ಸೋಮವಾರ, ಮಾರ್ಚ್ 8, 2021
22 °C

ತೆಲಂಗಾಣದಲ್ಲಿ 700 ಗುಮಾಸ್ತ ಹುದ್ದೆಗೆ 10.58 ಲಕ್ಷ ಅರ್ಜಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲಂಗಾಣದಲ್ಲಿ ಖಾಲಿ ಇರುವ 700 ಗುಮಾಸ್ತ ಹುದ್ದೆ ನೇಮಕಾತಿಗೆ 10 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗೆ 12ನೇ ತರಗತಿ ಪ್ರಮಾಣಪತ್ರ ಕನಿಷ್ಠ ಅರ್ಹತೆಯಾಗಿದ್ದು, ಅರ್ಜಿ ಸಲ್ಲಿಸಿರುವವರಲ್ಲಿ ನೂರಾರು ಮಂದಿ ಪಿಎಚ್‌ಡಿ, ಎಂ.ಫಿಲ್‌ ಪದವೀಧರರು ಹಾಗೂ ಬಹುತೇಕರು ಸ್ನಾತಕೋತ್ತರ ಪದವಿ ಮತ್ತು ಎಂಜಿನಿಯರಿಂಗ್‌ ಪದವೀಧರರಾಗಿದ್ದಾರೆ.

‘ಅರ್ಹತೆಗಿಂತ ಹೆಚ್ಚು ಶಿಕ್ಷಣ ಪಡೆದಿರುವವರು ಕಿರಿಯ ಮಟ್ಟದ ಹುದ್ದೆಗಳಗೆ ಅರ್ಜಿ ಸಲ್ಲಿಸಿರುವುದನ್ನು ನೋಡಿ ಆಶ್ಚರ್ಯವಾಗುತ್ತಿದೆ ಎನ್ನುತ್ತಾರೆ’ 2014ರಲ್ಲಿ ರಚನೆಗೊಂಡ ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ (ಟಿಎಸ್‌ಪಿಎಸ್‌ಸಿ) ಅಧ್ಯಕ್ಷರಾಗಿರುವ ಘಂಟಾ ಚಕ್ರಪಾಣಿ.

ತೆಲಂಗಾಣದಲ್ಲಿ ಗ್ರಾಮಲೆಕ್ಕಿಗ ಹುದ್ದೆ ನೇಮಕಾತಿಗಾಗಿ ಭಾನುವಾರ ಪರೀಕ್ಷೆ ನಡೆದಿತ್ತು. ಈ ಹುದ್ದೆಗಾಗಿ 10.58 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಶೇ 80ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 2011ರಲ್ಲಿ ಅವಿಭಜಿತ ಆಂಧ್ರಪ್ರದೇಶ ಸರ್ಕಾರವು ಆಹ್ವಾನಿಸಿದ್ದ ವಿಆರ್‌ಒ ಹುದ್ದೆಗೆ ಒಟ್ಟು 6 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 

‘ನಾನೇನು ಮಾಡಲಿ? ನಾನು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಓದಿದ್ದೇನೆ. ಇಂದಿನ ದಿನಗಳಲ್ಲಿ ಬಿಪಿಒಗಳಲ್ಲಿ ಮಾತ್ರ ಉದ್ಯೋಗ ದೊರೆಯುತ್ತಿದ್ದು ₹ 15,000 ವೇತನ ನೀಡುತ್ತಾರೆ. ಖಾಸಗಿ ಕ್ಷೇತ್ರಕ್ಕೆ ಹೋಲಿಸಿದರೆ ಸರ್ಕಾರಿ ವಲಯದ ಹುದ್ದೆಗಳಿಗೆ ಭದ್ರತೆ ಇರುತ್ತದೆ ಮತ್ತು ವೇತನವು ದುಪ್ಪಟ್ಟಿದೆ’ ಎನ್ನುತ್ತಾರೆ ವಿಆರ್‌ಓ ಹುದ್ದೆಗೆ ಪರೀಕ್ಷೆ ಬರೆದಿರುವ ಪ್ರಶಾಂತ್‌.

‘12ನೇ ತರಗತಿ ಅರ್ಹತೆ ಇರುವ ಈ ಹುದ್ದೆಗೆ ಅಗತ್ಯಕ್ಕಿಂತ ಹೆಚ್ಚು ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಿದ್ದಾರೆ. ನನಗೆ ಈಗಲೂ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಏಕೆಂದರೆ ಸ್ಪರ್ಧೆ ಹೆಚ್ಚಿದೆ. ಖಾಲಿ ಇರುವ ಪ್ರತಿ ಹುದ್ದೆಗೂ 1,100 ಮಂದಿಯಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿದಾರರಲ್ಲಿ ಪಿಎಚ್‌ಡಿ, ಸ್ನಾತಕೋತ್ತರ ಪದವಿ, ಕಾನೂನು ಪದವೀಧರರು ಇದ್ದಾರೆ’ ಎಂದು ಮೆಕಾನಿಕಲ್‌ ಎಂಜಿನಿಯರಿಂಗ್‌ ಪದವೀಧರ ದುರ್ಗಾ ಪ್ರಸಾದ್‌ ತಿಳಿಸುತ್ತಾರೆ. 

ಈ ಇಬ್ಬರು ಯುವಕರು ಇದೇ ವರ್ಷ ಪದವಿ ಮುಗಿಸಿ ಕಾಲೇಜಿನಿಂದ ಹೊರಬಂದಿದ್ದಾರೆ. ಅವರ ಆಸಕ್ತಿ ಹಾಗೂ ಓದಿಗೆ ತಕ್ಕನಾದ ಉದ್ಯೋಗ ಸಿಗದೇ ಇದ್ದಾಗ, ಇಬ್ಬರು ಉಬರ್‌ ಮತ್ತು ಜೊಮಾಟೊದಲ್ಲಿ ಫುಡ್‌ ಡೆಲಿವರಿ ಬಾಯ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ‘ಬಿಪಿಒನಲ್ಲಿ 10 ಗಂಟೆ ಕೆಲಸ ಮಾಡಿದರೆ ಸಿಗುವ ಸಂಬಳಕ್ಕಿಂತ ಹೆಚ್ಚಿನ ವೇತನವನ್ನು ಈ ಉದ್ಯೋಗದಿಂದ ಪಡೆಯುತ್ತಿದ್ದೇವೆ’ ಎನ್ನುತ್ತಾರೆ ಅವರು.

ತೆಲಂಗಾಣ ರಾಜ್ಯ ಲೋಕಸೇವಾ ಆಯೋಗವು ಒನ್‌ ಟೈಮ್‌ ರೆಜಿಸ್ಟ್ರೇಷನ್‌ (ಒಟಿಆರ್‌) ಎಂಬ ವಿಶಿಷ್ಟವಾದ ಸಾಫ್ಟ್‌ವೇರ್‌ ಅನ್ನು ಹೊಂದಿದೆ. ಇದರಿಂದಾಗಿ ಹುದ್ದೆಗೆ ಯಾರು ಅರ್ಜಿ ಸಲ್ಲಿಸಿದ್ದಾರೆ ಎಂಬ ದತ್ತಾಂಶ ಮಾಹಿತಿ ಸುಲಭವಾಗಿ ದೊರೆಯುತ್ತದೆ. 

ಈಗ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ 372 ಮಂದಿ ಪಿಎಚ್‌ಡಿ, 539 ಮಂದಿ ಎಂಫಿಲ್‌, 1.5 ಲಕ್ಷ ಮಂದಿ ಸ್ನಾತಕೋತ್ತರ ಪದವಿ, 2 ಲಕ್ಷ ಅಭ್ಯರ್ಥಿಗಳು ಎಂಜಿನಿಯರಿಂಗ್‌ ಪದವಿ ಹಾಗೆಯೇ 4 ಲಕ್ಷಕ್ಕೂ ಅಧಿಕ ಜನರು ಪದವೀಧರರಾಗಿದ್ದಾರೆ. 

‘ಸರ್ಕಾರಿ ಹುದ್ದೆಗಳು ಉದ್ಯೋಗ ಭದ್ರತೆ, ಉತ್ತಮ ಸಂಬಳ ಹಾಗೂ ಘನತೆಯನ್ನು ನೀಡುತ್ತದೆ. ಪ್ರತಿ 5 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ನಡೆಯುತ್ತದೆ. ಶೇ 30–40 ರಷ್ಟು ವೇತನ ಹೆಚ್ಚಳವಾಗುತ್ತದೆ’ ಎಂದು ಚಕ್ರಪಾಣಿ ವಿವರಿಸುತ್ತಾರೆ. 

ವಿಆರ್‌ಒ ಹುದ್ದೆಯು ಒಂದು ರೀತಿಯಲ್ಲಿ ಗ್ರಾಮದಲ್ಲಿ ಆಡಳಿತ ಅಧಿಕಾರಿಯಂತೆ ಇರುತ್ತದೆ. ‘ಇವರು ಶ್ರೇಣಿಯಲ್ಲಿ ಕೆಳಹಂತದಲ್ಲಿದ್ದರೂ, ಅಧಿಕಾರದಲ್ಲಿ ಪ್ರಬಲರಾಗಿರುತ್ತಾರೆ. ಈ ಹುದ್ದೆಯಲ್ಲಿ ಕೆಲಸ ಮಾಡುವವರು ಹಲವಾರು ಮೂಲಗಳ ಮೂಲಕ ತಿಂಗಳಿಗೆ 2 ಲಕ್ಷ ಗಳಿಸಲುಬಹುದು. ಹಾಗಾಗಿ ಈ ಉದ್ಯೋಗವನ್ನು ಸೇರಬಾರದೇಕೆ? ಎಂದು ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಣಾಕಾರರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮತ್ತೊಂದು ಮುಖ್ಯ ಕಾರಣವೆಂದರೆ ಉದ್ಯೋಗವಕಾಶಗಳು ಮತ್ತು ಅರ್ಹ ಅಭ್ಯರ್ಥಿಗಳ ನಡುವೆ ದೊಡ್ಡ ಅಂತರವಿದೆ. ತೆಲಂಗಾಣವು ಅತಿಹೆಚ್ಚು ಎಂಜಿನಿಯರಿಂಗ್‌ ಕಾಲೇಜುಗಳನ್ನು ಹೊಂದಿದೆ ಹಾಗೂ ಇಲ್ಲಿ ಉನ್ನತ ಶಿಕ್ಷಣ ಪಡೆಯುವವರಿಗೆ ವಿಫುಲ  ಅವಕಾಶಗಳು ದೊರೆಯುತ್ತಿವೆ. 

‘ಸರ್ಕಾರವು ಶುಲ್ಕ ಮರುಪಾವತಿ ಯೋಜನೆಯನ್ನು ಹೊಂದಿದೆ. ಹಾಗಾಗಿ ಕಳೆದ 15 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಯುವಜನರು ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಅಂದರೆ ವರ್ಷಕ್ಕೆ ಸುಮಾರು 1.5 ಲಕ್ಷ ಮಂದಿ ಪ್ರತಿ ವರ್ಷ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾರೆ. ಖಾಸಗಿ ವಲಯದಲ್ಲಿ ಉದ್ಯೋಗವಕಾಶಗಳು ದೊರೆಯದೇ ಇದ್ದಾಗ, ಸರ್ಕಾರಿ ವಲಯದ ಉದ್ಯೋಗಗಳತ್ತ ಹೊರಳುತ್ತಿದ್ದಾರೆ’ ಎಂದು ಚಕ್ರಪಾಣಿ ವಿವರಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು