ಬಿಜೆಪಿ ಅಧಿಕಾರಕ್ಕೆ ಬಂದರೆ ಒವೈಸಿ ಹೈದರಾಬಾದ್‌ ಬಿಡಬೇಕು: ಯೋಗಿ ಆದಿತ್ಯನಾಥ

7
ತೆಲಂಗಾಣ ವಿಧಾನಸಭೆ ಚುನಾವಣೆ

ಬಿಜೆಪಿ ಅಧಿಕಾರಕ್ಕೆ ಬಂದರೆ ಒವೈಸಿ ಹೈದರಾಬಾದ್‌ ಬಿಡಬೇಕು: ಯೋಗಿ ಆದಿತ್ಯನಾಥ

Published:
Updated:

ಹೈದರಾಬಾದ್‌: ‘ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒವೈಸಿ ಹೈದರಾಬಾದ್‌ ಬಿಟ್ಟು ಓಡಬೇಕು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ತಾಂಡೂರಿನಲ್ಲಿ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಒವೈಸಿ ಅಂಥವರನ್ನು ಹೊರಹಾಕಲು ಬಿಜೆಪಿಗೆ ಅಧಿಕಾರ ನೀಡುವ ಅಗತ್ಯವಿದೆ. ಜೊತೆಗೆ ರಾಷ್ಟ್ರದ ಗಡಿ ರಕ್ಷಣೆ ಹಾಗೂ ಆಂತರಿಕ ಭದ್ರತೆ ಒದಗಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ಪಾಕಿಸ್ತಾನದ ಉಗ್ರರಿಗೆ ಅವರ ಭಾಷೆಯಲ್ಲಿಯೇ ಗುಂಡುಗಳಿಂದ ಉತ್ತರ ನೀಡಿದ್ದೇವೆ’ ಎಂದರು.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಖ್ಯಸ್ಥ ಕೆ.ಚಂದ್ರಶೇಖರ ರಾವ್‌ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ, ಕಾಂಗ್ರೆಸ್‌ ಹಾಗೂ ಟಿಆರ್‌ಎಸ್‌ ಕುಟುಂಬ ರಾಜಕಾರಣ ನಡೆಸುತ್ತಿವೆ ಎಂದು ಆರೋಪಿಸಿದರು.

‘ಅವಿಭಜಿತ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ ಹಾಗೂ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಬಹಳ ವರ್ಷಗಳವರೆಗೆ ಆಡಳಿತ ನಡೆಸಿವೆ. ಆದರೆ, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತರಲು ಎರಡೂ ಪಕ್ಷಗಳು ವಿಫಲವಾಗಿವೆ. ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಕೆಲಸಗಳನ್ನು ತುಲನೆ ಮಾಡಿ ನೋಡಬೇಕು’ ಎಂದು ಜನರಿಗೆ ಸಲಹೆ ನೀಡಿದರು. 

‘ಕೇಂದ್ರ ಸರ್ಕಾರವು ಅನೇಕ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.  ಆದರೆ ಅವುಗಳ ಬಳಕೆ ಪ್ರಮಾಣಪತ್ರವನ್ನು ತೆಲಂಗಾಣದ ಟಿಆರ್‌ಎಸ್‌ ಸರ್ಕಾರ ಸಲ್ಲಿಸಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಕೋಟಿ ಜನರಿಗೆ ಮನೆಗಳನ್ನು ಒದಗಿಸಲಾಗಿದೆ’ ಎಂದ ಅವರು, ಕೇಂದ್ರದ ಯೋಜನೆಗಳನ್ನು ವಿವರಿಸಿದರು.

‘ಕಾಂಗ್ರೆಸ್‌ ಮತ್ತು ಟಿಆರ್‌ಎಸ್‌ ಕೇವಲ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸುವ ನೀತಿ ಅನುಸರಿಸುತ್ತಿವೆ. ಆದರೆ, ಬಿಜೆಪಿ ಜಾತಿ, ಧರ್ಮ ನೋಡದೇ ಪ್ರತಿಯೊಬ್ಬರ ರಕ್ಷಣೆಗೆ ಬದ್ಧವಾಗಿದೆ. ತೆಲಂಗಾಣ ರಾಜ್ಯ ಉದಯವಾದಾಗ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾಗಿ ಚಂದ್ರಶೇಖರ ರಾವ್‌ ಹೇಳಿದ್ದರು. ಆದರೆ, ಈಗ ಅದನ್ನು ಅವರು ಮರೆತಿದ್ದಾರೆ. ಪರಿಶಿಷ್ಟ ಜಾತಿಯವರಿಗೆ 3 ಎಕರೆ ಭೂಮಿ ಈವರೆಗೂ ಯಾಕೆ ನೀಡಿಲ್ಲ? ಕುಡಿಯುವ ನೀರಿನ ಸೌಲಭ್ಯ ಸಹ ಒದಗಿಸಿಲ್ಲ’ ಎಂದು ಆರೋಪಿಸಿದರು. 

ಸಂಗಾರೆಡ್ಡಿಯಲ್ಲಿ ಪ್ರಚಾರ ನಡೆಸಿದ ಯೋಗಿ, ಅಲ್ಪಸಂಖ್ಯಾತರಿಗೆ ಶೇ 12ರಷ್ಟು ಮೀಸಲಾತಿ ಒದಗಿಸುವ ಕೆಸಿಆರ್‌ ಅವರ ಪ್ರಸ್ತಾವದಿಂದ ಪರಿಶಿಷ್ಟ ಪಂಗಡದ ಮೀಸಲಾತಿಗೆ ಧಕ್ಕೆಯಾಗಲಿದೆ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !