ಭಾನುವಾರ, ಜನವರಿ 19, 2020
20 °C

ಭಾರತ ವಿರೋಧಿ ಘೋಷಣೆ ಕೂಗಿದರೆ ಜೈಲು: ಅಮಿತ್‌ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್: ಭಾರತ ವಿರೋಧಿ ಘೋಷಣೆ ಕೂಗುವವರನ್ನು ಜೈಲಿಗೆ ಅಟ್ಟಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಇಲ್ಲಿ ಹೇಳಿದರು.

ಜಬಲ್‌ಪುರದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರಂತಹ ಮುಖಂಡರು ದೇಶ ವಿರೋಧಿ ಘೋಷಣೆಗಳನ್ನು ಬೆಂಬಲಿಸಿರಬಹುದು. ಆದರೆ, ನಾವು ಇಂತಹ ವಿದ್ಯಮಾನಗಳಿಗೆ ಅವಕಾಶ ನೀಡುವುದಿಲ್ಲ’ ಎಂದರು

ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ಪ್ರಸ್ತಾಪಿಸಿದ ಶಾ, ‘ದೇಶವನ್ನು ವಿಭಜಿಸುವುದಾಗಿ ಜೆಎನ್‌ಯುನ ಕೆಲವು ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದ್ದಾರೆ. ಇಂಥವರನ್ನು ಜೈಲಿಗೆ ಕಳುಹಿಸಬೇಕೋ–ಬೇಡವೋ’ ಎಂದು ರ‍್ಯಾಲಿಯಲ್ಲಿ ಪಾಲ್ಗೊಂಡವರನ್ನು ಪ್ರಶ್ನಿಸಿದರು.

‘ಸಿಎಎ ಬೆಂಬಲಿಸಿ ಘೋಷಣೆಗಳನ್ನು ಕೂಗಿ’ ಎಂದು ಜನರಿಗೆ ಹೇಳಿದ ಶಾ, ‘ಈ ಕಾಯ್ದೆಯನ್ನು ವಿರೋಧಿಸುವ ರಾಹುಲ್‌ ಗಾಂಧಿ, ಪ‍್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನಿಮ್ಮ ಘೋಷಣೆ ತಲುಪುವಷ್ಟು ಎತ್ತರದ ಧ್ವನಿಯಲ್ಲಿ ಘೋಷಣೆ ಹಾಕಿ’ ಎಂದು ಉತ್ತೇಜಿಸಿದರು.

‘ಕಾಂಗ್ರೆಸ್ಸಿಗರೇ ಇಲ್ಲಿ ಕೇಳಿ, ನಿಮಗೆ ಎಷ್ಟು ಸಾಧ್ಯವೋ ಅಲ್ಲಿಯ ತನಕ ಸಿಎಎ ವಿರೋಧಿಸಿ. ಆದರೆ, ತುಳಿತಕ್ಕೆ ಒಳಗಾಗಿರುವ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ತನಕ ನಮ್ಮ ಸರ್ಕಾರ ವಿರಮಿಸುವುದಿಲ್ಲ. ಯಾರೂ ನಮ್ಮನ್ನು ತಡೆಯಲಾಗದು’ ಎಂದು ಗುಡುಗಿದರು.

ಬೆಂಬಲ: ದೇಶ ವಿಭಜನೆಗೊಂಡಾಗ 1947ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸಿಖ್‌ ಕುಟುಂಬಗಳು ಅಮಿತ್‌ ಶಾ ಅವರನ್ನು ಭೇಟಿಯಾಗಿ ಸಿಎಎ ಬೆಂಬಲಿಸುವುದಾಗಿ ಪ್ರತಿಜ್ಞೆ ಮಾಡಿದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು