ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು, ನುಡಿಗೆ ಬೆಳಕಾದ ದೇಜಗೌ

ದೇಜಗೌ ಶತಮಾನೋತ್ಸವ ಕಾರ್ಯಕ್ರಮ; ಪ್ರೊ.ಮಾಯಿಗೌಡ ಅಭಿಮತ
Last Updated 6 ಮೇ 2018, 12:21 IST
ಅಕ್ಷರ ಗಾತ್ರ

ಮಂಡ್ಯ: ‘ದೇಜಗೌ ಅವರು ಸಾಹಿತಿಯಾಗಿ, ಮೈಸೂರು ವಿವಿ ಕುಲಪತಿಯಾಗಿ ಕನ್ನಡದ ಕಂಪು ರಾಜ್ಯದೆಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ’ ಎಂದು ಪ್ರೊ.ಮಾಯಿಗೌಡ ಹೇಳಿದರು.

ದೇಜಗೌ ಜಯಂತಿ ಮತ್ತು ಸಂಸ್ಮರಣೆ ಸಮಿತಿ ಹಾಗೂ ಜನಮನ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಶನಿವಾರ ನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ದೇಜಗೌ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆಡು ಕಾಯುವ ವ್ಯಕ್ತಿಯೊಬ್ಬ ನಾಡ ಕಾಯುವ, ನುಡಿ ಕಾಯುವ ಸ್ಥಿತಿಯನ್ನು ತಲುಪಿದ್ದು ದೇಜಗೌ ಅವರ ಯಶೋಗಾಥೆ. ದೇಜಗೌ ಅವರು ಹಲವು ವ್ಯಕ್ತಿಗಳ ಜೀವನ ರೂಪಿಸುವಲ್ಲಿ ಪ್ರಮುಖರಾಗಿದ್ದಾರೆ. ಜೀವನ ಸಾಗಿಸುವ ಕಲೆ ತಿಳಿಸಿಕೊಟ್ಟಿದ್ದಾರೆ. ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಅವರ ವಿದ್ಯಾರ್ಥಿಗಳು ಸಾಹಿತಿಗಳಾಗಿ, ವಿಮರ್ಶಕರಾಗಿ, ಚಿಂತಕರಾಗಿ ಹಾಗೂ ಮಂತ್ರಿಗಳಾಗಿ ಗುರುತಿಸಿಕೊಂಡಿದ್ದಾರೆ. ಅವರು ಬೆಳೆಸಿದ ಹಲವಾರು ವ್ಯಕ್ತಿಗಳಲ್ಲಿ ಮಾಯಿಗೌಡ ಕೂಡ ಒಬ್ಬರಾಗಿದ್ದಾರೆ. ನಾನೊಬ್ಬ ಶಿಕ್ಷಕನಾಗಿ, ವಿಮರ್ಶಕನಾಗಿ ಹಾಗೂ ರಾಜಕೀಯ ವ್ಯಕ್ತಿಯಾಗಿ ಬೆಳೆಯುವ ಹಂತದಲ್ಲಿ ನನ್ನಲ್ಲಿ ಒಬ್ಬ ಬರಹಗಾರನಿದ್ದಾನೆ ಎಂದು ಗುರುತಿಸಿ ಬರೆಯಲು ಪ್ರೇರಣೆ ನೀಡಿದರು’ ಎಂದು ಹೇಳಿದರು.

‘ದೇಜಗೌ ಹಾಗೂ ಕುವೆಂಪು ಗುರು ಶಿಷ್ಯರ ಸಂಬಂಧ ವಿಶ್ವಕ್ಕೆ ಮಾದರಿಯಾಗಿದೆ. ನಾವು ಕಣ್ಣಾರೆ ಕಂಡ ಹಲವಾರು ಸಂದರ್ಭಗಳಿವೆ. ಕುವೆಂಪು ಅವರ ಮೇಲಿನ ಗುರು ಭಕ್ತಿಯಿಂದ ದೇಜಗೌ ಅವರು ಕುವೆಂಪು ಬರಹಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಆದರ್ಶ ಹಾಗೂ ಆಶಯಗಳಿಗೆ ಅನುಗುಣವಾಗಿ ಜೀವನ ನಡೆಸುವ ಹಾಗೂ ಅವರ ಬರಹಗಳನ್ನು ಕೃತಿಗಿಳಿಸುವ ಕೆಲಸ ಮಾಡಿದ್ದಾರೆ. ಕನ್ನಡ ಆಡಳಿತ ಭಾಷೆಗಾಗಿ ಹೋರಾಟ, ಕನ್ನಡ ಜಾನಪದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬೃಹತ್ ಪ್ರಸಾರಾಂಗ ನಿರ್ಮಾಣ, ಕನ್ನಡ ಭಾಷಾಂತರ ಇಲಾಖೆ ಸ್ಥಾಪನೆ ಹಾಗೂ ವಿವಿ ಆವರಣದಲ್ಲಿ ತೋಟ ನಿರ್ಮಾಣ ಸೇರಿ ಮೈಸೂರು ವಿಶ್ವವಿದ್ಯಾಲಯ ವಿಶ್ವಮಟ್ಟದಲ್ಲಿ ಗುರುತಿಸುವಂತೆ ದಕ್ಷ, ಸಮರ್ಥ ಹಾಗೂ ವಿಶಾಲ ದೃಷ್ಟಿಕೋನದಿಂದ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಹೇಳಿದರು.

‘ದೇಜಗೌ, ಶಂಕರಗೌಡರು ಹಾಗೂ ಮಂಚಯ್ಯ ಸೇರಿ ಕನ್ನಡದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದಾರೆ. ಕನ್ನಡ ಕಟ್ಟುವ, ಬೆಳೆಸುವ ಹಾಗೂ ಉಳಿಸುವ ಕೆಲಸ ಮಾಡಿದ್ದಾರೆ. ದೇಜಗೌ ಬರೆದಿರುವ ‘ಕಾಷ್ಟ್ರಕವಿ ಕುವೆಂಪು’ ಕೃತಿಯಲ್ಲಿನ ಗದ್ಯ ಶೈಲಿ ಅದ್ಭುತವಾಗಿದೆ. ಹೀಗಾಗಿ ಇದನ್ನು ಗದ್ಯ ಶೈಲಿಯ ಮೇರು ಕೃತಿ ಎನ್ನಬಹುದು. ಅಂಬೇಡ್ಕರ್, ನಾರಾಯಣ್‌ಗುರು ಹಾಗೂ ವಿಜ್ಞಾನದ ವಿಷಯ ಕುರಿತು ಬರೆದಿದ್ದಾರೆ. ಎಲ್ಲರ ಏಳಿಗೆ ಬಯಸುವ ವ್ಯಕ್ತಿತ್ವ ಹೊಂದಿದ್ದ ಅವರು ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಚನ್ನಕೃಷ್ಣಯ್ಯ, ವಕೀಲ ಸಿ.ಪುಟ್ಟಸ್ವಾಮಿ, ಪ್ರಾಧ್ಯಾಪಕರಾದ ಡಾ.ವಿ.ಡಿ.ಸುವರ್ಣಾ, ಡಾ.ವರುಣ್, ಹೇಮಂತ್‌ಕುಮಾರ್, ವಿಕ್ಟೋರಿಯಾ, ಬೀರಲಿಂಗಯ್ಯ, ಹರ್ಷವರ್ಧನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT