ಸೋಮವಾರ, ಜೂನ್ 1, 2020
27 °C
ನಿರ್ಣಯ ಅಂಗೀಕರಿಸಿದ ರಾಜ್ಯಪಾಲರು

ತೆಲಂಗಾಣ ವಿಧಾನಸಭೆ ಅವಧಿಪೂರ್ವ ವಿಸರ್ಜನೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲಂಗಾಣ ವಿಧಾನಸಭೆಯನ್ನು ಅವಧಿಗೂ ಮುನ್ನವೇ ಗುರುವಾರ ವಿಸರ್ಜಿಸಲಾಗಿದೆ.

ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ತೆರಳುವ ನಿರ್ಣಯಕ್ಕೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ನಂತರ ರಾಜಭವನಕ್ಕೆ ತೆರಳಿದ ರಾವ್ ಅವರು ರಾಜ್ಯಪಾಲ ಇ.ಎಸ್‌.ಎಲ್‌. ನರಸಿಂಹನ್ ಅವರಿಗೆ ನಿರ್ಣಯವನ್ನು ಹಸ್ತಾಂತರಿಸಿದರು. ರಾಜ್ಯಪಾಲರು ನಿರ್ಣಯವನ್ನು ಅಂಗೀಕರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆದರೆ, ಅವಧಿಗೂ ಮುನ್ನ ಚುನಾವಣೆ ನಡೆಯಲಿದೆಯೇ ಎಂಬುದು ಚುನಾವಣಾ ಆಯೋಗದ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರ್ಕಾರ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಲಿದೆ ಎಂಬ ಬಗ್ಗೆ ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಚರ್ಚೆಯಾಗುತ್ತಿತ್ತು.

ಇನ್ನೂ ಎಂಟು ತಿಂಗಳ ಅವಧಿ ಬಾಕಿ

ಟಿಆರ್‌ಎಸ್‌ ಸರ್ಕಾರಕ್ಕೆ ಇನ್ನೂ ಎಂಟು ತಿಂಗಳ ಅವಧಿ ಬಾಕಿ ಇದೆ. ಅವಧಿ ಪೂರ್ಣಗೊಳ್ಳುವವರೆಗೂ ಅಧಿಕಾರ ನಡೆಸಿದ್ದೇ ಆದಲ್ಲಿ 2019ರ ಮೇ ವರೆಗೂ ಟಿಆರ್‌ಎಸ್‌ ಸರ್ಕಾರ ಅಸ್ತಿತ್ವದಲ್ಲಿರಬೇಕಿತ್ತು. ಅಲ್ಲದೆ, 2019ರ ಲೋಕಸಭೆ ಚುನಾವಣೆ ಜತೆಗೇ ವಿಧಾನಸಭೆ ಚುನಾವಣೆಯೂ ನಡೆಯುವ ಸಾಧ್ಯತೆ ಇತ್ತು.

‘ಮುಂದಿನ ಸಚಿವ ಸಂಪುಟ ಸಭೆಯ ಬಳಿಕ ನಮ್ಮ ಪಕ್ಷದ ನಾಯಕನಿಂದ ಮಹತ್ವದ ನಿರ್ಧಾರ ಪ್ರಕಟವಾಗಲಿರುವುದನ್ನು ನೀವು ನಿರೀಕ್ಷಿಸಬಹುದು. ನಂತರ ರಾಜ್ಯದ ರಾಜಕೀಯ ಕಾವೇರಲಿದೆ’ ಎಂದು ಮುಖ್ಯಮಂತ್ರಿಗಳ ಪುತ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮ ರಾವ್ ಶನಿವಾರ ಹೇಳಿಕೆ ನೀಡಿದ್ದನ್ನು ಸುದ್ದಿವಾಹಿನಿಯೊಂದು ಬಿತ್ತರಿಸಿತ್ತು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಮೋದಿಯನ್ನು ಭೇಟಿಯಾಗಿದ್ದ ರಾವ್

ತೆಲಂಗಾಣದ ಮುಖ್ಯಮಂತ್ರಿಗಳು ಆಗಸ್ಟ್‌ನಲ್ಲಿ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದರು. ನಂತರ, ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆಯಾಗುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭಗೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು