ಶನಿವಾರ, ಆಗಸ್ಟ್ 8, 2020
24 °C
ವಲಸೆ ಕಾರ್ಮಿಕರ ಕುರಿತ ಅರ್ಜಿ ವಿಚಾರಣೆ * ಪ್ರಶಾಂತ್‌ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್‌

ನ್ಯಾಯಾಂಗ ಸರ್ಕಾರದ ಒತ್ತೆಯಾಳಲ್ಲ: ಸುಪ್ರೀಂ ಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ನ್ಯಾಯಾಂಗ ಸರ್ಕಾರದ ಒತ್ತೆಯಾಳು ಅಲ್ಲ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕಿಡಿಕಾರಿದೆ.

ದೇಶದಾದ್ಯಂತ ಸಿಲುಕಿರುವ ವಲಸೆ ಕಾರ್ಮಿಕರಿಗೆ ಕೊರೊನಾ ವೈರಸ್ ಪರೀಕ್ಷೆಯ ಬಳಿಕ ಸ್ವಗ್ರಾಮಗಳಿಗೆ ಹಿಂತಿರುಗಲು ಅನುಮತಿ ನೀಡಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಈ ಮೇಲಿನಂತೆ ಹೇಳಿದೆ.

‘ಜನರ ವಿಶೇಷವಾಗಿ ವಲಸೆ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲಾಗುತ್ತಿಲ್ಲ. ಸರ್ಕಾರದ ದೃಷ್ಟಿಕೋನವನ್ನು ಪರಿಶೀಲಿಸದೆ ಕುರುಡಾಗಿ ಪರಿಗಣಿಸಲಾಗುತ್ತಿದೆ’ ಎಂದು ಅರ್ಜಿದಾರರ ಪರ  ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದಾಗ,  ‘ನಿಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಿದ್ದಲ್ಲಿ ನಿಮ್ಮ ವಾದವನ್ನು ನ್ಯಾಯಾಲಯ ಏಕೆ ಆಲಿಸಬೇಕು? ಈ ವ್ಯವಸ್ಥೆಯು ಸರ್ಕಾರದ ಒತ್ತೆಯಾಳು ಅಲ್ಲ’ ಎಂದು ‘ಸುಪ್ರೀಂ’ಕಿಡಿಕಾರಿತು.

‘ನ್ಯಾಯಾಂಗವು ಸಾಂವಿಧಾನಿಕವಾಗಿ ರೂಪಿತವಾದ ವ್ಯವಸ್ಥೆಯಾಗಿದೆ. ವಲಸೆ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದ್ದು, ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ನನಗೆ ಅರ್ಹತೆ ಇದೆ’ ಎಂದು ಭೂಷಣ್ ಪ್ರತಿಪಾದಿಸಿದರು. 

‘ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರ ಬಗ್ಗೆ ಕಣ್ಮುಚ್ಚಿ ಕುಳಿತಿದೆ. ಶೇ 90ರಷ್ಟು ಕಾರ್ಮಿಕರಿಗೆ ವೇತನವಾಗಲೀ, ಪಡಿತರವಾಗಲೀ ದೊರಕಿಲ್ಲ. ಹತಾಶ ಸ್ಥಿತಿಯಲ್ಲಿರುವ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹಿಂತಿರುಗಲು ಅನುಮತಿ ನೀಡಬೇಕೆಂದು’ ಅವರು ಕೋರಿದರು.

ಸರ್ಕಾರಕ್ಕೆ ಕಾಳಜಿ ಇದೆ: ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಸರ್ಕಾರವು ವಲಸೆ ಕಾರ್ಮಿಕರ ಪರ ಕಾಳಜಿ ಹೊಂದಿದ್ದು, ಅವರಿಗೆ ಅಗತ್ಯ ಸಹಾಯವನ್ನು ಮಾಡಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಆಯಾ ರಾಜ್ಯಗಳೊಂದಿಗೆ ಸಮಾಲೋಚಿಸುತ್ತಿದೆ. ಪ್ರಶಾಂತ್ ಅವರು ತಮ್ಮ ಅರ್ಜಿದಾರರು ನೀಡಿದ ಮಾಹಿತಿ ಆಧಾರದ ಮೇಲೆ ತಪ್ಪಾದ ವರದಿಗಳನ್ನು ನೀಡುತ್ತಿದ್ದಾರೆ’ ಎಂದು ದೂರಿದರು. 

‘ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಸರ್ಕಾರಕ್ಕೆ ಯಾವುದೇ ನೋಟಿಸ್ ಅಥವಾ ನಿರ್ದೇಶನ ನೀಡಬಾರದು ಎಂದು ಮೆಹ್ತಾ ಅವರು ಮನವಿ ಮಾಡಿದರು.

‘ಇದು ತಪ್ಪು ಸಂದೇಶಕ್ಕೆ ಎಡೆ ಮಾಡಿಕೊಡುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರದೊಳಗೆ ಉತ್ತರಿಸುವುದಾಗಿ’ ಹೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ಪೀಠವು, ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡುವುದಾಗಿ ಹೇಳಿತು. 

ಅರ್ಜಿದಾರರಾದ ಅಹಮದಾ ಐಐಎಂನ ಮಾಜಿ ನಿರ್ದೇಶಕ ಜಗದೀಪ್ ಎಸ್. ಚೋಕರ್, ವಕೀಲ ಗೌರವ್ ಜೈನ್ ಅವರ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು