ಗುರುವಾರ , ನವೆಂಬರ್ 21, 2019
21 °C

ಅಯೋಧ್ಯೆ: ಗರಿಗೆದರಿದ ಚಟುವಟಿಕೆ

Published:
Updated:
Prajavani

ಅಯೋಧ್ಯೆ: ರಾಮ ಜನ್ಮಭೂಮಿ –ಬಾಬರಿ ಮಸೀದಿ ಭೂವಿವಾದದ ಅಂತಿಮ ತೀರ್ಪು ಹೊರಬಂದ ಮರುದಿನ (ಭಾನುವಾರ), ಅಯೋಧ್ಯೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಅಯೋಧ್ಯಾ ನಿವಾಸಿಗಳಲ್ಲಿ ಹಲವರು ಭಾನುವಾರ ಬೆಳಿಗ್ಗೆ ದಿನಪತ್ರಿಕೆಗಳನ್ನು ಹಿಡಿದು ತೀರ್ಪಿನ ಸುದ್ದಿಗಳನ್ನು ಪರಿಶೀಲಿಸುತ್ತಿರುವುದು ಕಂಡುಬಂತು. ರಾಮ ಜನ್ಮಭೂಮಿಯತ್ತ ಹೋಗುವ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆಯೇ ತೆರೆದಿದ್ದವು. ಹೂವು–ಹಣ್ಣು, ಸಿಹಿ ತಿನಿಸು ಮತ್ತು ಪೂಜಾ ಸಾಮಗ್ರಿಗಳ ಅಂಗಡಿಗಳ ವ್ಯಾಪಾರ ಎಂದಿಗಿಂತ ಹೆಚ್ಚಾಗಿತ್ತು. ಹಲವು ಅಂಗಡಿಗಳಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು.

ರಾಮ ಜನ್ಮಭೂಮಿಗೆ ಸಮೀಪದಲ್ಲಿ ಇರುವ ನಯಾ ಘಾಟ್‌ ಮತ್ತು ಹನುಮಾನ ಗಡಿ ದೇವಾಲಯದಲ್ಲಿ ಬೆಳಿಗ್ಗೆಯೇ ಜನದಟ್ಟಣೆ ಉಂಟಾಗಿತ್ತು.

‘ತೀರ್ಪು ಬಂದ ಮರುದಿನವಾದ್ದರಿಂದ ಇದು ವಿಶೇಷವಾದ ದಿನ. ಜನರಲ್ಲಿ ಸಂಭ್ರಮ ಕಾಣುತ್ತಿದೆ. ಹೆಚ್ಚು ಭಕ್ತರು ಬಂದಿದ್ದಾರೆ. ಆದರೆ, ನಿರೀಕ್ಷೆಯಷ್ಟು ಜನರು ಬಂದಿಲ್ಲ. ನಗರದ ಹಲವೆಡೆ ಪೊಲೀಸ್ ಭದ್ರತೆ ಹೆಚ್ಚಾಗಿರುವುದರಿಂದ ಹೀಗಾಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ’ ಎಂದು ಹನುಮಾನ್‌ ಗಡಿ ದೇವಾಲಯದ ಹಿರಿಯ ಪುರೋಹಿತ ಮಹಾಂತ ರಾಜು ದಾಸ್ ಅಭಿಪ್ರಾಯಪಟ್ಟಿದ್ದಾರೆ.

‘ಇಲ್ಲಿ ಪ್ರತಿದಿನ ಪೂಜೆ ನಡೆಯುತ್ತದೆ. ಆದರೆ, ಇಂದು ಇಲ್ಲಿನ ಚಿತ್ರಣವೇ ಬದಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಪೂಜೆಯೂ ಜೋರಾಗಿ ನಡೆಯುತ್ತಿದೆ. ಎಂದೂ ಕಾಣದಷ್ಟು ಹುಮ್ಮಸ್ಸು ಇಲ್ಲಿನ ಜನರಲ್ಲಿ ಕಾಣುತ್ತಿದೆ’ ಎಂದು ಇಲ್ಲಿನ ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ.

ಟೀ–ಅಂಗಡಿ, ಹೋಟೆಲ್‌ಗಳಲ್ಲಿ ಸೇರಿದ್ದ ಜನರ ಬಾಯಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನದ್ದೇ ಮಾತು. ‘ಇದು ಸತ್ಯಮೇವ ಜಯತೆ. ಇನ್ನು ಮುಂದೆ ನೋಡಿ. ಅಯೋಧ್ಯೆ ತನ್ನ ಸುವರ್ಣಯುಗಕ್ಕೆ ಮರಳುತ್ತದೆ’ ಎಂದು ಇಲ್ಲಿನ ನಿವಾಸಿ ಅನೂಪ್ ಸೈನಿ ಹೇಳಿದ್ದಾರೆ.

ಪ್ರವಾಸೋದ್ಯಮ ವೃದ್ಧಿಸುವ ನಿರೀಕ್ಷೆ
ವಿವಾದ ಬಗೆಹರಿದಿರುವ ಕಾರಣ ಅಯೋಧ್ಯೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಸಾಧ್ಯತೆಗಳು ಇವೆ ಎಂದು ಇಲ್ಲಿನ ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

‘ರಾಮ ಜನ್ಮಭೂಮಿ ಮತ್ತು ರಾಮನಿಗೆ ಸಂಬಂಧಿಸಿದ ಹಲವು ಪವಿತ್ರ ಕ್ಷೇತ್ರಗಳು ಇಲ್ಲಿವೆ. ವಿವಾದದ ಕಾರಣ, ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆ ಇತ್ತು. ಈಗ ಇಲ್ಲಿನ ದೇವಾಲಯ ಮತ್ತು ತೀರ್ಥಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ತೀರ್ಪು ಬಂದ ಮರುದಿನವೇ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಹೀಗಾಗಿ ವ್ಯಾಪಾರ ಸ್ವಲ್ಪ ಜೋರಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಲಿದೆ’ ಎನ್ನುತ್ತಾರೆ ಹನುಮಾನ್‌ ಗಡಿ ದೇವಾಲಯದ ಬಳಿ ಹೂವಿನ ಅಂಗಡಿ ನಡೆಸುವ ಅನೂಪ್‌ ಸೈನಿ.

‘ನಮ್ಮಲ್ಲಿದ್ದ ಹೂವಿನ ಹಾರಗಳು ಸಾಲುತ್ತಿರಲಿಲ್ಲ. ಹೀಗಾಗಿ ವಾರಾಣಸಿ ಮತ್ತು ಬೇರೆ ಪಟ್ಟಣಗಳಿಂದ ಹಾರಗಳನ್ನು ತರಿಸಿದ್ದೇನೆ. ವ್ಯಾಪಾರ ಜೋರಾಗಿದೆ’ ಎಂದು ಸೈನಿ ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದ ಬೇರೆ ಭಾಗಗಳಿಂದ ಅಯೋಧ್ಯೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಏರಿಕೆ ಆಗುವ ನಿರೀಕ್ಷೆ ಇದೆ.

‘ತೀರ್ಪು ಬಂದ ಮರುದಿನವೇ ನಾವು ಅಯೋಧ್ಯೆ ದರ್ಶನ ಪಡೆದಿರುವುದು ಸಂತಸ ತಂದಿದೆ. ಭದ್ರತೆ ಸಮಸ್ಯೆ ಇಲ್ಲದೇ ಇರುವ ಕಾರಣ ಪ್ರವಾಸಿಗರು ಹೆಚ್ಚು–ಹೆಚ್ಚು ಸಂಖ್ಯೆಯಲ್ಲಿ ಬರಲಿದ್ದಾರೆ’ ಎಂದು ಪ್ರವಾಸಿಗ ಗಣೇಶ್‌ ತಾರೆ ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದಿಂದ ಅವರು 55 ಜನರ ಗುಂಪಿನೊಂದಿಗೆ ಅಯೋಧ್ಯೆ ತೀರ್ಥಯಾತ್ರೆಗೆ ಬಂದಿದ್ದಾರೆ.

ರಾಮ ಮಂದಿರ ನಿರ್ಮಾಣದ ನಂತರ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)