ್ದರು. ಅವರನ್ನು ಮನಸೋ ಇಚ್ಛೆ ಥಳಿಸಿದ್ದರಿಂದಾಗಿ ಗಂಭೀರವಾಗಿ ಗಾಯಗೊಂಡ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ವಿರೋಧ ಪ‍ಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರಪತಿಗೆ ಮನವಿ ಕೊಟ್ಟದ್ದಲ್ಲದೆ ಹೈಕೋರ್ಟ್‌ನಲ್ಲಿ ದೂರು ಕೂಡ ದಾಖಲಿಸಿತ್ತು. ಪರಿಸ್ಥಿತಿ ಕೈಮೀರುತ್ತಿದೆ ಎಂದಾದಾಗ ಗಾಯಗೊಂಡ ಎಸ್‌ಐಯನ್ನು ಅಮಾನತು ಮಾಡಲಾಯಿತು. ರಾಮರಾವ್‌ ಆಸ್ಪತ್ರೆಗೆ ಭೇಟಿ ಕೊಟ್ಟರು. 

ಮರಳು ಮಾಫಿಯಾದ ಜತೆಗೆ ಈ ಘಟನೆಗೆ ಸಂಬಂಧ ಇಲ್ಲ ಎಂದು ಆಗ ರಾಮರಾವ್‌ ಹೇಳಿದ್ದರು. 

‘ಇದಾದ ಬಳಿಕ ಟಿಆರ್‌ಎಸ್‌ನ ಯಾವೊಬ್ಬನೂ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ. ಮರಳು ಮಾಫಿಯಾದವರ ಲಾರಿಗಳು ಈಗಲೂ ಅಕ್ರಮವಾಗಿ ಮರಳು ಸಾಗಿಸುತ್ತಿವೆ. ಗ್ರಾಮದ ಜನರು ಭಯದಲ್ಲಿಯೇ ರಸ್ತೆಯಲ್ಲಿ ಓಡಾಡಬೇಕಾಗಿದೆ. ಈ ಬಾರಿ ಟಿಆರ್‌ಎಸ್‌ಗೆ ಮತ ಹಾಕುವ ಪ್ರಶ್ನೆಯೇ ಇಲ್ಲ’ ಎಂದು ನೆರೆಲ್ಲಾ ಗ್ರಾಮದ ದಲಿತ ಕೋಲ ನರಸಯ್ಯ ಹೇಳುತ್ತಾರೆ. 

ರಾಮರಾವ್‌ ಅವರು ಇಲ್ಲಿಂದಲೇ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದರು. ಆದರೆ, ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳನ್ನೆಲ್ಲ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಜನರು ಪ್ರತಿಭಟನೆ ನಡೆಸುತ್ತಾರೆ ಎಂಬ ಭಯ ಅವರಿಗೆ ಇತ್ತು ಎಂದು ಅವರು ಹೇಳಿದ್ದಾರೆ. 

‘ರಾಮರಾವ್‌ ಅವರು ಮರಳು ಮಾಫಿಯಾಕ್ಕೆ ಬೆಂಬಲ ನೀಡುತ್ತಿದ್ದಾರೆ. ಸಿರಿಸಿಲ್ಲಾದ ಅಭಿವೃದ್ಧಿಗೆ ಮಂಜೂರಾದ ₹6,000 ಕೋಟಿ ಎಲ್ಲಿ ಹೋಯಿತು’ ಎಂದು ಬಿಎಸ್‌ಪಿ ಅಭ್ಯರ್ಥಿ ರಮಾಕಾಂತ್‌ ಪ್ರಶ್ನಿಸುತ್ತಾರೆ. ನೆರೆಲ್ಲಾದಲ್ಲಿ ಜವಳಿ ಪಾರ್ಕ್‌ ಸ್ಥಾಪನೆ ಆಗಿದ್ದರೂ ಖಾಸಗಿ ಗುತ್ತಿಗೆದಾರರ ಏಕಸ್ವಾಮ್ಯ ಮುರಿಯಲು ಸಾಧ್ಯವಾಗಿಲ್ಲ. ಈ ಗುತ್ತಿಗೆದಾರರನ್ನು ಮುಟ್ಟುವ ಧೈರ್ಯ ರಾಮರಾವ್‌ಗೆ ಇಲ್ಲ ಎಂದು ಅವರು ಆರೋಪಿಸುತ್ತಾರೆ. 

ರಾಮರಾವ್‌ ಪರವಾಗಿ ಮಾತನಾಡುವವರಿಗೂ ಇಲ್ಲಿ ಕೊರತೆ ಇಲ್ಲ. ‘ಸಿರಿಸಿಲ್ಲಾದಲ್ಲಿ ಆಗಿರುವ ಅಭಿವೃದ್ಧಿ ಕಣ್ಣಿಗೆ ಕಾಣಿಸುತ್ತಿದೆ. ಸಿರಿಸಿಲ್ಲಾ ನಗರದಲ್ಲಿ ರಾಮರಾವ್‌ ಅವರಿಗೆ ಭಾರಿ ಬೆಂಬಲ ಇದೆ. ₹400 ಕೋಟಿ ವೆಚ್ಚದ ಬಟುಕಮ್ಮ ಉಚಿತ ಸೀರೆ ಕಾರ್ಯಕ್ರಮದಿಂದ ನೇಕಾರರಿಗೆ ಪ್ರಯೋಜನವಾಗಿದೆ. ಹಾಗಾಗಿ ಈ ಸಮುದಾಯ ರಾಮರಾವ್‌ ಅವರ ಕೈಬಿಡುವುದಿಲ್ಲ’ ಎಂದು ಸ್ಥಳೀಯ ಯುವಕ ಸತೀಶ್‌ ಅಭಿಪ್ರಾಯಪಟ್ಟಿದ್ದಾರೆ.

ಮಿಜೋರಾಂ ಚುನಾವಣಾ ಅಧಿಕಾರಿ ಕುಂದ್ರಾ

ಐಎಎಸ್‌ ಅಧಿಕಾರಿ ಆಶಿಷ್‌ ಕುಂದ್ರಾ ಅವರನ್ನು ಮಿಜೋರಾಂ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯನ್ನಾಗಿ (ಸಿಇಒ) ನೇಮಿಸಿ ಚುನಾವಣಾ ಆಯೋಗ ಗುರುವಾರ ಅಧಿಸೂಚನೆ ಹೊರಡಿಸಿದೆ. ಈ ಮೊದಲು ಎಸ್‌.ಬಿ.ಶಶಾಂಕ್‌ ಅವರು ಮುಖ್ಯ ಚುನಾವಣಾಧಿಕಾರಿಯಾಗಿದ್ದರು. ತ್ರಿಪುರಾದ ಪರಿಹಾರ ಶಿಬಿರಗಳಲ್ಲಿರುವ ಬ್ರೂ ಸಮುದಾಯದವರಿಗೆ ಅಲ್ಲಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟದ್ದಕ್ಕೆ ಶಶಾಂಕ್‌ ವಿರುದ್ಧ ನಿರಂತರವಾಗಿ ಪ್ರತಿಭಟನೆಗಳು ನಡೆದಿದ್ದವು. ರಾಜ್ಯ ಸರ್ಕಾರ ಸಹ ಶಶಾಂಕ್‌ರನ್ನು ಬದಲಾಯಿಸುವಂತೆ ಆಯೋಗಕ್ಕೆ ಪತ್ರ ಬರೆದಿತ್ತು.

1997ರಲ್ಲಿ ನಡೆದ ಜನಾಂಗೀಯ ಘರ್ಷಣೆ ಸಂದರ್ಭದಲ್ಲಿ ಬ್ರೂ ಸಮುದಾಯದ ಸಾವಿರಾರು ಜನರು ಮಿಜೋರಾಂ ತೊರೆದಿದ್ದರು. ಅವರಿಗೆ ತ್ರಿಪುರಾದ ಆರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಒದಗಿಸಲಾಗಿತ್ತು. ಅವರು ಮರಳಿ ಮಿಜೋರಾಂಗೆ ಬಂದಿಲ್ಲ. ಆದರೆ, ಇವರಿಗೆ ಮತದಾನದ ಹಕ್ಕನ್ನು ಶಶಾಂಕ್‌ ನೀಡಿದ್ದರಿಂದ ಸ್ಥಳೀಯ ಸಂಸ್ಥೆಗಳು, ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಇದೇ 28 ರಂದು ಮಿಜೋರಾಂ ವಿಧಾನಸಭೆ ಚುನಾವಣೆ ನಡೆಯಲಿದೆ.

ಚುನಾವಣೆಯು ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಆಯೋಗವು ಶಶಾಂಕ್‌ ಅವರನ್ನು ಬದಲಾಯಿಸಿ, ಕುಂದ್ರಾ ಅವರನ್ನು ನೇಮಕ ಮಾಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು