ಗುರುವಾರ , ಫೆಬ್ರವರಿ 27, 2020
19 °C

ಸಾವರ್ಕರ್‌ ವಿರೋಧಿಗಳು ಎರಡು ದಿನ ಅಂಡಮಾನ್‌ ಜೈಲಲ್ಲಿ ಕಳೆಯಲಿ: ಸಂಜಯ್‌ ರಾವುತ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಹಿಂದುತ್ವ ಪ್ರತಿಪಾದಕ ವಿ.ಡಿ. ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುವವರು ಅಂಡಮಾನ್‌ನ ಸೆಲ್ಯುಲರ್‌ ಜೈಲಿನಲ್ಲಿ ಎರಡು ದಿವಸ ಕಳೆಯಬೇಕು’ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಶನಿವಾರ ಹೇಳಿದ್ದಾರೆ.

‘ಸಾವರ್ಕರ್‌ ಅವರು ಬ್ರಿಟಿಷರಿಂದ ಜೈಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಇದರಿಂದ ಸಾಧ್ಯ’ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಶಿವಸೇನಾ ಅಧಿಕಾರ ಹಂಚಿಕೊಂಡಿದ್ದರೂ ಸೈದ್ಧಾಂತಿಕವಾಗಿ ಭಿನ್ನವಾಗಿದೆ ಎಂಬುದನ್ನು ರಾವುತ್‌ ಹೇಳಿಕೆ ಸ್ಪಷ್ಟಪಡಿಸಿದೆ.

ರಾವುತ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಆದಿತ್ಯ ಠಾಕ್ರೆ ‘ಹಳೆಯದನ್ನು ಕೆದಕುವ ಅಗತ್ಯವಿಲ್ಲ’ ಎಂದಿದ್ದಾರೆ.

‘ಮಹಾ ವಿಕಾಸ ಅಘಾಡಿ ಸರ್ಕಾರ ಜನರ ಆಕಾಂಕ್ಷೆಗಳ ಬಗ್ಗೆ ಮಾತನಾಡುತ್ತಿದೆ. ಕಾಂಗ್ರೆಸ್‌ ಮತ್ತು ಶಿವಸೇನಾ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದಿರುವುದು ಕೆಲವರಿಗೆ ಸಹ್ಯವಾಗುತ್ತಿಲ್ಲ’ ಎಂದೂ ಹೇಳಿದ್ದಾರೆ.

ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು.

ಕಾಂಗ್ರೆಸ್‌ ತಿರುಗೇಟು: ರಾವುತ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ಹಿಂದುತ್ವ ಸಿದ್ಧಾಂತ ಅನುಸರಿಸುವವರು ಅಂಡಮಾನ್‌ ಜೈಲಿಗೆ ಭೇಟಿ ನೀಡಿ, ಬ್ರಿಟಿಷರ ಬಳಿ ಎಂದೂ ಕ್ಷಮೆ ಯಾಚಿಸದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನೂ ಅರ್ಥೈಸಿಕೊಳ್ಳಬೇಕು’ ಎಂದಿದೆ.

‘ಬಿ. ಆರ್‌. ಅಂಬೇಡ್ಕರ್‌ ಅವರನ್ನು ‘ಮತಾಂಧ’ ಎಂದೂ ಬೌದ್ಧರನ್ನು ‘ರಾಷ್ಟ್ರದ್ರೋಹಿ’ಗಳು ಎಂದಿರುವ ಸಾವರ್ಕರ್‌ ಹೇಳಿಕೆಗಳನ್ನು ಕಡೆಗಣಿಸಿ, ಬಿಜೆಪಿ ಅವರಿಗೆ ಭಾರತ ರತ್ನ ನೀಡಬಹುದು’  ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ವಕ್ತಾರ ಸಚಿನ್‌ ಸಾವಂತ್‌ ಹೇಳಿದ್ದಾರೆ.

ವ್ಯಕ್ತಿಯಲ್ಲ ವಿಚಾರಧಾರೆ: ‘ವಿ.ಡಿ. ಸಾವರ್ಕರ್‌ ಕೇವಲ ವ್ಯಕ್ತಿಯಲ್ಲ, ವಿಚಾರಧಾರೆ. ಈ ವಿಚಾರಧಾರೆ ಎಂದಿಗೂ ಪ್ರಸ್ತುತತೆ ಕಳೆದುಕೊಳ್ಳುವುದಿಲ್ಲ’ ಎಂದು ಮಹಾರಾಷ್ಟ್ರದ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು