ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಯಿಂದ ಕೊರೊನಾ 'ಸೈನಿಕ'ರಿಗೆ ಅಭಿನಂದನೆ

Last Updated 3 ಮೇ 2020, 6:45 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ 'ಸೈನಿಕ'ರಿಗೆ ಭಾರತೀಯ ನೌಕಾಪಡೆಯು ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸುತ್ತಿದೆ. 'ಹರ್ ಕಾಮ್ ದೇಶ್ ಕೇ ನಾಮ್' (ಪ್ರತಿ ಕೆಲಸವೂ ದೇಶಕ್ಕಾಗಿ) ಎಂಬ ಧ್ಯೇಯವಾಕ್ಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಇದರ ಭಾಗವಾಗಿ ಕಾರವಾರ, ಮುಂಬೈ ಮತ್ತು ಗುಜರಾತ್ನಲ್ಲಿರುವ ತನ್ನ ನೆಲೆಗಳಲ್ಲಿ ಯುದ್ಧನೌಕೆಗಳನ್ನು ಶನಿವಾರ ರಾತ್ರಿ ವಿದ್ಯುತ್ ದೀಪಗಳಿಂದ ಅಲಂಕರಿಸಿತ್ತು. ದೇಶದ ಅತಿದೊಡ್ಡ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯವನ್ನೂ ಒಳಗೊಂಡಂತೆ ವಿವಿಧ ನೌಕೆಗಳೂ ಇದರಲ್ಲಿ ಭಾಗವಹಿಸಿದ್ದವು. ಭಾನುವಾರವೂ ಇದೇ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನೌಕಾಪಡೆಯ ವಕ್ತಾರ ಅಜಯ್ ಕಪೂರ್ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ್ದಾರೆ.

ಯುದ್ಧ ನೌಕೆಗಳ ಮೇಲೆ, ನೌಕಾನೆಲೆಯ ಪ್ರಮುಖ ರಸ್ತೆಗಳಲ್ಲಿ ನೌಕಾ ಸಿಬ್ಬಂದಿ, 'ಇಂಡಿಯಾ ಸೆಲ್ಯೂಟ್ಸ್ ಕೊರೊನಾ ವಾರಿಯರ್ಸ್' (ಭಾರತವು ಕೊರನಾ ಸೈನಿಕರನ್ನು ಗೌರವಿಸುತ್ತದೆ) ಎಂಬ ವಾಕ್ಯದ ರೂಪದಲ್ಲಿ ನಿಂತು ಅಭಿನಂದಿಸಿದ್ದಾರೆ. ಅಲ್ಲದೇ ಯುದ್ಧ ನೌಕೆಗಳ ಮೇಲೆ ವಿಶೇಷ ಪಥಸಂಚಲನ ನಡೆಸಿದ್ದಾರೆ. ಯುದ್ಧ ನೌಕೆಗಳಿಂದ ಬಣ್ಣ ಬಣ್ಣದ ಸುಡುಮದ್ದುಗಳನ್ನೂ ಸಿಡಿಸಿ ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.

ಸಶಸ್ತ್ರ ಪಡೆಗಳ ಆಸ್ಪತ್ರೆಗಳ ಪೈಕಿ ದೇಶದಲ್ಲೇ ಮೊದಲ ಬಾರಿಗೆ ಕಾರವಾರ ನೌಕಾನೆಲೆಯ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್ 19 ಪೀಡಿತರ ಚಿಕಿತ್ಸೆಗೆ ಅವಕಾಶ ಒದಗಿಸಲಾಗಿತ್ತು. ಜಿಲ್ಲೆಯ 11 ಮಂದಿ ಕೋವಿಡ್ ರೋಗಿಗಳಲ್ಲಿ ಒಂಬತ್ತು ಮಂದಿ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ರೋಗಿಗಳಿಗೆ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಿರಿಯ ವೈದ್ಯರು ಚಿಕಿತ್ಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT