ಗುರುವಾರ , ಡಿಸೆಂಬರ್ 12, 2019
26 °C

ತೆಲಂಗಾಣ ವಿಧಾನಸಭೆ: ಪ್ರಜಾಕೂಟಮಿಗೆ ಮತ ನೀಡುವಂತೆ ಸೋನಿಯಾ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ತೆಲಂಗಾಣ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರಕ್ಕೆ ಇಂದು(ಬುಧವಾರ) ತೆರೆಬೀಳಲಿದೆ.

ಕಾಂಗ್ರೆಸ್‌, ತೆಲುಗು ದೇಶಂ ಪಕ್ಷ(ಟಿಡಿಪಿ), ತೆಲಂಗಾಣ ಜನ ಸಮಿತಿ(ಟಿಜೆಎಸ್‌) ಹಾಗೂ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಸಿಪಿಐ) ಪಕ್ಷಗಳ ಮೈತ್ರಿಕೂಟ ಪ್ರಜಾಕೂಟಮಿಗೆ ಮತ ನೀಡುವಂತೆ ಕಾಂಗ್ರೆಸ್‌ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿಡಿಯೊ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ‘ನಿಮ್ಮ ಮತವು ತೆಲಂಗಾಣದ ಭವಿಷ್ಯಕ್ಕಾಗಿ ಮಾತ್ರವಲ್ಲ, ನಿಮ್ಮ ಭವಿಷ್ಯಕ್ಕಾಗಿಯೂ ಹೌದು. ಕಾಂಗ್ರೆಸ್‌, ಟಿಡಿಪಿ, ಟಿಜೆಎಸ್‌ ಹಾಗೂ ಸಿಪಿಐ ಪಕ್ಷಗಳಿರುವ ಪ್ರಜಾಕೂಟಮಿ ನಿಮ್ಮ ದನಿ, ನಿಮ್ಮ ಸಂಘಟನೆಯಾಗಲಿದೆ. ಅದು ತೆಲಂಗಾಣದ ಪ್ರತಿ ಸಮುದಾಯಕ್ಕಾಗಿ’ ಎಂದು ಸೋನಿಯಾ ಹೇಳಿದ್ದಾರೆ.

ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ವಿರುದ್ಧವೂ ಹರಿಹಾಯ್ದಿರುವ ಅವರು, ‘ನಾಲ್ಕೂವರೆ ವರ್ಷಗಳ ಹಿಂದೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ನಿರ್ಮಾಣವಾಯಿತು. ಅದರಲ್ಲಿ ನನ್ನ ಪಾತ್ರವೂ ಇದೆ. ಆದರೆ ಅಧಿಕಾರಕ್ಕೇರಿದ ಬಳಿಕ ವಿಶ್ವಾಸದ್ರೋಹವೆಸಗಿದ್ದೀರಿ’ ಎಂದಿದ್ದಾರೆ.

‘ತೆಲಂಗಾಣದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ನಿರೀಕ್ಷೆಗಳನ್ನು, ಬಯಕೆಗಳನ್ನು ಹಾಗೂ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳುವ ಸಮಯ ಇದೀಗ ಬಂದಿದೆ. ಪ್ರಜಾಕೂಟಮಿಗೆ ಮತ ನೀಡುವಂತೆ ನಿಮ್ಮೆಲ್ಲರಲ್ಲಿ ನಾನು ಮನವಿ ಮಾಡುತ್ತೇನೆ’ ಎಂದು ಜನರಿಗೆ ಕರೆ ನೀಡಿದ್ದಾರೆ.

ತೆಲಂಗಾಣ ವಿಧಾನಸಭೆಗೆ ಡಿಸೆಂಬರ್‌ 07ರಂದು ಚುನಾವಣೆ ನಡೆಯಲಿದ್ದು, 11ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು