ಬುಧವಾರ, ಡಿಸೆಂಬರ್ 11, 2019
21 °C

ತೆಲಂಗಾಣ: ಟಿಆರ್‌ಎಸ್ ಕಾರ್ಯಾಧ್ಯಕ್ಷರಾಗಿ ಕೆಸಿಆರ್ ಪುತ್ರ ಕೆಟಿಆರ್‌ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌(ಕೆಸಿಆರ್‌) ಅವರ ಪುತ್ರ ಹಾಗೂ ಸಿರಿಸಿಲ್ಲಾ ಕ್ಷೇತ್ರದ ಶಾಸಕ ಕೆ.ಟಿ. ರಾಮ ರಾವ್ ಅವರನ್ನು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಶುಕ್ರವಾರ ನೇಮಕ ಮಾಡಲಾಯಿತು.

ಬಾಕಿಯಿರುವ ನಿರ್ಮಾಣ ಕಾಮಗಾರಿಗಳು ಹಾಗೂ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಾಲೋಚನೆಯುಳ್ಳ, ನಂಬಿಕಸ್ಥ ಹಾಗೂ ಸಮರ್ಥ ವ್ಯಕ್ತಿಯನ್ನು ಪಕ್ಷದ ಜವಾಬ್ದಾರಿಯುತ ಹುದ್ದೆಗೆ ಆಯ್ಕೆ ಮಾಡಲು ಕೆಸಿಆರ್‌ ಬಯಸಿದ್ದರು ಎಂದು ಟಿಆರ್‌ಎಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪಕ್ಷದ ಸದಸ್ಯತ್ವ ಹೆಚ್ಚಳ ಹಾಗೂ ಜಿಲ್ಲೆಗಳಲ್ಲಿ ಪಕ್ಷದ ಕಚೇರಿ ನಿರ್ಮಿಸುವುದರ ಜೊತೆಗೆ ಹಲವು ಜವಾಬ್ದಾರಿಗಳತ್ತ ಕೆಟಿಆರ್‌ ಸದ್ಯ ಗಮನಹರಿಸಲಿದ್ದಾರೆ.

‘ಮುಖ್ಯಮಂತ್ರಿಯವರು ಕೆಟಿಆರ್‌ ಅವರ ಕಾರ್ಯನಿರ್ವಹಣೆ ಶೈಲಿ, ಬದ್ಧತೆ, ನಿರ್ದೇಶನ ಮತ್ತು ನಾಯಕತ್ವ ಗುಣಗಳ ಮೇಲೆ ಬಲವಾದ ನಂಬಿಕೆ ಇಟ್ಟಿದ್ದು, ಅವರು ಪಕ್ಷವನ್ನು ಸಮರ್ಥ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಕೆಸಿಆರ್‌ ಅವರು ಪ್ರತ್ಯೇಕ ತೆಲಂಗಾಣ ಹೋರಾಟದ ರಾಜಕೀಯ ವೇದಿಕೆಯಾಗಿ ಟಿಆರ್‌ಎಸ್‌ ಪಕ್ಷವನ್ನು 2001ರಲ್ಲಿ ಸ್ಥಾಪಿಸಿದ್ದರು. ಹೋರಾಟವು ತಾರ್ಕಿಕ ಅಂತ್ಯ ಕಾಣುವಲ್ಲಿ ಟಿಆರ್‌ಎಸ್‌ ಮಹತ್ವದ ಪಾತ್ರ ನಿರ್ವಹಿಸಿತ್ತು.

ವಿವಿಧ ರಾಜ್ಯಗಳಲ್ಲಿರುವ ಪ್ರದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳಿಗೆ ಪರ್ಯಾಯವಾದ ರಾಷ್ಟ್ರೀಯ ಪಕ್ಷವೊಂದನ್ನು ರಚಿಸುವುದಾಗಿ ಕೆಸಿಆರ್‌ ಮಂಗಳವಾರ ಘೋಷಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು