ನಾನು ತಕ್ಕಪಾಠ ಕಲಿಸುತ್ತೇನೆ ಎಂಬುದು ಈಗ ಉಗ್ರರಿಗೂ ಗೊತ್ತಾಗಿದೆ- ಪ್ರಧಾನಿ ಮೋದಿ

ಭಾನುವಾರ, ಏಪ್ರಿಲ್ 21, 2019
26 °C

ನಾನು ತಕ್ಕಪಾಠ ಕಲಿಸುತ್ತೇನೆ ಎಂಬುದು ಈಗ ಉಗ್ರರಿಗೂ ಗೊತ್ತಾಗಿದೆ- ಪ್ರಧಾನಿ ಮೋದಿ

Published:
Updated:
Prajavani

ಅಮ್ರೋಹ: ದುಷ್ಕೃತ್ಯ ಎಸಗಿದರೆ ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹುಡುಕಿ ಮೋದಿ ತಕ್ಕ ಪಾಠ ಕಲಿಸುತ್ತಾರೆ ಎನ್ನುವುದು ಉಗ್ರರಿಗೂ ಗೊತ್ತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಉತ್ತರಪ್ರದೇಶದ ಅಮ್ರೋಹದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಪಕ್ಷಗಳ ಮಹಾ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು. 

ಕಾಂಗ್ರೆಸ್ ಹಾಗೂ ಎಸ್ಪಿ, ಬಿಎಸ್ಪಿ ಪಕ್ಷಗಳು ಉಗ್ರರ ಬಗ್ಗೆ ಮೃದು ಧೋರಣೆ ಅನುಸರಿಸಿದ್ದರಿಂದಲೇ ಉಗ್ರರಿಗೆ ದುಷ್ಕೃತ್ಯ ಎಸಗಲು ಉತ್ತೇಜನಕಾರಿಯಾಯಿತು. ಉತ್ತರ ಪ್ರದೇಶದಲ್ಲಿ ಇಬ್ಬರೂ ರಾಜಕೀಯ ಮುಖಂಡರು ಸೇರಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ನೀತಿ ಅನುಸರಿಸುತ್ತಿದ್ದರು. ಇದು ಉಗ್ರರಿಗೆ ಉತ್ತೇಜನವಷ್ಟೇ ಅಲ್ಲ, ಸಾಮಾನ್ಯ ಜನರ ಜೀವನ ಹಾಗೂ ಅವರ ಭವಿಷ್ಯವನ್ನು ಅಪಾಯದ ಅಂಚಿಗೆ ದೂಡಿತು ಎಂದು ಆರೋಪಿಸಿದರು.

ಬಾಲಕೋಟ್ ವೈಮಾನಿಕ ದಾಳಿಯನ್ನು ನೇರವಾಗಿ ಪ್ರಸ್ತಾಪಿಸದೆ ಪರೋಕ್ಷವಾಗಿ ಸಮರ್ಥಿಸಿಕೊಂಡ ಪ್ರಧಾನಿ ಮೋದಿ, ಉಗ್ರರು ದಾಳಿ ನಡೆಸಿದಾಗ ನಾನು ಏನೂ ಮಾಡದೆ ಮೂಕನಂತೆ ಕುಳಿತಿದ್ದರೆ ಭಾರತೀಯರು ಕಣ್ಣೀರು ಸುರಿಸಬೇಕಾಗಿತ್ತು. ಆದರೆ, ಭಾರತ ತಿರುಗಿಬಿತ್ತು. ಉಗ್ರರ ಮನೆಯೊಳಕ್ಕೆ ನುಗ್ಗಿ ದಾಳಿ ನಡೆಸಿತು ಎಂದು ಹೇಳಿದರು.

ಈಗ ವಿಶ್ವದ ಎದುರು ಪಾಕಿಸ್ತಾನ ಮೂಲೆಗುಂಪಾಗಿದೆ. ಭಾರತದ ಕೆಲವು ಮುಖಂಡರು ಮಾತ್ರ ಪಾಕಿಸ್ತಾನದಲ್ಲಿ ಹೀರೋಗಳಾಗಲು ಪ್ರಯತ್ನಿಸುತ್ತಿದ್ದಾರೆ. ಉಗ್ರರ ವಿರುದ್ಧ ಭಾರತವು ನಡೆಸಿದ ವೈಮಾನಿಕ ದಾಳಿಯ ಕುರಿತು ವಿರೋಧಪಕ್ಷಗಳು ಪುರಾವೆ ಕೇಳುತ್ತಿವೆ ಎಂದರು.

ದಲಿತರ ಬಗ್ಗೆ ಮಾತನಾಡಿದ ಮೋದಿ, ಕಾಂಗ್ರೆಸ್ ಅಂಬೇಡ್ಕರ್ ಕುಟುಂಬಕ್ಕೆ ಯಾವುದೇ ಗೌರವ, ಮನ್ನಣೆ ನೀಡಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ವ್ಯಕ್ತಿಯನ್ನು ಸೋಲಿಸಲು ಎಲ್ಲಾ ವಿಧದಲ್ಲಿಯೂ ಪ್ರಯತ್ನಿಸಿತು. ಈಗ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಂಬೇಡ್ಕರ್ ಪರ ಮಾತನಾಡುತ್ತಿದೆ ಎಂದು ಟೀಕಿಸಿದ್ದಾರೆ.

1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿತು. ಈ ಗೆಲುವಿಗೆ ಕಾರಣರಾಗಿದ್ದ ಅಂದಿನ ರಕ್ಷಣಾ ಸಚಿವ ಬಾಬು ಜಗಜೀವನ್ ರಾಂ ಅವರಿಗೆ ಗೆಲುವಿನ ಪ್ರಶಂಸೆಯನ್ನಾಗಲಿ, ಅವರಿಗೆ ಮನ್ನಣೆಯನ್ನಾಗಲೀ ಕಾಂಗ್ರೆಸ್ ನೀಡಲಿಲ್ಲ ಎಂದು ವ್ಯಾಖ್ಯಾನಿಸಿದರು.

ಉತ್ತರ ಪ್ರದೇಶದ ಒಟ್ಟು ಮತದಾರರಲ್ಲಿ ಶೇ.21ರಷ್ಟು ದಲಿತ ಮತದಾರರಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಏಳು ಹಂತದಲ್ಲಿಯೂ ಮತದಾನ ನಡೆಯಲಿದೆ. ಏಪ್ರಿಲ್ 11ರಿಂದ ಮೇ 19ರವರೆಗೆ ಮತದಾನ ನಡೆಯಲಿದೆ.  ಮೊದಲ ಹಂತದ ಚುನಾವಣೆಯಲ್ಲಿ ಪಶ್ಚಿಮ ಉತ್ತರಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅಮ್ರೋಹಾದಲ್ಲಿ ಏಪ್ರಿಲ್ 18ರಂದು ಎರಡನೇ ಹಂತದ ಮತದಾನ ನಡೆಯಲಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !