ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಬಂದ ಹಣ್ಣುಗಳ ‘ರಾಜ’

ನಿಧಾನವಾಗಿ ಸೆಳೆಯುತ್ತಿದೆ ಹಣ್ಣಿನ ಘಮಲು, ವಾರಕ್ಕೆರಡು ಟನ್‌ ಮಾರಾಟ; ಮಾವು ಪ್ರಿಯರ ಮೊಗದಲ್ಲಿ ಸಂತಸ
Last Updated 14 ಮೇ 2018, 11:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮತ್ತೊಮ್ಮೆ ಮಾವಿನ ಸುಗ್ಗಿ ಬಂದಿದೆ. ನಗರದ ಮಾರುಕಟ್ಟೆಯ ಅಲ್ಲಲ್ಲಿ ಹಣ್ಣುಗಳ ‘ರಾಜ’ನ ದರ್ಶನವಾಗುತ್ತಿದೆ. ಇನ್ನು ಕೆಲ ತಿಂಗಳು ಮಾವಿನದೇ ಘಮಲು. ಬೇಸಿಗೆ ಬಿಸಿಲಿನ ಝಳಕ್ಕೆ ಉದರ ತಂಪಾಗಿಸಲು ಹಣ್ಣಿನ ಮೊರೆ ಹೋಗುವವರ ಚಿತ್ತ ಇದೀಗ ಮಾವಿನತ್ತ ನೆಟ್ಟಿದೆ.

ಜಿಲ್ಲೆಯಲ್ಲಿ 13,780 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತದೆ. ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಸುಮಾರು 750 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ. ಇದರ ಪರಿಣಾಮ ಫಸಲಿನ ಪ್ರಮಾಣ ಕುಸಿಯುವಂತೆ ಮಾಡಿದೆ. ಹೀಗಾಗಿ ಈ ಬಾರಿ ಮಾರುಕಟ್ಟೆಗೆ ಮಾವಿನ ಆವಕ ತುಸು ಕಡಿಮೆಯಾಗುವ ಸಾಧ್ಯತೆ ಇದೆ. ಆ ಕಾರಣಕ್ಕೆ ಹಣ್ಣು ‘ದುಬಾರಿ’ಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ನೆರೆಯ ಕೋಲಾರದ ಶ್ರೀನಿವಾಸಪುರದಿಂದ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಬರುತ್ತಿವೆ. ಕೆಲ ವ್ಯಾಪಾರಿಗಳು ಈ ಮೊದಲೇ ಸುತ್ತಲಿನ ಮಾವಿನ ತೋಪುಗಳ ಫಸಲನ್ನು ಗುತ್ತಿಗೆ ಪಡೆದುಕೊಂಡಿದ್ದು, ಕಾಯಿ ಮಾಗಿದಂತೆಲ್ಲಾ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.

‘ಕಳೆದ ಬಾರಿ ಏಪ್ರಿಲ್‌ ಆರಂಭದಲ್ಲೇ ಮಾರುಕಟ್ಟೆಗೆ ಮಾವು ಬಂದಿತ್ತು. ಈ ಬಾರಿ ಅಕಾಲಿಕ ಮಳೆ, ಬೂದು ರೋಗ ಹಾಗೂ ಹವಾಮಾನದ ವೈಪರಿತ್ಯದಿಂದ ನಿಗದಿತ ಅವಧಿಗಿಂತ ಸ್ವಲ್ಪ ತಡವಾಗಿ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಿದೆ. ಸದ್ಯ ಬೇಡಿಕೆ ಅಷ್ಟೊಂದು ಹೆಚ್ಚಿಲ್ಲ. ಮಾರುಕಟ್ಟೆಯಲ್ಲಿ ಮಾವು ಸಿಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆ ಬೇಡಿಕೆ ಹೆಚ್ಚಾಗುತ್ತದೆ’ ಎಂಬುದು ಬಿ.ಬಿ ರಸ್ತೆಯಲ್ಲಿ ಮಾವಿನ ಹಣ್ಣು ಮಾರಾಟ ಮಾಡುವ ಬಾಬಾಜಾನ್‌ ಅವರ ಲೆಕ್ಕಾಚಾರ.

‘ನಗರದಲ್ಲಿ ಮಾವು ಮಾರಾಟದ ಸೀಜನ್‌ ಈಗಷ್ಟೇ ಆರಂಭವಾಗಿದೆ. ಆಸೆಪಟ್ಟು ತಿನ್ನುವವರಷ್ಟೇ ಖರೀದಿಸುತ್ತಿದ್ದಾರೆ. ಜುಲೈವರೆಗೂ ಇಲ್ಲಿಯೇ ವ್ಯಾಪಾರ ನಡೆಸುತ್ತೇವೆ. ಸದ್ಯ ನಿತ್ಯ ನಮ್ಮ ಅಂಗಡಿಯಿಂದ 100 ರಿಂದ 150 ಕೆ.ಜಿ ಹಣ್ಣು ಮಾರಾಟವಾಗುತ್ತಿದೆ. ಕೆ.ಜಿಗೆ ₹ 10ರಿಂದ ₹ 20 ಲಾಭ ಇಟ್ಟುಕೊಂಡು ಮಾರುತ್ತಿದ್ದೇವೆ’ ಎಂದು ಹೇಳುವರು.

‘ಸದ್ಯ ನಮ್ಮಲ್ಲಿ ರಸಪುರಿ 1 ಕೆ.ಜಿಗೆ ₹ 80, ಬಾದಾಮಿ ₹ 100, ಮಲಗೋವಾ ₹ 80, ಸಿಂಧೂರ ₹ 40, ರೊಮಾನಿ ₹ 20, ಕೇಸರ್‌ ₹ 120, ಬೇನಿಶ್‌ ₹ 50ಕ್ಕೆ ಮಾರಾಟ ಮಾಡುತ್ತಿದ್ದೇವೆ. ಸದ್ಯ ದಿನಕ್ಕೆ ₹ 1500 ವರೆಗೆ ಸಂಪಾದನೆಯಾಗುತ್ತಿದೆ. ದಿನ ಕಳೆದಂತೆ ವ್ಯಾಪಾರದ ಜೊತೆಗೆ ಲಾಭವೂ ಹೆಚ್ಚುವ ನಿರೀಕ್ಷೆ ಇದೆ’ ಎಂದು ವಿವರಿಸುವರು.

‘ಅನೇಕರು ಮಾವಿನಕಾಯಿಗಳನ್ನು ರಾಸಾಯನಿಕದಲ್ಲಿ ಅದ್ದಿ ಹಣ್ಣು ಮಾಡುತ್ತಾರೆ. ಅದು ಆರೋಗ್ಯಕ್ಕೆ ಅಪಾಯಕಾರಿ. ಆದರೆ ನಾವು ಮಾವನ್ನು ನೆಲ್ಲು ಹುಲ್ಲಿನಲ್ಲಿ ಇಟ್ಟು, ಗಾಳಿಯಾಡದಂತೆ ಟಾರ್ಪಲ್‌ನಿಂದ ಮುಚ್ಚಿಡುತ್ತೇವೆ. ಕಾವಿನಿಂದಲೇ ನೈಸರ್ಗಿಕವಾಗಿ ಹಣ್ಣಾಗಿಸುತ್ತೇವೆ. ಈ ಹಣ್ಣು ತಿಂದರೆ ಆರೋಗ್ಯಕ್ಕೆ ತೊಂದರೆ ಯಾಗದು’ ಎಂದು ತಿಳಿಸಿದರು.

‘ಹತ್ತಾರು ವರ್ಷಗಳಿಂದ ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿರುವೆ. ನಾನಾ ಕಾರಣಗಳಿಂದಾಗಿ ಈ ಬಾರಿ ಮಾರುಕಟ್ಟೆಗೆ ಬರುವ ಮಾವು ಪ್ರಮಾಣ ಕಡಿಮೆ ಆಗಲಿದೆ. ಸಿಂಧೂರ ಹಣ್ಣು ಕೆ.ಜಿಗೆ ₹ 60 ಮತ್ತು ಬಾದಾಮಿ ಕೆ.ಜಿಗೆ ₹ 100 ಬೆಲೆ ಇದೆ. ಹಣ್ಣು ತುಂಬಾ ರುಚಿ ಇರುವುದರಿಂದ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ’ ಎಂದು ಎಂ.ಜಿ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಮಾರಾಟ ಮಾಡುತ್ತಿದ್ದ ಮಹಮ್ಮದ್ ಹೇಳಿದರು.

‘ನಮ್ಮ ಮನೆಯಲ್ಲಿ ಮಾವು ಎಂದರೆ ಎಲ್ಲರಿಗೂ ಪಂಚಪ್ರಾಣ. ಪ್ರತಿ ವರ್ಷ ಸೀಜನ್‌ನಲ್ಲಿ ಹತ್ತಾರು ತಳಿಯ ಮಾವಿನ ಹಣ್ಣು ಸವಿಯುತ್ತೇವೆ. ಈಗ ಮಕ್ಕಳಿಗೆ ಶಾಲೆ ರಜೆ ಇರುವುದರಿಂದ ಮನೆಯಲ್ಲಿಯೇ ಇರುವರು. ಪ್ರತಿದಿನವೂ ಮಾವಿನ ಹಣ್ಣು ಸವಿಯುವರು. ವಾರಕ್ಕೊಮ್ಮೆ ಮಾವಿನ ಸ್ಪೆಷಲ್‌ ಇದ್ದೇ ಇರುತ್ತದೆ’ ಎನ್ನುತ್ತಾರೆ ಎಂದು ಕಂದವಾರ ಪೇಟೆಯ ನಿವಾಸಿ ಶೈಲಜಾ ತಿಳಿಸಿದರು.
–ಕೆಂಪೇಗೌಡ ಎನ್.ವೆಂಕಟೇನಹಳ್ಳಿ

*
ಸದ್ಯ ನಗರದ ಮಾರುಕಟ್ಟೆಗೆ ಒಂದು ವಾರದಲ್ಲಿ ಸುಮಾರು ಒಂದು ಟನ್‌ನಷ್ಟು ಮಾವಿನಹಣ್ಣು ಬರುತ್ತಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ.
–ಬಾಬಾಜಾನ್‌, ಮಾವಿನ ಹಣ್ಣಿನ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT