ಪಾಕಿಸ್ತಾನದಿಂದ ಔಪಚಾರಿಕ ಆಹ್ವಾನ ಬಂದಿಲ್ಲ: ಕಪಿಲ್‌ ದೇವ್‌

7

ಪಾಕಿಸ್ತಾನದಿಂದ ಔಪಚಾರಿಕ ಆಹ್ವಾನ ಬಂದಿಲ್ಲ: ಕಪಿಲ್‌ ದೇವ್‌

Published:
Updated:

ಬೆಂಗಳೂರು: 'ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಔಪಚಾರಿಕ ಆಹ್ವಾನ ಬಂದಿಲ್ಲ. ಅದು ಬಂದ ನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ತಿಳಿಸಿದರು.

ನಗರ ಹೊರವಲಯದ ಪ್ರೆಸ್ಟಿಜ್ ಗಾಲ್ಫ್ ಶೈರ್ ನಲ್ಲಿ ಶನಿವಾರ ನಡೆದ ಲೂಯಿ ಫಿಲಿಪ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಪ್ರಧಾನ ಸಮಾರಂಭದ ನಂತರ ಅವರು ಪತ್ರಕರ್ತರ ಜೊತೆ ಮಾತನಾಡಿದರು.

'ಇಮ್ರಾನ್ ಖಾನ್ ಅವರು ದೂರವಾಣಿ ಕರೆ ಮಾಡಿ ಸಮಾರಂಭಕ್ಕೆ ಬರುವಂತೆ ಹೇಳಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಕ್ರಿಕೆಟ್‌ನಲ್ಲಿ ಹೆಸರು ಮಾಡಿದ್ದ ಅವರು ಆಡಳಿತದಲ್ಲೂ ಉತ್ತಮ ಸಾಧನೆ ಮಾಡುವರು ಎಂಬ ಭರವಸೆ ಇದೆ' ಎಂದು ಅವರು ಹೇಳಿದರು.‌

ಮನಸ್ಸಿನ ಆಹ್ಕಾದಕ್ಕೆ ಗಾಲ್ಫ್: ಕ್ರಿಕೆಟ್‌ನಿಂದ ನಿವೃತ್ತನಾದ ನಂತರ ಪೂರ್ಣಪ್ರಮಾಣದಲ್ಲಿ ಗಾಲ್ಫ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಆಟ ಮನಸ್ಸಿಗೆ ಆಹ್ಲಾದ ನೀಡುತ್ತದೆ ಎಂದು ಕಪಿಲ್ ದೇವ್ ಹೇಳಿದರು. ಶ್ರೀಲಂಕಾದ ಮಾಹೇಲ ಜಯವರ್ಧನೆ ಮತ್ತು ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ ಕೂಡ ಕಪಿಲ್ ಮಾತಿಗೆ ಸಹಮತ ವ್ಯಕ್ತಪಡಿಸಿದರು.

'ಗಾಲ್ಫ್ ಕ್ರೀಡೆಯನ್ನು ಸೋಮಾರಿಗಳ ಆಟ ಎಂದು ಹೇಳಲಾಗದು. ಇದರಲ್ಲಿ ತೊಡಗಿಸಿಕೊಳ್ಳುವವರು ದೈಹಿಕವಾಗಿ ಫಿಟ್ ಅಗಿರಬೇಕು, ಮಾನಸಿಕವಾಗಿ ಸದೃಢರಾಗಿರಬೇಕು' ಎಂದು ಮಾಹೇಲ ಅಭಿಪ್ರಾಯಪಟ್ಟರು.

'ಇತರ ಯಾವುದೇ ಕ್ರೀಡೆಯಲ್ಲಿ ಎದುರಾಳಿಯ ವಿರುದ್ಧ ನಾವು ಸೆಣಸಬೇಕಾಗುತ್ತದೆ. ಆದರೆ ಗಾಲ್ಫ್ ನಲ್ಲಿ ನಮ್ಮನ್ನು ನಾವೇ ಗೆಲ್ಲಬೇಕಾಗುತ್ತದೆ' ಎಂದು ಕಪಿಲ್ ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !