ಮಂಗಳವಾರ, ಅಕ್ಟೋಬರ್ 22, 2019
25 °C
ಸರ್ದಾರ್ ಸರೋವರ ಭರ್ತಿ ಮಾಡಿದ್ದಕ್ಕೆ ಮೇಧಾ ಪಾಟ್ಕರ್ ಆಕ್ರೋಶ

ಪ್ರಧಾನಿ ಆಗಮನಕ್ಕೆ ಸರ್ದಾರ್‌ ಸರೋವರ ಭರ್ತಿ: ಮೋದಿಗಾಗಿ ಸಾವಿರಾರು ಜನರ ಮುಳುಗಡೆ

Published:
Updated:
Prajavani

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಸಲುವಾಗಿ ಸರ್ದಾರ್ ಸರೋವರವನ್ನು ಭರ್ತಿ ಮಾಡಲಾಗಿದೆ. ಸರ್ದಾರ್ ಸರೋವರದ ಹಿನ್ನೀರಿನಿಂದಾಗಿ ನಿರಾಶ್ರಿತರಾದವರ ಗೋಳು ಈ ಸಂಭ್ರಮದಲ್ಲಿ ಮೂಲೆಗುಂಪಾಗಿದೆ ಎಂದು ನರ್ಮದಾ ಬಚಾವೋ ಆಂದೋಲನದ ಮುಂದಾಳು ಮೇಧಾ ‍ಪಾಟ್ಕರ್ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 17ರಂದು ಸರ್ದಾರ್ ಸರೋವರದ ತಟದಲ್ಲಿರುವ ಕೇವಡಿಯಾದಲ್ಲಿ ಆಚರಿಸಲಾಗಿತ್ತು.

‘ಮೋದಿ ಅವರ ಜನ್ಮದಿನಾಚರಣೆ ಸಲುವಾಗಿಯೇ ಸರ್ದಾರ್ ಸರೋವರವನ್ನು ಭರ್ತಿ ಮಾಡಲಾಗಿದೆ. ಸರ್ದಾರ್ ಸರೋವರದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಮಧ್ಯಪ್ರದೇಶದ ಜನರಿಗೆ ಪುನರ್ವಸತಿ ಕಲ್ಪಿಸದಾ ಹೊರತು ಸರೋವರವನ್ನು ಭರ್ತಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ಆದೇಶವನ್ನು ಕಡೆಗಣಿಸಿ, ಜಲಾಶಯವನ್ನು ಭರ್ತಿ ಮಾಡಲಾಗಿದೆ’ ಎಂದು ಮೇಧಾ ಪಾಟ್ಕರ್ ಆರೋಪಿಸಿದ್ದಾರೆ.

‘ಸರ್ದಾರ್ ಸರೋವರ ಎನ್ನುವುದು ಕೇವಲ ಒಂದು ಅಣೆಕಟ್ಟೆಯಲ್ಲ. ಅದರ ಹಿನ್ನೀರು ಮಧ್ಯಪ್ರದೇಶದಲ್ಲಿ 250 ಕಿ.ಮೀ.ನಷ್ಟು ಹಿಂದಕ್ಕೆ ಬಂದಿದೆ. ನೂರಾರು ಗ್ರಾಮಗಳು ಮುಳುಗಡೆಯಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಅದರಲ್ಲಿ ಸಾವಿರಾರು ಜನರಿಗೆ ಇನ್ನೂ ಪುನರ್ವಸತಿ ಕಲ್ಪಿಸಿಲ್ಲ. ಈ ಜನರನ್ನು ಒಮ್ಮೆಯೂ ಮಾತನಾಡಿಸುವ ವ್ಯವದಾನವನ್ನು ಪ್ರಧಾನಿ ಮೋದಿ ತೋರಿಸಿಲ್ಲ’ ಎಂದು ಮೇಧಾ ಅವರು ಟ್ವೀಟ್‌ ಮಾಡಿದ್ದಾರೆ.

‘ಈ ಜನರಿಗೆ ಪುನರ್ವಸತಿ ಕಲ್ಪಿಸಲು ಗುಜರಾತ್ ಸರ್ಕಾರ ₹ 1,857 ಕೋಟಿ ಕೊಡಬೇಕಿತ್ತು. ಗುಜರಾತ್ ಈವರೆಗೂ ಆ ಹಣ ನೀಡಿಲ್ಲ ಎಂದು ಮಧ್ಯಪ್ರದೇಶದ ಈಗಿನ ಸರ್ಕಾರ ಹೇಳುತ್ತಿದೆ. ಎಲ್ಲರಿಗೂ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಹಿಂದಿನ ಬಿಜೆಪಿ ಸರ್ಕಾರ ವರದಿ ಸಲ್ಲಿಸಿದೆ. ಈ ಮೂಲಕ ಈ ಜನರ ಪುನರ್ವಸತಿಯ ಹಕ್ಕನ್ನೇ ಕಸಿದುಕೊಂಡಂತಾಗಿದೆ’ ಎಂದು ಅವರ ಆರೋಪಿಸಿದ್ದಾರೆ.

ಸರ್ಕಾರದ್ದೂ ಇದೇ ಆರೋಪ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಿಸಲೆಂದೇ ಸರ್ದಾರ್ ಸರೋವರವನ್ನು ಭರ್ತಿ ಮಾಡಲಾಗಿದೆ. ಜಲಾಶಯಗಳು ನಮ್ಮ ನಿಯಂತ್ರಣದಲ್ಲಿ ಇಲ್ಲ. ಮಧ್ಯಪ್ರದೇಶದ ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಗುಜರಾತ್‌ನಲ್ಲಿನ ಸರ್ದಾರ್ ಸರೋವರವನ್ನು ಭರ್ತಿ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ಬಾಲಾ ಬಚ್ಚನ್ ಆರೋಪಿಸಿದ್ದಾರೆ. 

ನಮರ್ದಾ ಕಣಿವೆಯ ಸರ್ದಾರ್ ಸರೋವರವನ್ನು ಹೊರತುಪಡಿಸಿ ಉಳಿದ ಐದು ಬೃಹತ್ ಜಲಾಶಯಗಳು ಮಧ್ಯಪ್ರದೇಶದಲ್ಲಿ ಇವೆ. ಈ ಎಲ್ಲಾ ಜಲಾಶಯಗಳು ‘ನರ್ಮದಾ ನಿಯಂತ್ರಣ ಪ್ರಾಧಿಕಾರ’ದ ಅಧೀನದಲ್ಲಿ ಇವೆ. ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯು ಈ ಪ್ರಾಧಿಕಾರದ ಮುಖ್ಯಸ್ಥರಾಗಿರುತ್ತಾರೆ. ಈ ಜಲಾಶಯಗಳ ಮೇಲೆ ಮಧ್ಯಪ್ರದೇಶಕ್ಕೆ ಯಾವುದೇ ನಿಯಂತ್ರಣವಿಲ್ಲ.

‘ಮೌನ ಮುರಿಯಿರಿ, ಗೇಟು ತೆರೆಯಿರಿ’

ಸರ್ದಾರ್ ಸರೋವರವನ್ನು ಭರ್ತಿ ಮಾಡಿರುವುದರ ವಿರುದ್ಧ ಮುಳುಗಡೆ ಗ್ರಾಮಗಳ ನಿವಾಸಿಗಳು ‘ಮೌನ ಮುರಿಯಿರಿ, ಗೇಟು ತೆರೆಯಿರಿ’ ಎಂಬ ಅಭಿಯಾನವನ್ನು ಟ್ವಿಟರ್‌ನಲ್ಲಿ ಆರಂಭಿಸಿದ್ದಾರೆ. ಸೆಪ್ಟೆಂಬರ್ 1ರಿಂದಲೇ ಈ ಅಭಿಯಾನ ಆರಂಭವಾಗಿದೆ.

ನಿರಾಶ್ರಿತರು ಮುಳುಗಡೆಯಾಗಿರುವ ತಮ್ಮ ಮನೆ–ಊರುಗಳ ಚಿತ್ರ ಮತ್ತು ವಿಡಿಯೊಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಅಭಿಯಾನವಿದು. ಅಭಿಯಾನ ಆರಂಭವಾದಾಗಿನಿಂದ ಸಾವಿರಾರು ಜನರು ಇಂತಹ ಚಿತ್ರ ಮತ್ತು ವಿಡಿಯೊಗಳನ್ನು ಟ್ವೀಟ್‌ ಮಾಡುತ್ತಿದ್ದಾರೆ.

***

ಸರ್ದಾರ್ ಸರೋವರ ಎರಡು ರಾಜ್ಯಗಳ ಯೋಜನೆ ಆಗಿದ್ದರೂ, ಮಧ್ಯಪ್ರದೇಶದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದು ಏಕೆ? ಹಿಂದಿನ ಬಿಜೆಪಿ ಸರ್ಕಾರ ಮೋದಿಗೆ ಶರಣಾಗಿತ್ತು. 

- ಮೇಧಾ ಪಾಟ್ಕರ್, ನರ್ಮದಾ ಬಚಾವೋ ಆಂದೋಲನದ ಮುಂದಾಳು

***

ಸರ್ದಾರ್ ಸರೋವರದ ಹಿನ್ನೀರಿನಲ್ಲಿ ಮುಳುಗಡೆಯಾಗಿ, ನಿರಾಶ್ರಿತರಾದ ಜನರ ಗೋಳು ಕೇಳಲು ಪ್ರಧಾನಿ ಮೋದಿ ಅವರು ಸ್ವಲ್ಪ ಗಮನ ನೀಡಿದ್ದರೂ ಚೆನ್ನಾಗಿರುತ್ತಿತ್ತು.

- ಬಾಲಾ ಬಚ್ಚನ್, ಮಧ್ಯಪ್ರದೇಶ ಗೃಹ ಸಚಿವ

***

ರಾಜ್ಯ ಸರ್ಕಾರವು ಸೂಕ್ತ ಸಮಯದಲ್ಲಿ ಗಾಂಧಿ ಸಾಗರದಿಂದ ನೀರನ್ನು ಹೊರಬಿಡಲಿಲ್ಲ. ಇದರಿಂದ ಪ್ರವಾಹ ಸ್ಥಿತಿ ಉಂಟಾಗಿದೆ. ರಾಜ್ಯದ ಆಡಳಿತ ಯಂತ್ರ ನಿದ್ರಿಸುತ್ತಿತ್ತು. 

- ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)