ಭಾನುವಾರ, ಡಿಸೆಂಬರ್ 8, 2019
21 °C
ರಹಸ್ಯ ಕಾರ್ಯಾಚರಣೆ ಸತ್ಯ ಬಯಲು

ಅವರು ಗೋವನ್ನು ಕೊಂದರು, ನಾನು ಅವರನ್ನು ಕೊಂದೆ: ಆರೋಪಿಯ ಹೇಳಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಅವರು ಗೋವನ್ನು ಕೊಂದರು. ನಾನು ಅವರನ್ನು ಕೊಂದೆ.’ ಇದು ಉತ್ತರ ಪ್ರದೇಶದ ಹಾಪುಡ್ ಜಿಲ್ಲೆಯಲ್ಲಿ ಮಾಂಸದ ವ್ಯಾಪಾರಿಯನ್ನು ಹೊಡೆದು ಕೊಂದ ಪ್ರಕರಣದ ಆರೋಪಿಯ ಹೇಳಿಕೆ!

ಎನ್‌ಡಿಟಿವಿ ಸುದ್ದಿವಾಹಿನಿಯ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆ ವೇಳೆ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.

ಆರ್‌ಎಸ್‌ಎಸ್‌ ಮತ್ತು ಇತರ ಹಿಂದೂ ಪರ ಸಂಘಟನೆಗಳ ಕಾರ್ಯಚಟುವಟಿಕೆಗಳ ಸಂಶೋಧಕರ ಸೋಗಿನಲ್ಲಿ ಎನ್‌ಡಿಟಿವಿಯ ತನಿಖಾ ತಂಡ ಎರಡು ರಾಜ್ಯಗಳಲ್ಲಿ ನಡೆದಿದ್ದ ಗುಂಪು ಹಲ್ಲೆ, ಮತ್ತು ಹತ್ಯೆ ಪ್ರಕರಣಗಳ ಇಬ್ಬರು ಆರೋಪಿಗಳನ್ನು ಇತ್ತೀಚೆಗೆ ಭೇಟಿ ಮಾಡಿತ್ತು.

ಮೊದಲಿಗೆ ಉತ್ತರ ಪ್ರದೇಶದ ಹಾಪುಡ್ ಜಿಲ್ಲೆಯ ಖುರ್ದ್ ಗ್ರಾಮಕ್ಕೆ ಭೇಟಿ ನೀಡಲಾಗಿದೆ. ಜೂನ್‌ 18ರಂದು ಹಾಪುಡ್‌ನಲ್ಲಿ ಮಾಂಸದ ವ್ಯಾಪರಿ ಖಾಸಿಂ ಖುರೇಷಿ ಎಂಬುವವರನ್ನು ಅಕ್ರಮ ಗೋಸಾಗಾಟದ ಆರೋಪದಲ್ಲಿ ಜನರ ಗುಂಪು ಹೊಡೆದು ಸಾಯಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಹತ್ಯೆ, ಕೊಲೆ ಯತ್ನದ ಆರೋಪ ಹೊರಿಸಲಾಗಿತ್ತು. ನಾಲ್ವರು ಆರೋಪಿಗಳು ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಪೈಕಿ ಖುರ್ದ್‌ನ ರಾಕೇಶ್ ಸಿಸೋಡಿಯಾ ಒಬ್ಬ.

ನ್ಯಾಯಾಲಯಕ್ಕೆ ನೀಡಿದ ಲಿಖಿತ ಹೇಳಿಕೆಯಲ್ಲಿ, ಹತ್ಯೆಯಲ್ಲಿ ತನ್ನ ಪಾತ್ರವಿಲ್ಲವೆಂದೂ ಘಟನೆ ನಡೆದ ಸ್ಥಳದಲ್ಲಿ ತಾನಿರಲೇ ಇಲ್ಲವೆಂದೂ ಹೇಳಿದ್ದ. ಆದರೆ, ಜೈಲಿನಲ್ಲಿದ್ದಾಗ ಜೈಲು ಅಧಿಕಾರಿಗಳ ಮುಂದೆಯೇ ತಪ್ಪೊಪ್ಪಿಕೊಂಡಿದ್ದೆ ಎಂದು ಈಗ ಬಾಯ್ಬಿಟ್ಟಿದ್ದಾನೆ. ಇದು ರಹಸ್ಯ ಕ್ಯಾಮರಾದಲ್ಲಿ ದಾಖಲಾಗಿದೆ.

‘ಅವರು ಗೋವನ್ನು ಕೊಂದರು, ನಾನು ಅವರನ್ನು ಕೊಂದೆ’ ಎಂದು ಯಾವ ಪ್ರಕರಣದಲ್ಲಿ ಇಲ್ಲಿಗೆ ಬಂದಿದ್ದಿ ಎಂದು ಕೇಳಿದ ಜೈಲರ್‌ಗೆ ಸಿಸೋಡಿಯಾ ಹೇಳಿದ್ದ. ‘ಜೈಲಿಗೆ ಹೋಗುವ ಬಗ್ಗೆ ಹೆದರಿಕೆಯಿಲ್ಲ’ ಎಂದೂ ಸಿಸೋಡಿಯಾ ಹೇಳಿದ್ದನ್ನು ಎನ್‌ಡಿಟಿವಿ ವರದಿ ಉಲ್ಲೇಖಿಸಲಾಗಿದೆ.

ಬಿಡುಗಡೆಯಾದಾಗ ಭವ್ಯ ಸ್ವಾಗತ: ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದಾಗ ಭವ್ಯ ಸ್ವಾಗತ ದೊರೆಯಿತು ಎಂದೂ ಆತ ಹೇಳಿದ್ದಾನೆ. ‘ನನ್ನನ್ನು ಜೈಲಿನಿಂದ ಕರೆದೊಯ್ಯಲು 3–4 ಕಾರುಗಳಲ್ಲಿ ಜನ ಬಂದಿದ್ದರು. ನನ್ನ ಹೆಸರಿನಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ನನಗೆ ಬಹಳ ಹೆಮ್ಮೆ ಎನಿಸಿತು’ ಎಂದು ರಾಕೇಶ್ ಹೇಳಿದ್ದಾನೆ.

‘ಪೊಲೀಸರು ನಮ್ಮ ಕಡೆಗಿದ್ದಾರೆ’

‘ನನ್ನ ಸೇನೆ ಸಿದ್ಧವಾಗಿದೆ. ಯಾರಾದರೂ ಗೋವನ್ನು ಕೊಂದರೆ ಅವರನ್ನು ನಾವು ಹತ್ಯೆ ಮಾಡುತ್ತೇವೆ. ಸಾವಿರ ಬಾರಿ ಬೇಕಾದರೂ ಜೈಲಿಗೆ ಹೋಗುತ್ತೇವೆ. ಸರ್ಕಾರದ ನಿಲುವಿನಿಂದಾಗಿ ಪೊಲೀಸರೂ ನಮ್ಮ ಕಡೆಗಿದ್ದಾರೆ. ಆಜಂ ಖಾನ್‌ ಅವರೇ ಅಧಿಕಾರದಲ್ಲಿದ್ದರೆ (ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರದ ಸಚಿವರು) ಏನೂ ಆಗುತ್ತಿರಲಿಲ್ಲ’ ಎಂದು ರಾಕೇಶ್ ಹೇಳಿದ್ದಾನೆ.

ಗೋರಕ್ಷಕರು ದಾಳಿ ಮಾಡಿದ ಸಂದರ್ಭದಲ್ಲಿ ಖಾಸಿಂ ಅವರು ನೀರು ನೀಡುವಂತೆ ಬೇಡಿಕೊಂಡಿದ್ದರು. ಆದರೆ, ನೀರು ನೀಡದಂತೆ ರಾಕೇಶ್ ಅರಚಿಕೊಂಡಿದ್ದ. ‘ಆತ ಗೋಹತ್ಯೆ ಮಾಡಿದ್ದ, ಆತನಿಗೆ ನೀರು ಕುಡಿಯುವ ಹಕ್ಕಿಲ್ಲ ಎಂದು ನಾನು ಹೇಳಿದ್ದೆ. ನನ್ನ ಸೇನೆ ಆತನನ್ನು ಹತ್ಯೆ ಮಾಡಿತು’ ಎಂದೂ ರಾಕೇಶ್ ಹೇಳಿದ್ದಾನೆ.

ನಂತರ ಎನ್‌ಡಿಟಿವಿ ತಂಡ ಪೆಹ್ಲು ಖಾನ್ ಹತ್ಯೆ ಆರೋಪಿಯ ಬಳಿ ತೆರಳಿದೆ. 2017ರ ಏಪ್ರಿಲ್‌ನಲ್ಲಿ ರಾಜಸ್ಥಾನದ ಜೈಪುರದಲ್ಲಿ ಪೆಹ್ಲು ಖಾನ್ ಹತ್ಯೆಯಾಗಿತ್ತು. ಪ್ರಕರಣದ ಎಲ್ಲ 9 ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾರೆ.

ಈ ಪೈಕಿ ವಿಪಿನ್ ಯಾದವ್ ಎಂಬಾತನನ್ನು ಮಾತನಾಡಿಸಲಾಗಿದೆ. ಆತನ ಹೇಳಿಕೆ ಹೀಗಿದೆ:‌

‘ನಾವು ಆತನನ್ನು 1.5 ತಾಸು ಹೊಡೆಯುತ್ತಲೇ ಇದ್ದೆವು. ಆರಂಭದಲ್ಲಿ 10 ಜನ ಇದ್ದರು. ನಂತರ ತುಂಬಾ ಜನ ಸೇರಿದರು. ಅವರು ಟ್ರಕ್‌ ನಿಲ್ಲಿಸಲಿಲ್ಲ. ಹಾಗಾಗಿ ನಾನು ಓವರ್‌ಟೇಕ್ ಮಾಡಿ ಟ್ರಕ್‌ನ ಕೀಗಳನ್ನು ಜೇಬಿನಲ್ಲಿರಿಸಿಕೊಂಡೆ. ಆತನನ್ನು (ಪೆಹ್ಲು ಖಾನ್) ಚೆನ್ನಾಗಿ ಹೊಡೆಯಲಾಯಿತು. ಆ ಸಂದರ್ಭದಲ್ಲಿ ಆತನ ಟ್ರಕ್‌ನ ಕೀ ನನ್ನ ಜೇಬಿನಲ್ಲಿಟ್ಟುಕೊಂಡಿರುವುದನ್ನು ಮರೆತಿದ್ದೆ’ ಎಂದು ವಿಪಿನ್ ಯಾದವ್ ಹೇಳಿದ್ದಾನೆ.

ಇನ್ನಷ್ಟು...

ಅಲ್ವಾರ್‌ ಪ್ರಕರಣ: ಆರು ಮಂದಿ ದೋಷಮುಕ್ತ

ಅಕ್ರಮ ಗೋಸಾಗಾಟದ ಅನುಮಾನ: ರಾಜಸ್ಥಾನದಲ್ಲಿ ವ್ಯಕ್ತಿಯ ಹತ್ಯೆ

ಗುಂಪು ಹತ್ಯೆಗಳಿಗೆ ಅನಗತ್ಯ ಪ್ರಾಮುಖ್ಯ: ಯೋಗಿ ಆದಿತ್ಯನಾಥ್

ಗೋಹತ್ಯೆ ನಿಲ್ಲಿಸಿದರೆ ಗುಂಪು ದಾಳಿ ಹತ್ಯೆಗಳು ನಿಲ್ಲುತ್ತವೆ: ಆರ್‌ಎಸ್‌ಎಸ್‌ ನಾಯಕ

ಗೋರಕ್ಷಣೆಯ ಯುದ್ಧ ನಿಲ್ಲುವುದಿಲ್ಲ: ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಲೋಧ್

ಗುಂಪು ದಾಳಿ ತಡೆಗೆ ಕೇಂದ್ರದ ಸಮಿತಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು