ಶನಿವಾರ, ಜನವರಿ 25, 2020
22 °C

ಆರೋಪಿಗಳನ್ನು ಗುಂಡಿಟ್ಟು ಕೊಲ್ಲಿ ಇಲ್ಲವೇ ನೇಣಿಗೇರಿಸಿ:ಉನ್ನಾವ್‌ ಸಂತ್ರಸ್ತೆ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಪೊಲೀಸರು ಎನ್‌ಕೌಂಟರ್‌ ಮಾಡಿದ ರೀತಿಯಲ್ಲೇ ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಹತ್ಯೆ ಮಾಡಿದ ನಾಲ್ವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆ ಒತ್ತಾಯಿಸಿದ್ದಾರೆ.

23 ವರ್ಷದ ಸಂತ್ರಸ್ತೆಯು ನ್ಯಾಯಾಲಯಕ್ಕೆ ವಿಚಾರಣೆಗೆಂದು ತೆರಳುವ ವೇಳೆ ಇಬ್ಬರು ಅತ್ಯಾಚಾರ ಆರೋಪಿಗಳು ಸೇರಿ ಐವರು ಬೆಂಕಿ ಹಚ್ಚಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಶೇ. 90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆಯ ತಂದೆ, ಸರ್ಕಾರ ಮತ್ತು ಅಧಿಕಾರಿಗಳಿಂದ ನಾವು ಬಯಸುವುದಿಷ್ಟೆ. ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ರೀತಿಯಲ್ಲಿ ನನ್ನ ಮಗಳ ಪ್ರಕರಣದ ಎಲ್ಲ ಆರೋಪಿಗಳನ್ನು ನೇಣಿಗೇರಿಸಿ ಇಲ್ಲವೇ ಗುಂಡಿಟ್ಟು ಕೊಲ್ಲಿ. ನನಗೆ ದುರಾಸೆಯಿಲ್ಲ. ಯಾವುದೇ ಮನೆ ಮಾಡಬೇಕೆಂಬ ಆಸೆಯಿಲ್ಲ. ನನಗಿನ್ನೇನು ಬೇಡ ಎಂದು ಹೇಳಿದ್ದಾರೆ.  

ನನ್ನ ಪುತ್ರಿಯು ರಾಯ್ ಬರೇಲಿಗೆ ರೈಲಿನಲ್ಲಿ ಹೋಗಲೆಂದು ಒಬ್ಬಂಟಿಯಾಗಿ ತೆರಳುತ್ತಿದ್ದಳು. ಈ ವೇಳೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಸಾವು: ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಕಿಡಿ

ಸಂತ್ರಸ್ತೆಯ ಅಣ್ಣ ಮಾತನಾಡಿ, ನನ್ನ ತಂಗಿಗೆ ಬೆಂಕಿ ಹಚ್ಚಿದ ಅವರೆಲ್ಲರ ಸಾವನ್ನು ನೋಡಲು ಅವಳು ಬಯಸಿದ್ದಳು. ನನ್ನನ್ನು ದಯಮಾಡಿ ಬದುಕಿಸಿ. ನಾನು ಅವರ ಸಾವನ್ನು ನೋಡಬೇಕು ಎಂದು ಹೇಳಿದ್ದಳು. ನಿನ್ನನ್ನು ಬದುಕಿಸಿಕೊಳ್ಳುತ್ತೇವೆ ಎಂದು ನಾವು ಹೇಳಿದ್ದೆವು. ಆದರೆ ಅದು ಆಗಲಿಲ್ಲ. ನನ್ನ ತಂಗಿ ಈಗ ಬದುಕಿಲ್ಲ. ಆದರೆ ಐವರು ಆರೋಪಿಗಳು ಸಾಯುವುದನ್ನು ನೋಡಲು ನಾನು ಬಯಸುತ್ತೇನೆ. ಇದು ನಮ್ಮೆಲ್ಲರ ಆಸೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: 

ರಾಯ್‌ಬರೇಲಿಗೆ ತೆರಳಬೇಕಿದ್ದರಿಂದಾಗಿ ನಾನು ಮುಂಜಾನೆ 4ಗಂಟೆ ಸುಮಾರಿಗೆ ಸ್ಥಳೀಯ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದೆ. ಅಷ್ಟೊತ್ತಿಗಾಗಲೇ ಐವರು ನನಗಾಗಿ ಕಾಯುತ್ತಿದ್ದರು. ಅಲ್ಲಿಗೆ ತಲುಪುತ್ತಿದ್ದಂತೆ ನನ್ನನ್ನು ಸುತ್ತುವರಿದು ಕೋಲಿನಿಂದ ಕಾಲಿಗೆ ಹೊಡೆದರು ಮತ್ತು ಚಾಕುವಿನಿಂದ ಕುತ್ತಿಗೆಗೆ ಇರಿದರು. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂಬ ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು