ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌‌ಯು ಭೇಟಿ ಎಫೆಕ್ಟ್: 'ಸ್ಕಿಲ್ ಇಂಡಿಯಾ' ಪ್ರಚಾರ ವಿಡಿಯೊದಿಂದ ದೀಪಿಕಾ ಔಟ್

Last Updated 10 ಜನವರಿ 2020, 8:21 IST
ಅಕ್ಷರ ಗಾತ್ರ

ದೆಹಲಿ: ನಟಿ ದೀಪಿಕಾ ಪಡುಕೋಣೆಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ಕ್ಕೆ ಭೇಟಿ ನೀಡಿದ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಅವರ 'ಸ್ಕಿಲ್ ಇಂಡಿಯಾ' ಕಾರ್ಯಕ್ರಮ ಪ್ರಚಾರ ವಿಡಿಯೋದಿಂದ ದೀಪಿಕಾ ಮಾತನಾಡಿದ ಭಾಗವನ್ನು ತೆಗೆದು ಹಾಕಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಂದ ದೀಪಿಕಾಗೆ ಗೇಟ್ ಪಾಸ್ ನೀಡಲಾಗಿದೆ.

ಬುಧವಾರ ಕೌಶಲಾಭಿವೃದ್ದಿ ಸಚಿವಾಲಯ ಈ ವಿಡಿಯೋ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ದೀಪಿಕಾ ಪಡುಕೋಣೆ ಅವರೇ ಈ ವಿಡಿಯೋ ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಜೆಎನ್‌‌ಯು ಭೇಟಿಯಿಂದಾಗಿ 'ಸ್ಕಿಲ್ ಇಂಡಿಯಾ'ದ ಕಾರ್ಯಕ್ರಮದ ಪ್ರಚಾರವನ್ನು ದೀಪಿಕಾ ಇಲ್ಲದೆ ನಡೆಸಲಾಗಿದೆ.

ದೀಪಿಕಾ ಪಡುಕೋಣೆ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯೊಬ್ಬರ ಕುರಿತಾದ 'ಛಪಾಕ್' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಸ್ಕಿಲ್ ಇಂಡಿಯಾ ಕೇಂದ್ರ ಕೌಶಲಾಭಿವೃದ್ಧಿ ಸಚಿವಾಲಯ ನರೇಂದ್ರ ಮೋದಿ ಸರ್ಕಾರದಲ್ಲಿ ಇರುವ ಅವಕಾಶಗಳ ಕುರಿತು ಕಿರುಚಿತ್ರ ನಿರ್ಮಿಸಿತ್ತು. ಈ ಕಿರುಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೂ ಎಲ್ಲರಂತೆ ಸಮಾನ ಅವಕಾಶಗಳನ್ನು ನೀಡಲಾಗಿದೆ ಎಂದು ಮಾತನಾಡಿದ್ದರು. ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ರಾಷ್ಟ್ರದ ಎಲ್ಲಾ ಪ್ರಜೆಗಳಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದು ದೀಪಿಕಾ ಪಡುಕೋಣೆ 45 ಸೆಕೆಂಡುಗಳು ಮಾತನಾಡಿದ್ದರು.

ಈ ಕಾರ್ಯಕ್ರಮದ ವಿಡಿಯೋ ಚಿತ್ರೀಕರಿಸಿದ ನಂತರ ದೀಪಿಕಾ ಪಡುಕೋಣೆಜೆಎನ್‌‌ಯು ಆವರಣದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಈ ಬೆಳವಣಿಗೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.ಇದೀಗ ಈ ವಿಡಿಯೋವನ್ನು ಕತ್ತರಿಸಲಾಗಿದೆ.

ಈ ಸಂಬಂಧ ಕೇಂದ್ರ ಕೌಶಲಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯ ಕೇಳಿದಾಗ, ಸ್ಕಿಲ್ ಇಂಡಿಯಾ ಕುರಿತು ಮಾಹಿತಿ ಮತ್ತು ಪ್ರಚಾರಕ್ಕಾಗಿ ನಿಯೋಜಿಸಿರುವ ತಂಡ ಮಾಧ್ಯಮ ಹಾಗೂ ಖಾಸಗಿ ಸಂಸ್ಥೆಗಳಿಂದ ಸಲಹೆಗಳನ್ನು ಪಡೆಯುವುದು ಮತ್ತು ಕೊಡುವ ಕೆಲಸ ಮಾಡುತ್ತದೆ. ಅದೇ ರೀತಿ ದೀಪಿಕಾ ನಟನೆಯ ಸಿನಿಮಾ ನಿರ್ಮಾಣ ತಂಡ ನಮ್ಮ ತಂಡವನ್ನು ಸಂಪರ್ಕಿಸಿ ಸಿನಿಮಾ ಪ್ರಚಾರದ ಜೊತೆ ಆ್ಯಸಿಡ್ ದಾಳಿಗೆ ಒಳಗಾದವರಿಗೂ ಅವಕಾಶವಾಗುತ್ತದೆ ಎಂದು ಒಂದು ವಿಡಿಯೋ ನೀಡಿದ್ದರು. ಈ ವಿಡಿಯೋವನ್ನು ಪರಿಶೀಲನೆ ಮಾಡಿ ತಿರಸ್ಕರಿಸಲಾಗಿದೆ ಎಂದು ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

ಈ ಸಂಬಂಧ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಈ ದೇಶದಲ್ಲಿ ಯಾರು ಎಲ್ಲಿಗೆ ಬೇಕಾದರೂ ಹೋಗುವ, ಮಾತನಾಡುವ ಸ್ವಾತಂತ್ರ್ಯ ಇದೆ. ಇದಕ್ಕೆ ನಮ್ಮ ಆಕ್ಷೇಪ ಏನೂ ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT