ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ಹತ್ಯೆ; ವಕೀಲೆ, ಪತ್ನಿ ಬಂಧನ

ವೈವಾಹಿಕ ವೈಮನಸ್ಸು ಕೊಲೆಗೆ ಕಾರಣ l ಉಸಿರುಗಟ್ಟಿಸಿ ಕೃತ್ಯ
Last Updated 24 ಏಪ್ರಿಲ್ 2019, 20:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಿರಿಯ ರಾಜಕಾರಣಿ ಎನ್‌.ಡಿ. ತಿವಾರಿ ಅವರ ಪುತ್ರ ರೋಹಿತ್‌ ಶೇಖರ್‌ ತಿವಾರಿ ಅವರ ಕೊಲೆ ಆರೋಪದ ಮೇಲೆ ರೋಹಿತ್‌ ಅವರ ಪತ್ನಿ, ವಕೀಲೆ ಅಪೂರ್ವಾ ಅವರನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಏ. 15–16ರ ರಾತ್ರಿ ಅವರನ್ನು ಉಸಿರುಗಟ್ಟಿಸಿ ಸಾಯಿಸಲಾಗಿತ್ತು. ವೈವಾಹಿಕ ಜೀವನದಲ್ಲಿ ವೈಮನಸ್ಸಿನ ಕಾರಣಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ದಂಪತಿಯ ವೈವಾಹಿಕ ಜೀವನ ಸಂತಸದಿಂದ ಕೂಡಿರಲಿಲ್ಲ. ಪದೇಪದೇ ಜಗಳಗಳಾಗುತ್ತಿದ್ದವು. ಘಟನೆ ನಡೆದ ರಾತ್ರಿ ದಂಪತಿ ಸಂಬಂಧಿಯೊಬ್ಬನ ಜತೆ ಜಗಳವಾಡಿದ್ದರು. ಉತ್ತರಾಖಂಡದಿಂದ ದೆಹಲಿಗೆ ಬರುವ ಮಾರ್ಗದುದ್ದಕ್ಕೂ ರೋಹಿತ್‌ ವಿಪರೀತ ಮದ್ಯ ಸೇವಿಸಿ ಸ್ಥಿಮಿತ ಕಳೆದುಕೊಂಡಿದ್ದರು. ಇಬ್ಬರ ನಡುವೆ ಜಗಳ ತಾರಕಕ್ಕೇರಿತು. ಈ ವೇಳೆ ಅಪೂರ್ವ ರೋಹಿತ್‌ ಮೇಲೆರಗಿ ಉಸಿರುಗಟ್ಟುವಂತೆ ಮಾಡಿದರು’ ಎಂದು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ರಾಜೀವ್‌ ರಂಜನ್‌ ಸುದ್ದಿಗಾರರಿಗೆ ತಿಳಿಸಿದರು.

‘ಆರೋಪಿಯು ತಪ್ಪೊಪ್ಪಿಕೊಂಡಿದ್ದಾಳೆ. ಘಟನೆಯ ಸನ್ನಿವೇಶ ಮತ್ತು ವಾಸ್ತವಾಂಶಗಳನ್ನು ಪರಿಶೀಲಿಸಿದಾಗ ಇದು ಪೂರ್ವಯೋಜಿತ ಕೊಲೆ ಅಲ್ಲ. ವೈವಾಹಿಕ ಸಮಸ್ಯೆಗಳ ಕಾರಣಕ್ಕಾಗಿ ಇಬ್ಬರೂ ಪ್ರತ್ಯೇಕವಾಗುವ ಆಲೋಚನೆ ಹೊಂದಿದ್ದರು’ ಎಂದು ರಂಜನ್‌ ತಿಳಿಸಿದರು.

‘ಅಪೂರ್ವಾ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಅವರ ವಿಚಾರಣೆ ಮುಂದುವರಿದಿದೆ. ಘಟನೆಯ ತನಿಖೆಯ ವೇಳೆ ಅವರ ಹೇಳಿಕೆಗಳಲ್ಲಿ ಭಿನ್ನತೆಗಳು ಕಂಡುಬಂದ ಕಾರಣ ಅವರ ಮೇಲೆ ಶಂಕೆ ಮೂಡಿತು. ಹೀಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದೆವು’ ಎಂದು ಪೊಲೀಸರು ಹೇಳಿದರು.

‘ಅಪೂರ್ವಾ ಕುಟುಂಬದವರು ಹಣದ ವ್ಯಾಮೋಹ ಹೊಂದಿದ್ದರು. ತಮ್ಮ ಕುಟುಂಬದ ಆಸ್ತಿಯನ್ನು ಕಬಳಿಸಲು ಬಯಸಿದ್ದರು’ ಎಂದು ರೋಹಿತ್‌ ಅವರ ತಾಯಿ ಉಜ್ವಲಾ ಅವರು ಆರೋಪಿಸಿದ್ದರು. ‘ಮದುವೆಯಾದ ಮೊದಲ ದಿನದಿಂದಲೇ ದಂಪತಿ ಜಗಳ ಆರಂಭಿಸಿದ್ದರು’ ಎಂದೂ ಉಜ್ವಲಾ ಈ ಹಿಂದೆ ಹೇಳಿದ್ದರು.

ಏ. 16ರಂದು ಕೆಲಸಗಾರರೊಬ್ಬರು ಮೂಗಿನಿಂದ ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ರೋಹಿತ್‌ ಅವರನ್ನು ಕಂಡಿದ್ದರು. ಏ. 15 ರಾತ್ರಿ 11ಕ್ಕೆ ಊಟ ಸೇವಿಸಿ ಎರಡು ಗಂಟೆಗಳ ಒಳಗೆ ಈ ಸಾವು ಸಂಭವಿಸಿದೆ ಎಂದು ಮರಣೋತ್ತರ ವರದಿ ಹೇಳಿತ್ತು.

ಕಾಂಗ್ರೆಸ್‌ ನಾಯಕ ಎನ್‌ಡಿ ತಿವಾರಿ ರೋಹಿತ್‌ ಅವರ ತಂದೆಯೆಂದು 2016ರರಲ್ಲಿ ಡಿಎನ್‌ಎ ಪರೀಕ್ಷೆ ನಂತರ ಸಾಬೀತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT